Advertisement

ವೀರ ಯೋಧರಿಗೇ ಮರೀಚಿಕೆಯಾದ ಜಮೀನು ! ಕಚೇರಿಗಳಿಗೆ ಎಡತಾಕಿ ಸುಸ್ತಾದ ಮಾಜಿ ಯೋಧರ ಕುಟುಂಬಸ್ಥರು

12:24 AM Sep 11, 2022 | Team Udayavani |

ರಾಯಚೂರು/ಬೆಂಗಳೂರು: ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಡುವ ಸೈನಿಕರು ಈಗ ತಮ್ಮ ಹಕ್ಕಿಗಾಗಿ ಹೋರಾಡುವಂಥ ಸ್ಥಿತಿ ನಿರ್ಮಾಣವಾಗಿದೆ!

Advertisement

ಇದಕ್ಕೆ ಕಾರಣ, ಸರಕಾರಗಳ ನಿರ್ಲಕ್ಷ್ಯ. ದೇಶಕ್ಕಾಗಿ ಸೇವೆ ಸಲ್ಲಿಸಿ ವೀರಮರಣ ಹೊಂದಿದ ಹಾಗೂ ನಿವೃತ್ತಿಯಾದ ವರಿಗೆ ಸರಕಾರವು ಜೀವನೋಪಾಯಕ್ಕಾಗಿ ನೀಡಬೇಕಾದ ಭೂಮಿ ಇನ್ನೂ ಶೇ.99 ರಷ್ಟು ಸೈನಿಕರ ಕೈ ಸೇರಿಲ್ಲ!
ಅಚ್ಚರಿಯಾದರೂ ಇದು ಸತ್ಯ. ಸುಮಾರು 2 ದಶಕ ಗಳಿಂದಲೂ ಸರಕಾರಗಳು ಹುಸಿ ಭರವಸೆ ನೀಡುತ್ತಲೇ ಇವೆ. ಸೇವೆಯಲ್ಲಿದ್ದಾಗ ಹುತಾತ್ಮರಾದರೆ, ನಿವೃತ್ತರಾದರೆ ಸರಕಾರದಿಂದ 4.18 ಎಕರೆ ಕೃಷಿ ಭೂಮಿ ನೀಡಬೇಕು ಎಂದು ಸರಕಾರ ಅಧಿಸೂಚನೆ ಹೊರಡಿಸಿದೆ.

ರಾಜ್ಯದಲ್ಲಿ ಸುಮಾರು 1.30 ಲಕ್ಷ ಮಾಜಿ ಸೈನಿಕರಿದ್ದಾರೆ. ಹೆಚ್ಚು ಕಡಿಮೆ 4 ಲಕ್ಷ ಸೈನಿಕ ಕುಟುಂಬಗಳಿವೆ. ಆದರೆ ಅದರಲ್ಲಿ ಬಹುತೇಕರಿಗೆ ಇನ್ನೂ ಭೂಮಿ ಸಿಕ್ಕಿಲ್ಲ. ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದು, ಆ ಭೂಮಿ ಮೇಲಿನ ಆಸೆಯನ್ನೇ ಕೈ ಬಿಟ್ಟಿದ್ದೇವೆ ಎನ್ನುತ್ತಾರೆ ಮಾಜಿ ಸೈನಿಕರು.

ಸಕಲೇಶಪುರ, ಮೈಸೂರು ಜಿಲ್ಲೆ ಸೇರಿ ರಾಜ್ಯಾದ್ಯಂತ ಮಾಜಿ ಸೈನಿಕರಿಗಾಗಿಯೇ 14,000ಕ್ಕೂ ಅಧಿಕ ಎಕರೆ ಸರಕಾರಿ ಭೂಮಿ ಕಾದಿರಿಸಲಾಗಿದೆ. ರಾಜ್ಯದ ವಿವಿ ಧೆಡೆ ಸ್ಥಳ ಲಭ್ಯವಿದ್ದರೂ ಪ್ರಭಾವಿಗಳು ಅದನ್ನು ಒತ್ತುವರಿ ಮಾಡಿಕೊಂಡಿ ರುವ ಆರೋಪಗಳಿವೆ. ಈ ಮುನ್ನ ಗೋಮಾಳ, ಗೈರಾಣಿ ಭೂಮಿಯನ್ನೂ ಸೈನಿಕರಿಗೆ ನೀಡಲಾಗುತ್ತಿತ್ತು. ಈಗ ಅದೂ ಸಾಧ್ಯವಿಲ್ಲ ಎನ್ನುತ್ತಿದ್ದು, ಗೈರಾಣಿ ಜಮೀನು ಲಭ್ಯವಿದ್ದರೂ ಕೊಡುತ್ತಿಲ್ಲ. ಇನ್ನೂ ಕೆಲವೆಡೆ ಅ ಧಿಕಾರಿಗಳು ಭೂಮಿ ಮಂಜೂರು ಮಾಡಿಸುವುದಾಗಿ ಮಾಜಿ ಸೈನಿಕ ರಿಂದಲೂ ಲಂಚ ಕೇಳಿದ ಉದಾಹರಣೆಗಳಿವೆ.

