ನೃತ್ಯ ನಿರ್ದೇಶಕ ಮತ್ತು ನಿರ್ದೇಶಕ ಎ. ಹರ್ಷ ಅವರ ಗರಡಿಯಲ್ಲಿ ಪಳಗಿದ್ದ ಮುರುಗೇಶ್ ಇದೀಗ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ ಹರ್ಷ ನಿರ್ದೇಶನದ “ಚಿಂಗಾರಿ’, “ಭಜರಂಗಿ’, “ಅಂಜನಿಪುತ್ರ’ ಮುಂತಾದ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮುರುಗೇಶ್, ಇದೀಗ “ಅಗ್ರಸೇನ’ ಎಂಬ ಚಿತ್ರ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ.
ಈ ಚಿತ್ರದ ಮೂಲಕ ಹೆತ್ವಿಕ್ ಎಂಬ ಹೊಸ ನಟನನ್ನು ಅವರು ಪರಿಚಯಿಸುತ್ತಿದ್ದು, ಆಗಸ್ಟ್ 15ರಂದು ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. “ಅಗ್ರಸೇನ’ ಎಂಬ ಹೆಸರು ಕೇಳುತ್ತಿದ್ದಂತೆಯೇ ಇದೊಂದು ಪಕ್ಕಾ ಆ್ಯಕ್ಷನ್ ಚಿತ್ರ ಎಂದನಿಸಬಹುದು. ಆದರೆ, ಇಲ್ಲಿ ಆ್ಯಕ್ಷನ್ ಜೊತೆಗೆ ಸಾಕಷ್ಟು ಸೆಂಟಿಮೆಂಟ್ ಇದೆಯಂತೆ.
ಪ್ರಮುಖವಾಗಿ ಇಲ್ಲಿ ಅಪ್ಪ-ಮಗನ ಸಂಬಂಧದ ಕಥೆ ಇದೆಯಂತೆ. “ಇಲ್ಲಿ ನಾಯಕ ಒಬ್ಬ ಸೈನ್ಯಾಧಿಪತಿ ಇದ್ದಂತೆ. ಅವನು ಒಂದು ಬಾರ್ಡರ್ ಹಾಕಿಕೊಂಡು ತನ್ನ ಜೀವನವನ್ನು ನಡೆಸುತ್ತಿರುತ್ತಾರೆ. ಒಂದು ಘಟನೆಯಿಂದಾಗಿ, ಅವನು ಆ ಚೌಕಟ್ಟನ್ನು ದಾಟಬೇಕಾಗುತ್ತದೆ. ಹಾಗೆ ದಾಟಿದಾಗ ಅವನು ಏನೆಲ್ಲಾ ಎದುರಿಸುತ್ತಾನೆ ಮತ್ತು ಹೇಗೆ ಬದುಕುತ್ತಾನೆ ಎನ್ನುವುದೇ ಚಿತ್ರದ ಕಥೆ.
ಇಲ್ಲಿ ಹೆತ್ವಿಕ್ ಮಗನಾಗಿ ಕಾಣಿಸಿಕೊಂಡರೆ, ಅಪ್ಪನ ಪಾತ್ರಕ್ಕೆ ಸಾಯಿಕುಮಾರ್ ಅವರನ್ನು ಕರೆತರುವ ಯೋಚನೆ ಇದೆ. ಇನ್ನು ಪ್ರಿಯಾಂಕಾ ಉಪೇಂದ್ರ ಅವರನ್ನೂ ಒಂದು ಪ್ರಮುಖ ಪಾತ್ರಕ್ಕೆ ಸಂಪರ್ಕಿಸುವ ಯೋಚನೆ ಇದೆ’ ಎನ್ನುತ್ತಾರೆ ಮುರುಗೇಶ್. ಇನ್ನು ಹೆತ್ವಿಕ್ ಅವರ ಮೂಲ ಹೆಸರು ಕೃಷ್ಣಮೂರ್ತಿ ಅಂತ. ಅವರ ಗುರುಗಳು ಹೇಳಿದ ಕಾರಣಕ್ಕೆ ಹೆಸರು ಬದಲಾಯಿಸಿಕೊಂಡು, ಹೆತ್ವಿಕ್ ಕೃಷ್ಣ ಆಗಿದ್ದಾರೆ.
ಈ ಹೆತ್ವಿಕ್ ಎಂದರೇನು ಎಂದರೆ, ಶಿವ ಎಂಬ ಉತ್ತರ ಅವರಿಂದ ಬರುತ್ತದೆ. ಹಿಂದೂ ಪುರಾಣಗಳ ಪ್ರಕಾರ ಶಿವನ ಇನ್ನೊಂದು ಹೆಸರು ಹೆತ್ವಿಕ್. ಹಾಗಾಗಿ ಆ ಹೆಸರನ್ನು ಇಟ್ಟುಕೊಂಡಿದ್ದಾರೆ. ಜ್ಯೋತಿಷ್ಯದ ಬಗ್ಗೆ ಸ್ವಲ್ಪ ಜಾಸ್ತಿಯೇ ನಂಬಿಕೆ ಇಟ್ಟುಕೊಂಡಂತಿರುವ ಹೆತ್ವಿಕ್‌ಗೆ ನಿರ್ದೇಶಕರು ಹೇಳಿದಾಗ ಅವರು ತಕ್ಷಣವೇ ಒಪ್ಪಿಕೊಂಡರಂತೆ. ಅದಕ್ಕೆ ಕಾರಣ, ಅವರು ಕಥೆ ಹೇಳಿದ ವಾತಾವರಣ ಮತ್ತು ಸಮಯ.
ಅಭಿಜಿನ್ ಮುಹರ್ತದಲ್ಲಿ ಕಥೆ ಹೇಳಿದ್ದರಿಂದ ಹೆತ್ವಿಕ್‌ಗೆ ಇಷ್ಟವಾಗಿ, ಅವರು ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಹಳ್ಳಿಯ ಮುಖಂಡನಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. “ಹೆಸರೇ ಹೇಳುವಂತೆ ನಾನಿಲ್ಲ ಹಳ್ಳಿಯ ಮುಖಂಡನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ನಾನು ನನ್ನ ಜನರನ್ನ ಹೇಗೆ ರಕ್ಷಿಸುತ್ತೀನಿ’ ಎನ್ನುವುದು ಚಿತ್ರದ ಕಥೆ.
“ಅಗ್ರಸೇನ’ ಚಿತ್ರವನ್ನು ಜಯರಾಮ್ ರೆಡ್ಡಿ ಎನ್ನುವವರು ವೈಷ್ಣವಿ ಸಿನಿಮಾಸ್‌ನಡಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಕರಣ್ ಮಹದೇವ್ ಸಂಗೀತ ಸಂಯೋಜಿಸಿದರೆ, ವಸಂತ್ ಕುಮಾರ್ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಗೌರವ್ ಗಂಗಲು ಎನ್ನುವವರು ಸಹ ಚಿತ್ರದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.