Advertisement

ದೊಡ್ಡ ಕೆರೆ ನೀರು ಪೂರೈಕೆ ಯೋಜನೆ ಸಿದ್ಧಪಡಿಸಿ

02:42 PM May 11, 2019 | Team Udayavani |

ಗುತ್ತಲ: ಪಟ್ಟಣಕ್ಕೆ ದೊಡ್ಡ ಕೆರೆಯಿಂದ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸುವಂತೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ ನೀಡಿದರು.

Advertisement

ಶುಕ್ರವಾರ ಪಟ್ಟಣಕ್ಕೆ ದಿಢೀರ್‌ ಭೇಟಿ ನೀಡಿದ ಅವರು, ಗುತ್ತಲ ಪಟ್ಟಣದಲ್ಲಿನ ಕುಡಿಯುವ ನೀರಿನ ಸಮಸ್ಯೆ ಶ್ವಾಶತವಾಗಿ ಪರಿಹರಿಸುವ ನಿಟ್ಟಿನಲ್ಲಿ ಬೇಸಿಗೆಯಲ್ಲಿ ದೊಡ್ಡ ಕೆರೆ ಮೂಲಕ ನೀರು ಪೂರೈಸಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಜನರ ಹಾಗೂ ಅಧಿಕಾರಿಗಳ ಅಭಿಪ್ರಾಯ ಕೇಳಿ ಕೆರೆಗೆ ಭೇಟಿ ನೀಡಿ, ವೀಕ್ಷಿಸಿ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆರೆ ಮೂಲಕ ಪಟ್ಟಣಕ್ಕೆ ನೀರು ಪೂರೈಸಲು ಕೋಟ್ಯಂತರ ಹಣ ಬೇಕಾಗುತ್ತದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು. ಈ ಯೋಜನೆಗೆ ಅಂದಾಜ 5 ಕೋಟಿ ರೂ. ಹಣ ಬೇಕಾಗುತ್ತದೆ. ಈ ಬಗ್ಗೆ ಯೋಜನೆ ಸಿದ್ಧಪಡಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚರಂಡಿ ಸ್ವಚ್ಛತೆಗೆ ಸೂಚನೆ: ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಮಾಲತೇಶ ನಗರ ಹಾಗೂ ಶಿವನಗರ(ತಾಂಡಾ)ದಲ್ಲಿ ನಗರೋತ್ಥಾನ ಯೋಜನೆಯಲ್ಲಿ ಆಗಿರುವ ಕಾಮಗಾರಿ ಪರಿಶೀಲನೆ ನಡೆಸಿದರು. ಶಿವನಗರದಲ್ಲಿ ಪರಿಶೀಲನೆ ವೇಳೆ ಚರಂಡಿ ಸ್ವಚ್ಛಗೊಳಿಸದಿರುವುದಕ್ಕೆ ಸ್ಥಳದಲ್ಲಿದ್ದ ಮುಖ್ಯಾಧಿಕಾರಿ ಶೋಭಾ ಅವರಿಗೆ ಶೀಘ್ರ ಚರಂಡಿ ಸ್ವಚ್ಛಗೊಳಿಸುವಂತೆ ಸೂಚಿಸಿದರು. ಅಲ್ಲದೇ ವಾರಕ್ಕೊಮ್ಮೆ ಚರಂಡಿ ಸ್ವಚ್ಛ ಮಾಡಿಸುತ್ತೇವೆ ಎನ್ನುತ್ತಿದ್ದಂತೆ ಶಿವನಗರದ ನಿವಾಸಿಗಳು ವಾರಕ್ಕೊಮ್ಮೆ ಅಲ್ಲ; ವರ್ಷಕ್ಕೊಮ್ಮೆ ಗಟಾರ ಸ್ವಚ್ಛ ಮಾಡುತ್ತಾರೆ ಎಂದು ಆರೋಪಿಸಿದಾಗ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಪೌರ ಕಾರ್ಮಿಕ ಅಂಕಿ ಸಂಖ್ಯೆ ಪಡೆದ ಜಿಲ್ಲಾಧಿಕಾರಿ, ನಾಳೆಯಿಂದ ಇಲ್ಲಿನ ಚರಂಡಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಿ ಎಂದು ಮುಖ್ಯಾಧಿಕಾರಿ ಶೋಭಾ ಅವರಿಗೆ ಸೂಚನೆ ನೀಡಿದ ಅವರು, ತಾಂಡಾದಲ್ಲಿನ ನೀರು ಪೂರೈಕೆ ಬಗ್ಗೆ ಸಮರ್ಪಕ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

Advertisement

ಶಿವನಗರದಲ್ಲಿ ಶುಚಿತ್ವದ ಬಗ್ಗೆ ಗಮನ ಹರಿಸಿ, ಆದಷ್ಟು ಬೇಗ ಇಲ್ಲಿರುವ ಕಸ ವಿಲೇವಾರಿ ಮಾಡಿ ಎಂದು ಸೂಚಿಸಿದ ಜಿಲ್ಲಾಧಿಕಾರಿ, ಶಿವನಗರದಲ್ಲಿನ ಬೋರ್‌ವೆಲ್ಗಳ ಮಾಹಿತಿ ಪಡೆದು ಶಿವನಗರ ಬಡಾವಣೆಯೊಂದರಲ್ಲಿನ ಸುಟ್ಟಿರುವ ಬೋರ್‌ವೆಲ್ ಆದಷ್ಟು ಬೇಗ ಸರಿಪಡಿಸುವಂತೆ ಇಂಜಿನಿಯರ್‌ಗಳಿಗೆ ಎಚ್ಚರಿಸಿದರು. ಶಿವನಗರದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟ ನಿಂತು ಎರಡು ವರ್ಷವಾಯಿತು ಎಂಬ ವಿಷಯ ತಿಳಿದು ಅಲ್ಲಿಗೆ ಭೇಟಿ, ನೀಡಿ 10 ದಿನಗಳಲ್ಲಿ ಇದನ್ನು ಪುನಃ ಆರಂಭಿಸಿ ಜನರಿಗೆ ಅನುಕೂಲ ಒದಗಿಸುವಂತೆ ತಿಳಿಸಿದರು.

ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕ ವಾಸಣ್ಣ, ನಗರಾಭಿವೃದ್ಧಿ ಕೋಶದ ಎಇಇ ಕಮ್ಮಾರ, ಪಪಂ ಇಂಜಿನಿಯರ್‌ ಚಲವಾದಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next