ದುರಂತವೆಂದರೆ ಸೇವೆಯಲ್ಲಿ ಮೃತಪಟ್ಟ ಸೈನಿಕರ ಪತ್ನಿಯರನ್ನು ಸರಕಾರ “ವೀರನಾರಿ’ಯರೆಂದು ಗೌರವಿಸುತ್ತಿದ್ದು, ಅಂಥವರಿಗೂ ಜಮೀನು ಮಂಜೂರು ಮಾಡಿಲ್ಲ. ರಾಯಚೂರು ಜಿಲ್ಲೆಯಲ್ಲಿ ಈವರೆಗೆ ಒಬ್ಬ ಮಾಜಿ ಸೈನಿಕರಿಗೂ ಜಮೀನು ಸಿಕ್ಕಿಲ್ಲ. ಇಬ್ಬರು ಸೈನಿಕರು ಸತತ ಪ್ರಯತ್ನದಿಂದ ಎಲ್ಲ ಪ್ರಕ್ರಿಯೆ ಮುಗಿಸಿದ್ದರೂ ವಿನಾಕಾರಣ ವಿಳಂಬ ಮಾಡಲಾಗುತ್ತಿದೆ. ಮಾಜಿ ಸೈನಿಕರ ಸಂಘದ ಕಚೇರಿ, ವಾರ್‌ ಮೆಮೊರಿ ಯಲ್‌ ಸೇರಿದಂತೆ ವಿವಿಧ ಉದ್ದೇಶಗಳಿಗೆ 3 ಎಕ್ರೆ ಜಮೀನು ಮಂಜೂರು ಮಾಡಿದ್ದ ಜಿಲ್ಲಾಡಳಿತ, ಈಗ ಅದನ್ನೂ ಕೊಡಲು ಬರುವುದಿಲ್ಲ ಎಂದು ರದ್ದುಪಡಿಸಿದೆ.

Advertisement

ಎರಡು ದಶಕಗಳಿಂದ
ಸಿಕ್ಕಿಲ್ಲ ಹಿಡಿಜಾಗ
ರಾಜ್ಯದಲ್ಲಿ 1.30 ಲಕ್ಷ ಮಾಜಿ ಸೈನಿಕರಿದ್ದಾರೆ. 2003ರ ಬಳಿಕ ತಮ್ಮ ಹಕ್ಕಿನ ಸರಕಾರಿ ಜಮೀನಿಗಾಗಿ ರಾಜ್ಯಾದ್ಯಂತ ಸುಮಾರು 5,000 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಮಂಜೂರಾತಿ ಮಾತ್ರ ಸಿಕ್ಕಿಲ್ಲ. ಸರಕಾರಿ ಜಮೀನು ಮಂಜೂರಾಗಿ 20 ವರ್ಷಗಳಿಂದ ಬೇಸಾಯದಲ್ಲಿ ತೊಡಗಿಸಿಕೊಂಡ ಸುಮಾರು 1,000ಕ್ಕೂ ಅಧಿಕ ಮಾಜಿ ಸೈನಿಕರಿಗೆ ಹಕ್ಕು ಪತ್ರ ಇನ್ನೂ ಲಭ್ಯವಾಗಿಲ್ಲ. ಕೆಲವಡೆ ಸೈನಿಕರಿಗಾಗಿ ಮೀಸಲಿಟ್ಟಿರುವ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಆರೋಪಗಳಿವೆ.

ದೇಶದ ಹೊರಗಿನ ಸೈನಿಕರೊಂದಿಗೆ ನಾವು ಹೋರಾಟ ನಡೆಸಿ ಗೆಲುವು ಸಾಧಿಸಬಹುದು. ನಮ್ಮ ಹಕ್ಕಿಗಾಗಿ ನಮ್ಮವರ ವಿರುದ್ಧ ಹೋರಾಟ ನಡೆಸಲು ಸಾಧ್ಯವೇ? ಸರಕಾರ ಮಾಜಿ ಸೈನಿಕರಿಗಾಗಿ ಮೀಸಲಿಟ್ಟಿರುವ ಹಕ್ಕಿನ ಜಮೀನು ಪಡೆಯಲು ಅಲೆದಾಟ ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸೆ.12ರಂದು ವಿಧಾನಸಭೆ ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ.
-ಡಾ| ಶಿವಣ್ಣ ಎನ್‌.ಕೆ., ರಾಜ್ಯಾಧ್ಯಕ್ಷ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ

-ಸಿದ್ದಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next