Advertisement
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಮೈಸೂರಿಗೆ ಮೂರನೇ ಬಾರಿಗೆ ಆಗಮಿಸುತ್ತಿದ್ದು, ಜೂ.20 ಮತ್ತು 21ರಂದು ಎರಡು ದಿನ ಪ್ರವಾಸ ಕೈಗೊಂಡಿದ್ದಾರೆ. 21ರಂದು ಅರಮನೆ ಆವರಣದಲ್ಲಿ ನಡೆಯುವ ಯೋಗ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಬೃಹತ್ ವೇದಿಕೆ ನಿರ್ಮಾಣ, ಯೋಗ ಪಟುಗಳಿಗೆ ಅನುಕೂಲವಾಗಲೆಂದು ಮ್ಯಾಟ್ ಅಳವಡಿಕೆ ಮಾಡಲಾಗಿದೆ.
Related Articles
Advertisement
ಭದ್ರತಾ ತಂಡದಿಂದ ಪರಿಶೀಲನೆ: ವಿಧ್ವಂಸಕ ಕೃತ್ಯ ತಡೆ (ಬಾಂಬ್ ಪತ್ತೆ ದಳ) ತಂಡ ಹಾಗೂ ವಿಶೇಷ ಭದ್ರತಾ ಪಡೆ ಅಧಿಕಾರಿಗಳು ಅರಮನೆ, ಚಾಮುಂಡಿ ಬೆಟ್ಟ, ಮಹಾರಾಜ ಕಾಲೇಜು ಮೈದಾನ, ವಸ್ತು ಪ್ರದರ್ಶನ ಆವರಣ, ಸುತ್ತೂರು ಮಠ ಹಾಗೂ ಪ್ರಧಾನಿ ಸಂಚರಿಸುವ ಮಾರ್ಗಗಳನ್ನು ತಪಾಸಣೆ ಮಾಡಿದರು.
ವಾಹನಗಳಿಗೆ ಪರ್ಯಾಯ ಮಾರ್ಗ: ಪ್ರಧಾನಿ ಮೋದಿ ಇಂದು (ಜೂ.20) ಮೈಸೂರು ನಗರಕ್ಕೆ ಭೇಟಿ ನೀಡಿ ಮಹಾರಾಜ ಕಾಲೇಜು ಮೈದಾನ ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಸುತ್ತೂರು ಮಠ, ಚಾಮುಂಡಿ ಬೆಟ್ಟಕ್ಕೆ ತೆರಳಲಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಯಾವುದೇ ಸಮಸ್ಯೆ ಉದ್ಭವಿಸದಂತೆ ಸಾರ್ವಜನಿಕರು ಮತ್ತು ವಾಹನಗಳಿಗೆ ನಿರ್ಬಂಧ ಹೇರಲಾಗಿದ್ದು, ಪರ್ಯಾಯ ಮಾರ್ಗ ಸೂಚಿಸಲಾಗಿದೆ.
ಐತಿಹಾಸಿಕ ಕ್ಷಣಕ್ಕೆ ಅರಮನೆ ಸಾಕ್ಷಿ
ವಿಶ್ವವಿಖ್ಯಾತ ಮೈಸೂರು ಅರಮನೆ ಈ ಬಾರಿ ಮತ್ತೂಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಅಂಬಾವಿಲಾಸ ಅರಮನೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಜರುಗಲಿರುವ ವಿಶ್ವ ಯೋಗ ದಿನಾಚರಣೆ ಸಮಾರಂಭ ಚರಿತ್ರಾರ್ಹ ಕ್ಷಣಗಳಿಗೆ ವೇದಿಕೆ ಆಗಲಿದೆ. ಈ ಮೂಲಕ ಅರಮನೆ ಐತಿಹಾಸಿಕ ಘಟನೆಗಳಿಗೆ ಈ ಕಾರ್ಯಕ್ರಮ ಸೇರ್ಪಡೆಯಾಗಲಿದೆ. ಯೋಗ ಒಕ್ಕೂಟದ 5 ಸಾವಿರ ಸದಸ್ಯರು, 3 ಸಾವಿರ ಶಿಕ್ಷಕರು-ವಿದ್ಯಾರ್ಥಿಗಳು ಭಾಗವಹಿಸುವ ಜತೆಗೆ ಕಾರ್ಮಿಕ ಇಲಾಖೆ, ಡಿಎಫ್ ಆರ್‌ಎಲ್, ಎನ್ನೆಸ್ಸೆಸ್, ವಿಶೇಷ ಚೇತನರು, ತೃತೀಯ ಲಿಂಗಿಗಳು ಮತ್ತು ಕೆಎಸ್‌ಆರ್‌ಪಿ ಸಿಬ್ಬಂದಿ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುವುದು ವಿಶೇಷ.
