ಮಂಗಳೂರು: ನಗರದಲ್ಲಿ ಕೋವಿಡ್ 19 ವಿರುದ್ಧ ಹೋರಾಟ ನಡೆಸುವ ವೈದ್ಯಕೀಯ ಸಿಬಂದಿಗೆ ಬೇಕಾಗಿರುವ ಸರ್ಜಿಕಲ್ ಮಾಸ್ಕ್ ಗಳನ್ನು ತಯಾರಿಸಿ ಪೂರೈಕೆ ಮಾಡುವಲ್ಲಿ ಕೊಡಿಯಾಲಬೈಲ್‌ನ ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆ, ಬಲ್ಮಠದ ಕಾಸೆಸ್ ಸಂಸ್ಥೆ ಮತ್ತು ವಾಮಂಜೂರಿನ ಎಸ್.ಡಿ.ಎಂ. ಮಂಗಳ ಜ್ಯೋತಿಯ ಶಾಲೆಯಲ್ಲಿರುವ ಹೊಲಿಗೆ ತರಬೇತಿ ಘಟಕಗಳು ಜಿಲ್ಲಾಡಳಿತಕ್ಕೆ ಸಹಕರಿಸುತ್ತಿವೆ.
ಈ ಮೂರು ಹೊಲಿಗೆ ತರಬೇತಿ ಸಂಸ್ಥೆಗಳಿಗೆ ಬಟ್ಟೆ ಮತ್ತು ಇತರ ಕಚ್ಚಾ ಸಾಮಗ್ರಿಗಳನ್ನು ಜಿಲ್ಲಾಡಳಿತವು ಒದಗಿಸಿದೆ. ತರಬೇತಿ ಸಂಸ್ಥೆಯ ವಿದ್ಯಾ ರ್ಥಿಗಳು, ಶಿಕ್ಷಕರು ಮತ್ತು ಸಿಬಂದಿ ಮಾಸ್ಕ್ ಗಳನ್ನು ಹೊಲಿಯುವ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಐದು ದಿನಗಳ ಹಿಂದೆ ಈ ಕೆಲಸ ಆರಂಭವಾಗಿದೆ.
ಇದು ತ್ರಿ ಲೇಯರ್ ಮಾಸ್ಕ್. ವೈದ್ಯರು ಮತ್ತು ವೇದ್ಯಕೀಯ ಸಿಬಂದಿ ಬಳಸುವ ಮಾಸ್ಕ್. ಒಂದು ಗಂಟೆಗೆ ಸರಾಸರಿ 6 ಮಾಸ್ಕ್ ಗಳನ್ನು ತಯಾರಿಸಲು ಸಾಧ್ಯ. ಸರ್ಜಿಕಲ್ ಮಾಸ್ಕ್ ತಯಾರಿಯ ಜವಾಬ್ದಾರಿ ಮುಗಿದ ಬಳಿಕ ಸಾರ್ವಜನಿಕರಿಗಾಗಿ ಬಟ್ಟೆಯ ಮಾಸ್ಕ್ ಗಳನ್ನು ತಯಾರಿಸಲಾಗುವುದು ಎಂದು ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತುದಾರ ರೋಮಿಯಸ್ ಡಿ’ಸೋಜಾ ಅವರು ಉದಯವಾಣಿಗೆ ತಿಳಿಸಿದರು.
ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಜಿಲ್ಲಾಡಳಿತದೊಂದಿಗೆ ಸಕ್ರಿಯವಾಗಿ ಕೈಜೋಡಿಸುವ ಮೂಲಕ ಸಂತ ಅಲೋಶಿಯಸ್ ಸಂಸ್ಥೆಯು ಸಹಾಯ ಹಸ್ತ ನೀಡುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ವಂ| ಸಿರಿಲ್ ಡಿ’ಮೆಲ್ಲೊ ಅವರು ತಿಳಿಸಿದ್ದಾರೆ.
ಮಾಸ್ಕ್ ತಯಾರಿಗೆ ಸೂಚನೆ
ಸರ್ಜಿಕಲ್ ಮಾಸ್ಕ್ ತಯಾರಿಸಲು ಸಂತ ಅಲೋಶಿಯಸ್ ಐಟಿಐ, ಕಾಸೆಸ್, ಎಸ್‌ಡಿಎಂ ಮಂಗಳ ಜ್ಯೋತಿ ಸಂಸ್ಥೆಗಳಿಗೆ ಜಿಲ್ಲಾಡಳಿತ ತಿಳಿಸಿದೆ. ಮುಂದೆ ಸಾರ್ವಜನಿಕರಿಗಾಗಿ ಬಟ್ಟೆಯಿಂದ ಮಾಸ್ಕ್ ತಯಾರಿಸಿ ಕೊಡಲು ಸೂಚಿಸಲಾಗಿದೆ. ಸಾರ್ವಜನಿಕರಿಗಾಗಿ ಮಾಸ್ಕ್ ತಯಾರಿಸಲು ಇವುಗಳಿಗಲ್ಲದೆ ಬೇರೆ ಕೆಲವು ಸಂಸ್ಥೆಗಳಿಗೆ ತಿಳಿಸಲಾಗಿದೆ.
- ಗೋಕುಲ್‌ದಾಸ್ ನಾಯಕ್, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