Advertisement

ಗ್ರಾಮೀಣ ಸೇವೆ ಸಲ್ಲಿಸದ ವೈದ್ಯರ ವಿರುದ್ಧ ಸಿವಿಲ್‌ ಪ್ರಕರಣಕ್ಕೆ ಸಿದ್ಧತೆ

10:58 PM Jul 16, 2019 | Team Udayavani |

ಬೆಂಗಳೂರು: ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸುವುದಾಗಿ ಮುಚ್ಚಳಿಕೆ ನೀಡಿ, ನಂತರ ಅದನ್ನು ಉಲ್ಲಂ ಸಿದ ವೈದ್ಯರ ವಿರುದ್ಧ ನ್ಯಾಯಾಲಯದಲ್ಲಿ ಸಿವಿಲ್‌ ಪ್ರಕರಣ ದಾಖಲಿಸಲು ಸರ್ಕಾರ ಸಿದ್ಧತೆ ನಡೆಸಿದೆ.

Advertisement

ಗ್ರಾಮೀಣ ಸೇವೆ ನಿರಾಕರಿಸುವ ವೈದ್ಯರಿಗೆ ಭಾರೀ ಮೊತ್ತದ ದಂಡ ವಿಧಿಸಲು ಅವಕಾಶ ಇದೆ. ಈ ಸಂಬಂಧ ಕಾನೂನು ಇಲಾಖೆ ಅಭಿಪ್ರಾಯ ಕೋರಲಾಗಿದ್ದು, ಅಂತಹ ವೈದ್ಯರ ವಿರುದ್ಧ ಸಿವಿಲ್‌ ಪ್ರಕರಣ ದಾಖಲಿಸಲು ಸಿದ್ಧತೆ ನಡೆದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ತಿಳಿಸಿದರು.

ವಿಧಾನ ಪರಿಷತ್‌ ಕಲಾಪದಲ್ಲಿ ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎಂ.ಪಿ. ಸುನೀಲ್‌ ಸುಬ್ರಮಣಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ತುಕಾರಾಂ, ಗ್ರಾಮೀಣ ಸೇವೆಗೆ ನಿರಾಕರಿಸಿದ ವೈದ್ಯರಿಗೆ ವಿಧಿಸುವ ದಂಡದ ಮೊತ್ತದಲ್ಲಿ ಶೇ. 10ರಷ್ಟು ಮೊತ್ತವನ್ನು ಶುಲ್ಕದ ರೂಪದಲ್ಲಿ ನ್ಯಾಯಾಲಯಕ್ಕೆ ಪಾವತಿಸಬೇಕಾಗಿದೆ.

ಇದು ಸುಮಾರು 10 ಕೋಟಿ ರೂ. ಮೀರುವ ಸಾಧ್ಯತೆಯಿದೆ. ಆದ್ದರಿಂದ ಕಾನೂನು ಇಲಾಖೆ ಅಭಿಪ್ರಾಯ ಕೋರಲಾಗಿದ್ದು, ನಂತರ ಮಂದಿನ ಕಾನೂನು ಹೋರಾಟದ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಅಲ್ಲದೆ, ಗ್ರಾಮೀಣ ಸೇವೆ ಸಲ್ಲಿಸಲು ನಿರಾಕರಿಸುವ ವೈದ್ಯಕೀಯ ಪದವಿ ಪೂರ್ಣಗೊಳಿಸಿರುವವರಿಗೆ 10 ಲಕ್ಷ ರೂ., ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದ ವೈದ್ಯರಿಗೆ 50 ಲಕ್ಷ ರೂ. ಮತ್ತು ಸ್ನಾತಕೋತ್ತರ ಡಿಪ್ಲೊಮಾ ಪೂರೈಸಿದ ವೈದ್ಯರಿಗೆ 25 ಲಕ್ಷ ರೂ. ದಂಡ ವಿಧಿಸಲು ಅವಕಾಶ ಇದೆ ಎಂದು ಮಾಹಿತಿ ನೀಡಿದರು.

Advertisement

ವೈದ್ಯಕೀಯ ಶಿಕ್ಷಣ ಪೂರೈಸಿದ ವೈದ್ಯರಿಗೆ ಕಡ್ಡಾಯ ಗ್ರಾಮೀಣ ಸೇವೆ ಜಾರಿಗೊಳಿಸಲು ಈಗಾಗಲೇ “ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ ಅಧಿನಿಯಮ’ ಜಾರಿ ಮಾಡಲಾಗಿದೆ.

ಆದರೆ, ಈ ಕಾಯ್ದೆಗೆ ಹೈಕೋರ್ಟ್‌ ಪ್ರಸ್ತುತ ತಡೆಯಾಜ್ಞೆ ನೀಡಿದೆ. 2019-20ನೇ ಸಾಲಿನಲ್ಲಿ ಕಡ್ಡಾಯ ಗ್ರಾಮೀಣ ಸೇವೆ ಜಾರಿಗೊಳಿಸುವ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಗುತ್ತಿಗೆ ರದ್ದು- ಎಚ್ಚರಿಕೆ: ಇದೇ ವೇಳೆ ಬಿಜೆಪಿಯ ರಘುನಾಥ್‌ರಾವ್‌ ಮಲ್ಕಾಪುರೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ಗ್ರಾಮೀಣ ಪ್ರದೇಶದಲ್ಲಿ ವಿವಿಧ ಕಾರಣಗಳಿಂದ ಕಾರ್ಯನಿರ್ವಹಿಸದ ಶುದ್ಧ ಕುಡಿಯುವ ನೀರಿನ ಘಟಕಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ದುರಸ್ತಿ ಮಾಡುವಲ್ಲಿ ವಿಳಂಬ ಮತ್ತು ನಿರ್ಲಕ್ಷ್ಯ ತೋರಿದರೆ, ಅಂತಹ ಗುತ್ತಿಗೆಯನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು. ರಾಜ್ಯದಲ್ಲಿ ಒಟ್ಟು 17,131 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ 16,917 ಕಾರ್ಯಾಚರಣೆಯಾಗುತ್ತಿವೆ, ಇನ್ನುಳಿದ 961 ಘಟಕಗಳು ವಿವಿಧ ಕಾರಣಗಳಿಂದ ದುರಸ್ತಿಯಲ್ಲಿವೆ.

ಈ ಪೈಕಿ ಕಚ್ಚಾ ನೀರಿನ ಸಮಸ್ಯೆಯಿಂದ 281, ವಿದ್ಯುತ್‌ ಸಂಪರ್ಕವಿಲ್ಲದೆ 61, ಏಜೆನ್ಸಿ ಸಮಸ್ಯೆಯಿಂದ 103, ನಿರ್ವಹಣೆ ಸಮಸ್ಯೆಯಿಂದ 409 ಹಾಗೂ ತಾಂತ್ರಿಕ ಕಾರಣಗಳಿಂದ 107 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next