ಚಾ.ಬೆಟ್ಟ, ಅರಮನೆಗೆ ನಿರ್ಬಂಧ
ಭದ್ರತಾ ದೃಷ್ಟಿಯಿಂದ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರು ಮತ್ತು ಖಾಸಗಿ ವಾಹನಗಳಿಗೆ ಅವಕಾಶ ನಿರ್ಬಂಧಿಸಲಾಗಿದೆ. ಮೆಟ್ಟಿಲು ಮೂಲಕ ಚಾಮುಂಡಿ ಬೆಟ್ಟ ಏರುವುದಕ್ಕೂ ನಿಷೇಧ ಮಾಡಲಾಗಿದೆ. 21ರಂದು ಮೈಸೂರಿನ ಅರಮನೆ ಆವರಣದಲ್ಲಿ ವಿಶ್ವಯೋಗ ದಿನಾಚರಣೆ ಏರ್ಪಡಿಸಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಕಾರ್ಯಕ್ರಮಗಳು ಪ್ರಗತಿಯಲ್ಲಿರುವುದರಿಂದ ಭಾನುವಾರದಿಂದ ಸೋಮವಾರ ಮಧ್ಯಾಹ್ನ 12ಗಂಟೆಯವರೆಗೆ ಅರಮನೆಯ ಪ್ರವೇಶವನ್ನು ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಜತೆಗೆ ಅರಮನೆ ಆವರಣದಲ್ಲಿ ನಡೆಯುವ ಬೆಳಕು, ಧ್ವನಿ ಕಾರ್ಯಕ್ರಮಗಳನ್ನು ಶನಿವಾರದಿಂದ ಮಂಗಳವಾರದವರೆಗೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
15 ಸಾವಿರ ಮಂದಿ ಭಾಗಿ
ಮೈಸೂರು ಯೋಗ ನಗರಿ ಎಂದೇ ಹೆಸರುವಾಸಿ. ಈ ಪಾರಂಪರಿಕ ನಗರಿಯಲ್ಲಿ ಯೋಗ ಪರಂಪರೆ ಬೆಳೆದು ಬಂದಿದೆ. ಯೋಗ ಕಲಿಸುವ ಅನೇಕ ಸಂಘ-ಸಂಸ್ಥೆಗಳು ಈ ಸಾಂಸ್ಕೃತಿಕ ನಗರಿಯಲ್ಲಿದೆ. ಅಂತಾರಾಷ್ಟ್ರೀಯ ಯೋಗ ದಿನದಂದು ಅನೇಕ ಕಡೆ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಜೂನ್ 21ರಂದು ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವರು. ಅರಮನೆ ಆವರಣದಲ್ಲಿ ನಡೆಯುವ ಈ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಸುಮಾರು 15 ಸಾವಿರ ಮಂದಿ ಪಾಲ್ಗೊಳ್ಳುವರು. ಇದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದೆ. ಇದಲ್ಲದೇ, ಮೈಸೂರಿನ ಅನೇಕ ಕಡೆ, ವಿವಿಧ ಬಡಾವಣೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಜೂ.21ರಂದು ಯೋಗ ಪ್ರದರ್ಶನ ನಡೆಯಲಿದೆ. ಮೈಸೂರಿನ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಮೈಸೂರಿನಲ್ಲಿ ನೂರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಯೋಗದಲ್ಲಿ ಅನೇಕರನ್ನು ಈ ಸಮಿತಿ ತಯಾರು ಮಾಡಿದೆ. ನೂರಾರು ಸಂಖ್ಯೆಯಲ್ಲಿ ಯೋಗ ಶಿಕ್ಷಕರಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯರು ಸಾಮೂಹಿಕ ಯೋಗ ಪ್ರದರ್ಶನ ನಡೆಸುವರು ಎಂದು ಸಮಿತಿ ಪ್ರಮುಖ ಎನ್.ಎಸ್.ಸತ್ಯನಾರಾಯಣ ತಿಳಿಸಿದ್ದಾರೆ.
-ಸತೀಶ್ ದೇಪುರ