Advertisement

ರೈತ ಸಮಾವೇಶಕ್ಕೆ ಭರದ ಸಿದ್ಧತೆ

09:28 PM Dec 31, 2019 | Lakshmi GovindaRaj |

ರಾಜ್ಯದಲ್ಲಿಯೇ ಅತೀ ಹೆಚ್ಚು ತೆಂಗು ಬೆಳೆಯುವ ನಾಡಿನಲ್ಲಿ ಪ್ರಗತಿಪರ ರೈತರಿಗೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರೈತರ ಕೃಷಿ ಪ್ರಶಸ್ತಿ ಪ್ರದಾನ ಮತ್ತು ಕೃಷಿ ಸಮ್ಮಾನ್‌ ಯೋಜನೆಯ 4ನೇ ಕಂತು ಬಿಡುಗಡೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಭರದ ಸಿದ್ಧತೆಗಳು ನಡೆದಿದ್ದು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಂಗಳವಾರ ಸಿದ್ಧತೆ ಪರಿಶೀಲಿಸಿ ಅಧಿಕಾರಿಗಳಿಗೆ ಹಲವು ಸೂಚನೆ ನೀಡಿದರು.

Advertisement

ತುಮಕೂರು: ಶೈಕ್ಷಣಿಕ ನಗರಕ್ಕೆ ಜ.2 ರಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಅನ್ನದಾತನಿಗೆ ಗೌರವಿಸಲು ಆಗಮಿಸುತ್ತಿದ್ದು, ಐತಿಹಾಸಿಕವಾಗಿ ಕಾರ್ಯಕ್ರಮ ನಡೆಯಬೇಕು, ಲಕ್ಷಾಂತರ ರೈತರು ಈ ಅಪೂರ್ವ ಸಮಾರಂಭದಲ್ಲಿ ಭಾಗವಹಿಸಬೇಕೆಂದು ಜಿಲ್ಲಾಡಳಿತ ಭರ್ಜರಿ ತಯಾರಿ ನಡೆಸಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಂಗಳವಾರ ಸಿದ್ಧತೆ ಪರೀಶಿಲಿಸಿದರು.

ರೈತರ ಖಾತೆಗಳಿಗೆ ಹಣ ಜಮಾ: ಕೃಷಿ ಪ್ರಧಾನ ಜಿಲ್ಲೆಯಾಗಿರುವ ತುಮಕೂರಿನಲ್ಲಿ ಈ ಸಮಾರಂಭವನ್ನು ಆಯೋಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿದ್ಧತೆ ನಡೆಸಿದ್ದು, ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪ್ರಗತಿಪರ ರೈತರನ್ನು ಗೌರವಿಸುವುದರ ಜೊತೆಗೆ ಆಹಾರೋತ್ಪಾದನೆಯಲ್ಲಿ ಪ್ರಗತಿಯತ್ತ ಮುನ್ನಡೆಯುತ್ತಿರುವ ಕರ್ನಾಟಕ ರಾಜ್ಯ ಸೇರಿದಂತೆ 6 ರಾಜ್ಯ ಸರ್ಕಾರಗಳಿಗೆ ಪ್ರಶಸ್ತಿ ಪ್ರದಾನ ಮತ್ತು ಪ್ರಧಾನ ಮಂತ್ರಿ ಕೃಷಿ ಸಮ್ಮಾನ್‌ ಯೋಜನೆಯ 4ನೇ ಕಂತಿನ ಹಣವನ್ನು ರೈತರ ಖಾತೆಗಳಿಗೆ ಜಮಾವಣೆ ಮಾಡುವ ಕಾರ್ಯಕ್ರಮ ಇದಾಗಿದೆ.

ಸಿದ್ಧಗಂಗಾ ಮಠಕ್ಕೆ ಭೇಟಿ: ರೈತರ ಕಾರ್ಯಕ್ರಮಕ್ಕೂ ಮುನ್ನ ಶ್ರೀಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ಭಕ್ತರ ಪಾಲಿನ ನಡೆದಾಡುವ ದೇವರಾಗಿದ್ದ ಕರ್ನಾಟಕ ರತ್ನ, ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಯ ದರ್ಶನ ಪಡೆದು, ಪೂಜೆ ಸಲ್ಲಿಸಿ ನಂತರ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದು, ಮಠದ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ.

