Advertisement
ಲೋಕಸಭಾ ಚುನಾವಣೆ ಸಿದ್ಧತೆ ಜತೆಗೆ ಮುಂದಿನ 5 ವರ್ಷಗಳ ಅವಧಿಗೆ ರಾಜ್ಯ ಸರಕಾರದ ಕಾರ್ಯವೈಖರಿ ಹಾಗೂ ಸಚಿವರ ನಡೆ-ನುಡಿ ಹೇಗಿರಬೇಕು ಎಂಬುದರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮುಂದಿನ ವಾರ ಕರೆದಿರುವ ಸಭೆ ಎಲ್ಲರ ಗಮನ ಸೆಳೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದೆ ಬರಿಗೈಯಲ್ಲಿ ಹೋಗುವ ಬದಲಿಗೆ “ಪ್ರಗತಿ ವರದಿ’ ಕೊಂಡೊಯ್ಯುವುದು ಒಳಿತು ಎಂಬ ತೀರ್ಮಾನಕ್ಕೆ ಬಂದಿರುವ ಸಚಿವರು ಈಗ ತಮ್ಮ ಇಲಾಖೆಗಳಲ್ಲಿ 2 ತಿಂಗಳಲ್ಲಿ ಆಗಿರುವ ಅಭಿವೃದ್ಧಿ ಕುರಿತ ವರದಿ ಸಿದ್ಧಪಡಿಸುತ್ತಿದ್ದಾರೆ.
ಸರಕಾರದ ಕಾರ್ಯವೈಖರಿ ಬಗ್ಗೆ ವಿಪಕ್ಷಗಳಾದ ಬಿಜೆಪಿ, ಜೆಡಿಎಸ್‌ನಿಂದ ನಿರಂತರ ದಾಳಿ, ಅದರಲ್ಲೂ ವಿಶೇಷವಾಗಿ ವರ್ಗಾವಣೆ ವಿಷಯ ಇರಿಸಿಕೊಂಡು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾಡಿದ ಗಂಭೀರ ಆರೋಪ ಸರಕಾರದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿದೆ. ಜತೆಗೆ ಕೆಲವು ಸಚಿವರ ವಿವಾದಾತ್ಮಕ ಹೇಳಿಕೆಗಳು ಸಾರ್ವಜನಿಕರಲ್ಲಿ ಸರಕಾರದ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದೆ. ಈ ಮಧ್ಯೆ ಸ್ವಪಕ್ಷೀಯ ಶಾಸಕರೇ ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಿಎಂಗೆ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿ ಕಾಂಗ್ರೆಸ್ ಪಾಳಯದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
Related Articles
Advertisement
ಉಸ್ತುವಾರಿ ಸಚಿವರಿಗೆ ಗುರಿಮುಂಬರುವ ಲೋಕಸಭಾ, ಜಿಲ್ಲಾ ಹಾಗೂ ತಾ.ಪಂ. ಚುನಾವಣೆಯಲ್ಲಿ ಪಕ್ಷ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಹೈಕಮಾಂಡ್ ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನೇ ಹೊಣೆಗಾರರನ್ನಾಗಿ ಮಾಡಲಿದೆ. ಜಿಲ್ಲೆಯಲ್ಲಿ ಪಕ್ಷದ ಸಂಘಟನೆ, ಕಾರ್ಯಕರ್ತರ ಜತೆ ನಿರಂತರ ಸಂಪರ್ಕ-ಸಂಬಂಧ ಇರಿಸಿಕೊಂಡು ಅಭಿವೃದ್ಧಿ ಕೆಲಸಗಳ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸುವುದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಡಳಿತ ಪಕ್ಷದ ಶಾಸಕರ ಜವಾಬ್ದಾರಿ ಆಗಿದೆ ಎಂಬ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ. ಒಂದು ವೇಳೆ ಇದರಲ್ಲಿ ಯಾವುದೇ ಲೋಪಗಳಾದರೂ ಉಸ್ತುವಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಬುಧವಾರ ನಡೆಯಲಿರುವಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಎಂ.ಎನ್. ಗುರುಮೂರ್ತಿ