Advertisement

ದೋಷಮುಕ್ತ ಮತದಾರರ ಪಟ್ಟಿ ಸಿದ್ಧಪಡಿಸಿ

11:22 AM Nov 29, 2022 | Team Udayavani |

ಬಾಗಲಕೋಟೆ: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆದಿದ್ದು, ದೋಷಮುಕ್ತ ಹಾಗೂ ಅರ್ಹ ಮತದಾರರು ಮತದಾನ ಪಟ್ಟಿಯಿಂದ ಹೊರಗುಳಿಯದಂತೆ ಕ್ರಮವಹಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಮತದಾರರ ಪಟ್ಟಿ ವೀಕ್ಷಕ ಶಿವಯೋಗಿ ಕಳಸದ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಿ.8ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಈ ವೇಳೆಯಲ್ಲಿ ಪ್ರತಿಯೊಬ್ಬ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ತೆರಳಿ ಮತದಾರರ ಪಟ್ಟಿಯ ಪರಿಶೀಲನೆ ಕಾರ್ಯ ಕೈಗೊಂಡು ದೋಷ ಮುಕ್ತ ಹಾಗೂ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಕ್ರಮವಹಿಸಲು ಸೂಚಿಸಿದರು.

ಜಿಲ್ಲೆಯಲ್ಲಿ 4,09,492 ಕುಟುಂಬಗಳ ಪೈಕಿ ಈವರೆಗೆ 2,17,587 ಕುಟುಂಬಗಳ ಸಮೀಕ್ಷೆ ಮಾಡಲಾಗಿದ್ದು, ಪ್ರತಿಶತ 53.14 ಪ್ರಗತಿ ಸಾಧಿಸಲಾಗಿದೆ. ನಿಗದಿತ ಅವಧಿಯಲ್ಲಿ ಶೇ.100 ಪ್ರಗತಿ ಸಾಧಿಸಲು ಕ್ರಮವಹಿಸಲು ಸೂಚಿಸಿದರು.

ನ.9ರಂದು ಕರುಡು ಮತದಾರರ ಪಟ್ಟಿಗಳನ್ನು ಪ್ರಕಟಿಸಲಾಗಿದ್ದು, ಒಟ್ಟು 14,86,196 ಮತದಾರರಿದ್ದು,ಅದರಲ್ಲಿ 7,42,124 ಪುರುಷ ಮತ್ತು 7,44,072 ಮಹಿಳಾ ಮತದಾರರು ಇರುತ್ತಾರೆ. ಜನಗಣತಿ ಪ್ರಕಾರ 1000 ಪುರುಷರಿಗೆ 989 ಮಹಿಳೆಯರು ಇದ್ದಾರೆ. ಮತದಾರರಲ್ಲಿ 1000 ಪುರುಷ ಮತದಾರರಿಗೆ 1003 ಮಹಿಳಾ ಮತದಾರರು ಇದ್ದಾರೆ. ಜಿಲ್ಲೆಯ ಇಪಿ ರೇಶಿಯೋ ಶೇ.66.24 ಇದೆ. ಮತದಾರರ ಲಿಂಗಾನುಪಾತ ಹೆಚ್ಚಾಗಿರುವ ಮುಧೋಳ, ಬಾಗಲಕೋಟೆ ಹಾಗೂ ಹುನಗುಂದ ವಿಧಾನಸಭಾ ಕ್ಷೇತ್ರಗಳಲ್ಲಿ ತಹಶೀಲ್ದಾರ್‌ಗೆ ಹೆಚ್ಚಾಗಿ ಮಹಿಳಾ ಮತದಾರರ ಬಗ್ಗೆ ಪರಿಶೀಲಿಸಿ ಸೇರ್ಪಡೆ ಮಾಡಲು ಹಾಗೂ ಶೂನ್ಯ ಸೇರ್ಪಡೆ, ಶೂನ್ಯ ತೆಗೆದು ಹಾಕುವ ಅರ್ಜಿ ಸ್ವೀಕೃತಿ ಆಗದಿರುವ ಮತಗಟ್ಟೆಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ನೋಂದಣಿ ಬಗ್ಗೆ ತಹಶೀಲ್ದಾರರು ಕ್ರಮ ವಹಿಸಲು ಸೂಚಿಸಿದರು.

