ಬಸವಕಲ್ಯಾಣ: ನರಗದ ಬಸವ ಮಹಾಮನೆ ಆವರಣದಲ್ಲಿ ಅ.27, 28 ಹಾಗೂ 29ರಂದು ಮೂರು ದಿನಗಳ ಕಾಲ ನಡೆಯಲಿರುವ 17ನೇ ಕಲ್ಯಾಣ ಪರ್ವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಭವ್ಯ ಮಂಟಪ ಹಾಗೂ ವೇದಿಕೆ ಸಿದ್ಧಗೊಂಡಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕದ ವಿವಿಧ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಬಸವ ಅನುಯಾಯಿಗಳು ಮತ್ತು ಭಕ್ತರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಬರುವ ಭಕ್ತಾದಿಗಳಿಗೆ ವಸತಿ, ಮೂರು ದಿನ ಪ್ರಸಾದ ವಿತರಣೆ ಹಾಗೂ ಪುಸ್ತಕ, ಲಿಂಗ, ರುದ್ರಾಕ್ಷಿ ಮಾರಾಟ ಮಳಿಗಳನ್ನು ಕೂಡ ನಿರ್ಮಿಸಲಾಗಿದೆ.
ಅ.27ರಂದು ಬೆಳಗ್ಗೆ 10:30ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸುವರು. ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಸಚಿವ ರಾಜಶೇಖರ ಪಾಟೀಲ ಧ್ವಜಾರೋಹಣ ನೆರವೇರಿಸುವರು. ಶಾಸಕ, ಕಲ್ಯಾಣ ಪರ್ವದ ಕಾರ್ಯಾಧ್ಯಕ್ಷ ಬಿ.ನಾರಾಯಣರಾವ್ ಅಧ್ಯಕ್ಷತೆ ವಹಿಸುವರು.
ಕೂಡಲಸಂಗಮ ಬಸವ ಧರ್ಮ ಪೀಠದ ಶ್ರೀ ಮಹಾಜಗದ್ಗುರು ಡಾ| ಮಾತೆ ಮಹಾದೇವಿ ಸಾನ್ನಿಧ್ಯ, ಧಾರವಾಡ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠದ ಪೀಠಾಧ್ಯಕ್ಷೆ ಶ್ರೀ ಜಗದ್ಗುರು ಮಾತೆ ಗಂಗಾದೇವಿ ನೇತೃತ್ವ ವಹಿಸುವರು. ಬಸವಕಲ್ಯಾಣ ಅಲ್ಲಮ ಪ್ರಭು ಸೊನ್ನ ಪೀಠದ ಪೀಠಾಧ್ಯಕ್ಷ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಮಹಾರಾಷ್ಟ್ರ ಅಲ್ಲಮಗಿ ಅಲ್ಲಪ್ರಭು ಯೋಗ ಪೀಠದ ಅಧ್ಯಕ್ಷರಾದ ಶ್ರೀ ಬಸವಕುಮಾರ ಸ್ವಾಮೀಜಿ, ಬೆಂಗಳೂರು ಚನ್ನಬಸವೇಶ್ವರ ಜ್ಞಾನ ಪೀಠಾಧ್ಯಕ್ಷ ಶ್ರೀ ಚನ್ನಬಸವಾನಂದ ಸ್ವಾಮೀಜಿ ಸಮ್ಮುಖ ವಹಿಸುವರು. ಶ್ರೀ ಮಾತೆ ಜ್ಞಾನೇಶ್ವರಿ ಹಾಗೂ ಶ್ರೀ ದಾನೇಶ್ವರಿ ಧರ್ಮಗುರು ಪೂಜೆ ನೆರವೇರಿಸುವರು.
ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಎಚ್. ಆಂಜನೇಯ ಮತ್ತು ಶಾಸಕರಾದ ರಹೀಮ್‌ಖಾನ್, ಎಂ.ವೈ.ಪಾಟೀಲ, ಶರಣಬಸಪ್ಪಾ ದರ್ಶನಾಪೂರ, ಬಸವರಾಜ ಮತ್ತಿಮೂಡ, ಅಲ್ಲಮಪ್ರಭು ಪಾಟೀಲ, ವಿಜಯಸಿಮಗ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸೇರಿದಂತೆ ಮತ್ತಿತರರು ಪಾಲ್ಗೊಳ್ಳುವರು.
ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ ಇಂದು ಕಲ್ಯಾಣ ಪರ್ವ ಉತ್ಸವ ಸಮಿತಿ, ಬಸವ ಮಹಾಮನೆ ಬಸವಕಲ್ಯಾಣ ಮತ್ತು ಅಗಸ್ತ್ಯ ಆಯುರ್ವೇದ ಚಿಕಿತ್ಸಾ ಹಾಗೂ ಸಂಶೋಧನಾ ಕೇಂದ್ರ ಮುಂಡರಗಿ ಸಂಯುಕ್ತಾಶ್ರಯದಲ್ಲಿ ಅ,27ರಂದು ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ ನಡೆಯಲಿದೆ. ಡಾ|ಲೋಕೇಶ ಟೇಕಲ್, ಡಾ| ಪಿ.ಸಿ.ಚಪ್ಪನಮಠ, ಡಾ| ಬೂದೇಶ, ಡಾ| ರಾಜೇಂದ್ರ ಸಿ ಮಠದ, ಡಾ|ವಿಶ್ವೇಶ್ವರಯ್ನಾ ಸೇರಿದಂತೆ ನುರಿತ ತಜ್ಞರ ತಂಡದಿಂದ ಚಿಕಿತ್ಸೆ ನಡೆಯುವುದು. ಮಧ್ಯಾಹ್ನ 3 ಗಂಟೆಗೆ ರಾಷ್ಟ್ರೀಯ ಬಸವ ದಳದ ಯುವ ಸಮಾವೇಶ ನಡೆಯುವುದು. ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶ್ರೀ ಚನ್ನಬಸವಾನಂದ ಸ್ವಾಮೀಜಿ ಸಾನ್ನಿಧ್ಯ, ರಾಷ್ಟ್ರೀಯ ಬಸವ ದಳ ಅಧ್ಯಕ್ಷ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ನೇತೃತ್ವ ವಹಿಸುವರು. ಸಚಿವ ರಾಜಶೇಖರ ಪಾಟೀಲ್ ಧ್ವಜಾರೋಹಣ ಮತ್ತು ಜಹೀರಾಬಾದ್ ರಾ.ಬ.ದ.ಳ. ಅಧ್ಯಕ್ಷ ಶಂಕರೆಪ್ಪಾ ಪಾಟೀಲ ಉದ್ಘಾಟನೆ ನೆರವೇರಿಸುವರು. ಬೀದರ ರಾ.ಬ.ದ. ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಅಧ್ಯಕ್ಷತೆ ವಹಿಸುವರು. ಸಂಜೆ 6ಕ್ಕೆ ಶರಣೆಯರ ಸಂಗಮ ಕಾರ್ಯಕ್ರಮ ನಡೆಯಲಿದೆ.