Advertisement

ನೆರೆ-ಅತಿವೃಷ್ಟಿ ಹಾನಿ ಅಂದಾಜು ಪಟ್ಟಿ ತಯಾರಿಸಿ

04:40 PM Oct 07, 2020 | Suhan S |

ಯಾದಗಿರಿ: ಸೆಪ್ಟೆಂಬರ್‌ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ಸಾರ್ವಜನಿಕ ಆಸ್ತಿ-ಪಾಸ್ತಿ ಸೇರಿದಂತೆ ಬೆಳೆ, ಮನೆ ಹಾಗೂ ಜೀವ ಹಾನಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾನಿ ಪ್ರಮಾಣಕ್ಕೆ ಅನುಗುಣವಾಗಿ ಪರಿಹಾರ ವಿತರಣಾ ಅನುದಾನದ ಬೇಡಿಕೆಯ ಅಂದಾಜು ಪಟ್ಟಿ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಸೂಚಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ಬೆಳೆ, ಮನೆ ಹಾಗೂ ರಸ್ತೆ ಹಾನಿ ಕುರಿತು ಮಂಗಳವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಯಾದಗಿರಿ ತಾಲೂಕಿನಲ್ಲಿ 2 ಎತ್ತುಗಳು 11 ಮೇಕೆಗಳು ಸೇರಿ 13 ಪ್ರಾಣಿಗಳ ಹಾನಿ ಸಂಭವಿಸಿದೆ. ಶಹಾಪುರ ತಾಲೂಕಿನ ಒಟ್ಟು 71 ಫಲಾನುಭವಿಗಳ ಮನೆಗೆ ನೀರು ನುಗ್ಗಿದ್ದರಿಂದ ಸಂತ್ರಸ್ತರಿಗೆ ಬಟ್ಟೆ ಹಾಗೂ ಅಡುಗೆ ಪಾತ್ರೆಗಳ ಖರೀದಿಗೆ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ತುರ್ತು ಪರಿಹಾರ ನೀಡಲಾಗಿದೆ ಎಂದು ತಹಶೀಲ್ದಾರರು ಮಾಹಿತಿ ನೀಡಿದರು.

ಸುರಪುರ ತಾಲೂಕಿನ 12 ಪಕ್ಕಾ ಮನೆಗಳು ಶೇ.75ಕ್ಕಿಂತ ಹೆಚ್ಚು, ಯಾದಗಿರಿ 81, ಶಹಾಪುರ 696, ಸುರಪುರ 500, ಗುರುಮಠಕಲ್‌ 83, ವಡಗೇರಾ 236 ಹಾಗೂ ಹುಣಸಗಿ 775 ಸೇರಿ ಒಟ್ಟು 2371 ಪಕ್ಕಾ ಹಾಗೂ ಕಚ್ಚಾ ಮನೆಗಳು ಶೇ.15ರಿಂದ 25ರಷ್ಟು ಹಾನಿಯಾಗಿದ್ದು, ಎನ್‌ಡಿಆರ್‌ಎಫ್‌ ನಿಯಮಾವಳಿ ಪ್ರಕಾರ ಪರಿಹಾರ ನೀಡಲು ಕ್ರಮವಹಿಸಲಾಗಿದೆ ಎಂದು ತಹಶೀಲ್ದಾರರು ಸಭೆಯಲ್ಲಿ ಮಾಹಿತಿ ನೀಡಿದರು.

ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ ಸಂಭವಿಸಿದ ಮನೆ ಹಾನಿ ಕುರಿತು ಗ್ರಾಪಂ ಅಧಿಕಾರಿಗಳಿಗೆ ನಿಖರ ಮಾಹಿತಿ ಇರುತ್ತದೆ. ಮನೆ ಹಾನಿ ಸಮೀಕ್ಷೆಯಲ್ಲಿ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಎಂಜಿನಿಯರ್‌ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಭಾಗಶಃ ಹಾನಿ ಕುರಿತು ವರದಿ ಮಾಡಿ ದೃಢೀಕರಣ ನೀಡುವಂತೆ ಸೂಚಿಸಬೇಕು. ಮಳೆ ಹಾನಿ ಕುರಿತು ಎಂಜಿನಿಯರ್‌ ಅವರಿಂದ ಹಾನಿ ಪ್ರಮಾಣದ ವರದಿ ಮಾಡಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಹೇಳಿದರು.

Advertisement

ಜಿಲ್ಲೆಯಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ ಸುರಿದ ಭಾರೀ ಮಳೆಗೆ 18,562 ಹೆಕ್ಟೇರ್‌ ಪ್ರದೇಶದಲ್ಲಿ ಹಾನಿಯಾಗಿದ್ದು, ಶೇ.33ಕ್ಕೂ ಹೆಚ್ಚು ಬೆಳೆ ಹಾನಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್‌. ಮಾಹಿತಿ ನೀಡಿದರು.

ಲೋಕೋಪಯೋಗಿ ಇಲಾಖೆಯ 56ಕಾಮಗಾರಿಗಳಿಗೆ ಮಳೆಯಿಂದ ಹಾನಿಯಾಗಿದ್ದು, 38 ಕೋಟಿ ರೂ. ಹಾನಿ ಸಂಭವಿಸಿದೆ. ಪ್ರಸ್ತುತ 6 ಕೋಟಿ ರೂ. ಕ್ರಿಯಾಯೋಜನೆ ತಯಾರಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಕಾಮಗಾರಿಗಳ ಕ್ರಿಯಾಯೋಜನೆ ಅಂದಾಜು ಪಟ್ಟಿ ಶೀಘ್ರ ತಯಾರಿಸಬೇಕು ಎಂದು ನಗರಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೇರಿದಂತೆ ತಹಶೀಲ್ದಾರರು ಇತರೆ ಅಧಿಕಾರಿಗಳು ಇದ್ದರು.

ಮಳೆಯಿಂದ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಈ ಕುರಿತುಅಧಿಕಾರಿಗಳು ಬೆಳೆ, ಮನೆ ಹಾಗೂ ಜೀವ ಹಾನಿಗೆ ಸಂಬಂಧಿಸಿದಂತೆ ಕೂಲಂಕಷವಾಗಿ ಪರೀಕ್ಷಿಸಿ ಯಾರೊಬ್ಬರಿಗೂ ತೊಂದರೆ, ಮೋಸವಾಗದಂತೆ ಹಾನಿ ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸಬೇಕು. – ಡಾ| ರಾಗಪ್ರಿಯಾ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next