ಗದಗ: ವಿದ್ಯಾರ್ಥಿಗಳು ತಮ್ಮ ಅಧ್ಯಯನ ದೊಂದಿಗೆ ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಮರ್ಪಕವಾದ ಪೂರ್ವ ಸಿದ್ಧತೆ ಅಗತ್ಯ ಎಂದು ಲೆಕ್ಕ ಪರಿಶೋಧಕ ಆನಂದ್ ಪೋತ್ನಿಸ್ ಹೇಳಿದರು.
ನಗರದ ಆದರ್ಶ ಶಿಕ್ಷಣ ಸಮಿತಿಯ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ಸಿದ್ಧಗೊಳ್ಳಬೇಕು ವಿಷಯ ವಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೂರ್ವ ಸಿದ್ಧತೆ ಇಲ್ಲದೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದೆಂದರೆ ಈಜು ಬಾರದ ವ್ಯಕ್ತಿ ಸಮುದ್ರಕ್ಕೆ ಇಳಿದಂತೆ. ಹೀಗಾಗಿ, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಯಶಸ್ಸು ಪಡೆಯಲು ಪ್ರಚಲಿತ ವಿದ್ಯಮಾನಗಳ ಅರಿವು ಬಹಳಷ್ಟು ಅಗತ್ಯವಾಗಿದೆ ಎಂದು ಹೇಳಿದರು.
ನಿಮ್ಮ ಓದು ಪಠ್ಯಕ್ರಮದ ಚೌಕಟ್ಟಿಗೆ ಒಳಪಟ್ಟಿರಬೇಕು. ಸಿಕ್ಕಿದ್ದನ್ನೆಲ್ಲಾ ಓದಬಾರದು ಮತ್ತು ಸಿಕ್ಕಾಪಟ್ಟೆ ಓದಬಾರದು. ಆಯಾ ಪರೀಕ್ಷೆಗೆಂದೇ ನಿಗದಿತ ಪರೀಕ್ಷಾ ಪ್ರಾಧಿಕಾರ ಪಠ್ಯಕ್ರಮವನ್ನು ನಿರ್ದಿಷ್ಟಪಡಿಸಿರುತ್ತದೆ. ಅದಕ್ಕೆ ಅನುಗುಣವಾಗಿಯೇ ನಿಮ್ಮ ಓದು ಸಾಗಬೇಕು. ಒಟ್ಟಾರೆ ನಿಮ್ಮ ಓದು ಸ್ಮಾರ್ಟ್ ಆಗಿರಬೇಕು. ಓದಿದ್ದನ್ನು ನೆನಪಿಡುವ ಮೈಂಡ್ ಮ್ಯಾಪ್‌ನಂಥ ಶಾರ್ಟ್‌ಕಟ್‌ಗಳನ್ನು ಅದು ಒಳಗೊಂಡಿರಬೇಕು. ಓದಿನೊಂದಿಗೆ ಪ್ರತಿನಿತ್ಯ ಅಧ್ಯಯನದ ಅಂತರಾವಲೋಕನ ಇರಬೇಕು. ಮುಖ್ಯಾಂಶಗಳ ಮನನವಿರಬೇಕು. ಆಗ ಯಶಸ್ಸು ತಂತಾನೇ ಒಲಿಯುತ್ತದೆ. ಎಂದು ಹೇಳಿದರು.
ಸಂಸ್ಥೆ ಕಾರ್ಯದರ್ಶಿ ಎ.ಡಿ. ಗೋಡಖಿಂಡಿ, ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಗಿರಿರಾಜಕುಮಾರ್, ವಿ.ಟಿ. ನಾಯ್ಕರ್, ಲಿಂಗರಾಜ್ ರಶ್ಮಿ, ಆಡಳಿತ ಅಧಿಕಾರಿ ಪಿ.ಆರ್. ಇನಾಮದಾರ್, ವಿ.ಬಿ. ಗವಾಯಿ, ಐ.ಎಂ. ಯಾವಗಲ್, ಎಸ್.ಎಂ. ಬೆಣಕಲ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.