Advertisement
ಉಪ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಬಿ.ವೈ.ರಾಘವೇಂದ್ರ ಅವರನ್ನು ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಶಾಸಕ ಕೆ.ಎಸ್. ಈಶ್ವರಪ್ಪ ಅವರು ಸಭೆಯಲ್ಲಿ ಅಭ್ಯರ್ಥಿ ಹೆಸರು ಘೋಷಣೆ ಮಾಡಿದ್ದು ವಿಶೇಷ.
ಸಭೆಯಲ್ಲಿ ಡಿ.ಎಚ್.ಶಂಕರಮೂರ್ತಿ, ಕೆ.ಎಸ್.ಈಶ್ವರಪ್ಪ, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ಕೋಟ ಶ್ರೀನಿವಾಸ ಪೂಜಾರಿ, ಬೆಳ್ಳಿ ಪ್ರಕಾಶ್, ಅಶೋಕ ನಾಯ್ಕ ಇತರರು ಇದ್ದರು.
Related Articles
ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಉಪ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಘೋಷಿಸಲಾಗಿದ್ದು, ಇನ್ನೆರಡು ಕ್ಷೇತ್ರಗಳಿಗೆ ನಾಳೆ(ಸೋಮವಾರ) ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲಾಗುವುದು ಎಂದರು.
Advertisement
ಸಭೆಯಲ್ಲಿ ಶಿವಮೊಗ್ಗ ಕ್ಷೇತ್ರಕ್ಕೆ ಬಿ.ವೈ.ರಾಘವೇಂದ್ರ ಅವರ ಹೆಸರನ್ನು ಈಶ್ವರಪ್ಪ ಅವರು ಪ್ರಸ್ತಾವನೆ ಮಾಡಿ ಭಾನುಪ್ರಕಾಶ್ ಅನುಮೋದಿಸಿದ್ದಾರೆ. ಅ.15ರಂದು ರಾಘವೇಂದ್ರ ನಾಮಪತ್ರ ಸಲ್ಲಿಸಲಿದ್ದಾರೆ. ನಾಳೆ ಮಂಡ್ಯ, ಬಳ್ಳಾರಿ ಹಾಗೂ ಉಳಿದ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದರು.
ಬಳ್ಳಾರಿಯಲ್ಲಿ ಅಭ್ಯರ್ಥಿ ಇದ್ದಾರೆ. ಮಂಡ್ಯದಲ್ಲೂ ಸಹ ಒಳ್ಳೆಯ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿ, ಕಣಕ್ಕಿಳಿಸಲಾಗುವುದು. ದೊಡ್ಡ ಅಂತರದಿಂದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ. ರಾಜ್ಯ ಸರಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರೆ ಸಾಕು. ಜನ ಬಿಜೆಪಿಗೆ ಮತ ಹಾಕುತ್ತಾರೆ. ಚುನಾವಣೆ ವೇಳೆಗೆ ರಾಜ್ಯ ಸರಕಾರ ಏನಾಗಲಿದೆ ಎಂಬುದು ಗೊತ್ತಾಗಲಿದೆ ಎಂದರು.ಮುಂದಿನ ಲೋಕಸಭೆ ಚುನಾವಣೆಯಲ್ಲಿ ಈಗಿನದಕ್ಕಿಂತ ಹೆಚ್ಚಿನ ಸ್ಥಾನ ಗಳಿಸಿ ಕೇಂದ್ರಕ್ಕೆ ಕಳುಹಿಸಲಾಗುವುದು. ಸಮೀಕ್ಷೆಯಲ್ಲಿ 19 ಸ್ಥಾನ ಗೆಲ್ಲಬಹುದು ಎಂದು ಇದೆ. ಆದರೆ 23 ಸ್ಥಾನಗಳನ್ನು ಗೆಲ್ಲಬೇಕಿದೆ. ಚುನಾವಣೆ ನಮಗೆ ಸವಾಲಾಗಿದೆ. ಮಹಿಳಾ ಮೋರ್ಚಾ ಸೇರಿದಂತೆ ಎಲ್ಲ ಮೋರ್ಚಾಗಳನ್ನು ಬಲಪಡಿಸಬೇಕಿದೆ ಎಂದರು. ಚುನಾವಣೆ ಅಗತ್ಯವಿರಲಿಲ್ಲ:
ಬಳಿಕ, ಶಿಕಾರಿಪುರದಲ್ಲಿ ಮಾತನಾಡಿ, ಕೇವಲ 5 ತಿಂಗಳಿಗೋಸ್ಕರ ಉಪ ಚುನಾವಣೆ ನಡೆಯುತ್ತಿದೆ. ಈ ಚುನಾವಣೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿಗೂ ಅನಗತ್ಯವಾಗಿದೆ. ಆದರೆ, ಚುನಾವಣಾ ಆಯೋಗ ಯಾಕೆ ಈ ನಿರ್ಧಾರ ಕೈಗೊಂಡಿದೆ ಎಂಬುದು ಗೊತ್ತಿಲ್ಲ. ಮೋದಿ ಸರಕಾರದ ಸಾಧನೆಗಳನ್ನು ಇಟ್ಟುಕೊಂಡು ಉಪ ಚುನಾವಣೆ ಎದುರಿಸುತ್ತಿದ್ದೇವೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡರೂ ಬಿಜೆಪಿ ಮೇಲೆ ಯಾವ ಪರಿಣಾಮವೂ ಆಗಲ್ಲ ಎಂದರು.