Advertisement

ಯುವ ವಯಸ್ಸಿನ ಮತದಾರ ನೋಂದಣಿ ತೀರ ಕಡಿಮೆ ಆಗಿದ್ದು, ಲಿಂಗಾನುಪಾತದಲ್ಲಿ ವ್ಯತ್ಯಾಸವಿದೆ. ಅವುಗಳನ್ನು ಸರಿದೂಗಿಸುವ ಬಗ್ಗೆ ಹಾಗೂ ಪ್ರತಿ ಕಾಲೇಜು ಮಟ್ಟದಲ್ಲಿ ಜಾಗೃತಿ ಮೂಡಿಸಿ ನೋಂದಣಿ ಖಚಿತಪಡಿಸಿಕೊಂಡು ವಿಎಚ್‌ ಆ್ಯಪ್‌ ಮೂಲಕ ನೋಂದಣಿಗೆ ಕ್ರಮವಹಿಸಲು ಸೂಚಿಸಿದ ಅವರು, ತಹಶೀಲ್ದಾರರು ಅಲೇಮಾರಿ, ದೇವದಾಸಿಯರು, ತೃತೀಯ ಲಿಂಗಿಗಳು, ಅಂಗವಿಕಲ ಮತದಾರರ ನೋಂದಣಿ ಕುರಿತು ಹೆಚ್ಚಾಗಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳುವ ಮೂಲಕ ಕಡ್ಡಾಯವಾಗಿ ತಂತ್ರಾಂಶ ಮೂಲಕ ಅರ್ಜಿ ಸಲ್ಲಿಸುವಂತಾಗಬೇಕು ಎಂದರು.

ಅರ್ಹತಾ ದಿನಾಂಕ ಈಗ ಪ್ರತಿ ವರ್ಷ 1ನೇ ಜನವರಿ, 1ನೇ ಏಪ್ರಿಲ್‌, 1ನೇ ಜುಲೈ ಹಾಗೂ 1ನೇ ಅಕ್ಟೋಬರ್‌ ಇದ್ದು, ಆ ದಿನಾಂಕಕ್ಕೆ 18 ವರ್ಷ ತುಂಬುವ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ತಿಳಿಸಿದರು.

ನ.27ರಂದು ಹುನಗುಂದ ತಾಲೂಕಿನ ಮತಗಟ್ಟೆಗಳಿಗೆ ಭೇಟಿ ನೀಡಿ, ಬಿಎಲ್‌ ಒಗಳು ಮಾಡುತ್ತಿರುವ ಕಾರ್ಯದ ಪರಿಶೀಲನೆ ಮಾಡಲಾಗಿದೆ. ನ.28ರಂದು ತಹಶೀಲ್ದಾರ್‌ ಕಾರ್ಯಾಲಯ ಬಾಗಲಕೋಟೆ ಚುನಾವಣೆ ವಿಭಾಗದ ಕಾರ್ಯ ಪರಿಶೀಲಿಸಿದ್ದು, ಅರ್ಜಿ ಸಲ್ಲಿಸಿದ್ದ ಪ್ರತಿ ಮತದಾರರ ಹೆಸರು ಸೇರ್ಪಡೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಸರಿಯಾದ ದಾಖಲೆ ಇಡಲು ಸೂಚಿಸಿದರು.

ನ.9ರಂದು ಪ್ರಸಿದ್ಧಿ ಪಡಿಸಿದ ಕರುಡು ಮತದಾರರ ಪಟ್ಟಿಯ ಪ್ರತಿ ರಾಜಕೀಯ ಪಕ್ಷಗಳಿಗೆ ನೀಡಿದ ಬಗ್ಗೆ ಪರಿಶೀಲಿಸಿದರು. ಎಲ್ಲ ಮತದಾರರ ನೋಂದಣಿ ಅಧಿಕಾರಿಗಳು ಮರಣ ಹೊಂದಿದ ಮತದಾರರನ್ನು ಗುರುತಿಸಿ ದಾಖಲೆ ಪರಿಶೀಲಿಸಿಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ಕಡಿಮೆಗೊಳಿಸುವ ಬಗ್ಗೆ ನಿಯಮಾನುಸಾರ ಕ್ರಮವಹಿಸಲು ಹಾಗೂ ಪ್ರತಿ ಮನೆ-ಮನೆಗೆ ತೆರಳಿ ಸಮೀಕ್ಷೆ ಕಾರ್ಯ ನಿಗತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next