1 ಲಕ್ಷ ಜನ ಸೇರುವ ನಿರೀಕ್ಷೆ: ಈ ಎಲ್ಲಾ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯಬೇಕೆಂದು ರಾಜ್ಯ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದು, ಪ್ರಧಾನಿಯವರು ಸಂಚರಿಸುವ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದೆ. ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ 1 ಲಕ್ಷ ಜನ ಸೇರುವ ನಿರೀಕ್ಷೆಯಿಂದ ಅಷ್ಟೂ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಸಮಾರಂಭಕ್ಕೆ ‌ ಬರುವ ಜನರಿಗೆ ನಿರಾಸೆಯಾಗಬಾರದು ಎಂದು ಮೈದಾನಕ್ಕೆ ಹೊಂದಿಕೊಂಡಿರುವ ರಸ್ತೆಗಳಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಕಾರ್ಯಕ್ರಮ ವೀಕ್ಷಿಸಲು ಅನುವು ಮಾಡಲಾಗಿದೆ.

Advertisement

ಸಿದ್ಧತೆಗಳ ಪರಿಶೀಲನೆ: ಜಿಲ್ಲಾಡಳಿತ ನಡೆಸಿರುವ ಸಿದ್ಧತೆ ಬಗ್ಗೆ ಕಳೆದ ಒಂದು ವಾರದಿಂದ ರಾಜ್ಯ ಸರ್ಕಾರದ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ, ಡಿಸಿಎಂ ಹಾಗೂ ಕೃಷಿ ಸಚಿವ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ, ವಸತಿ ಸಚಿವ ವಿ. ಸೋಮಣ್ಣ ನಿರಂತರವಾಗಿ ಕಾರ್ಯಕ್ರಮ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ಸಿಎಂ ಖುದ್ದು ಪರಿಶೀಲನೆ: ಮಂಗಳವಾರ ಸ್ವತಃ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಕಾರ್ಯಕ್ರಮದ ವ್ಯವಸ್ಥೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಹಲವು ಸಲಹೆಗಳನ್ನು ನೀಡಿದರು. ಒಟ್ಟಾರೆಯಾಗಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಎಲ್ಲಾ ರೀತಿಯ ತಯಾರಿಗಳು ನಡೆದಿವೆ.

ನಗರದಾದ್ಯಂತ ಬಿಗಿ ಭದ್ರತೆ: ಪ್ರಧಾನಿ ಮೋದಿಯವರು ತುಮಕೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ನಗರಾದ್ಯಂತ ಬಿಗಿ ಭದ್ರತೆ ಒದಗಿಸಲು ಈಗಾಗಲೇ ಜಿಲ್ಲಾ ಪೊಲೀಸ್‌ ಪಡೆ ಸಜಾjಗಿದೆ. ಈಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೋ.ನಂ ವಂಸಿಕೃಷ್ಣ ನಗರದ ಯಾವೆಲ್ಲಾ ಪ್ರದೇಶಗಳಲ್ಲಿ ಭದ್ರತೆ ಒದಗಿಸುವಂತೆ ಪೊಲೀಸ್‌ ಸಿಬ್ಬಂದಿ ಸೂಚಿಸಿದ್ದಾರೆ.

ಮದ್ಯದಂಗಡಿಗಳು ಬಂದ್‌: ನಗರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬರುವ ಹಿನ್ನೆಲೆಯಲ್ಲಿ ಜ. 2ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಕೆಎಸ್‌ಬಿಸಿಎಲ್‌ ಡಿಪೋ ಹೊರತು ಪಡಿಸಿ ಪಾಲಿಕೆ ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಿ ಮದ್ಯ ಮಾರಾಟ ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್‌ ಆದೇಶಿಸಿದ್ದಾರೆ.

ಪ್ರಧಾನ ಮಂತ್ರಿಯವರು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಡಿ.30 ರಿಂದ ಜ. 2ರ ಮಧ್ಯರಾತ್ರಿ 12 ಗಂಟೆವರೆಗೆ ತುಮಕೂರು ನಗರ ಹಾಗೂ ಹೊರವಲಯದಾದ್ಯಂತ ಡ್ರೋನ್‌ ಕ್ಯಾಮೆರಾಗಳನ್ನು ನಿಷೇಧಿಸಲಾಗಿದೆ.
-ಡಾ.ಕೆ.ರಾಕೇಶ್‌ ಕುಮಾರ್‌, ಜಿಲ್ಲಾಧಿಕಾರಿ

* ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next