ಹರಿಹರ: ನಗರದಲ್ಲಿ ಮಾ.22ರಿಂದ ನಡೆಯುವ ಗ್ರಾಮದೇವತೆ ಉತ್ಸವಕ್ಕೆ ಹೊರಗಿನ ಲಕ್ಷಾಂತರ ಜನರು ನಗರಕ್ಕೆ ಆಗಮಿಸಲಿದ್ದು, ಅಧಿಕಾರಿಗಳು ಕನಿಷ್ಟ ಸಿದ್ಧತೆ ಮಾಡಿಕೊಂಡಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಶುಕ್ರವಾರ ಉತ್ಸವ ಸಮಿತಿ ಹಾಗೂ ಅಧಿಕಾರಿಗಳ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕವಾಗಿ ಕೋಣ ಹಾಗೂ ಮತ್ತಿತ್ತರ ಪ್ರಾಣಿಬಲಿ ನೀಡುವುದನ್ನು ನಿಷೇಧಿಸಲಾಗಿದ್ದು, ಹೈಕೋರ್ಟ್ ಆದೇಶ ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ಸವ ಸಮಿತಿ ಸದಸ್ಯರಿಗೆ ಸೂಚಿಸಿದರು.
ನಗರದಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್ ಅಳವಡಿಸಿದ್ದು, ಅಂಗಡಿ ಮುಂಗಟ್ಟುಗಳ ವ್ಯಾಪಾರಕ್ಕೆ ಮಾತ್ರವಲ್ಲದೆ, ಜನ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪ ಬಂದಿದ್ದು, ಈ ಬಗ್ಗೆ ನಿಗಾ ವಹಿಸಬೇಕು ಮತ್ತು ಅನಧಿಕೃತ ಫ್ಲೆಕ್ಸ್ ತೆರವುಗೊಳಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ಸವ ಸಮಿತಿಯಿಂದ ಹಬ್ಬದ ವಿಧಿವಿಧಾನಗಳ ಆಚರಣೆಗಳ ಬಗ್ಗೆ ಸಂಪೂರ್ಣ ಮಾಹಿತಿ ಮಾಹಿತಿ ಪಡೆಯಲಾಗಿದೆ. ಅದರನ್ವಯ ವಿವಿಧ ಇಲಾಖಾಧಿಕಾರಿಗಳು ಅಗತ್ಯ ಸಿದ್ಧತೆ ಮತ್ತು ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ ಎಂದರು.
ಸಿಪಿಐ ಸತೀಶ್ ಕುಮಾರ್ ಯು. ಮಾತನಾಡಿ, ಉತ್ಸವದ ನಿಮಿತ್ತ ಇಲಾಖೆಯಿಂದ 5 ಸಿಪಿಐ, 15 ಪಿಎಸೈ ಸೇರಿದಂತೆ ಹೆಚ್ಚುವರಿಯಾಗಿ 150 ಪೋಲೀಸರನ್ನು ನಿಯೋಜನೆ ಮಾಡಲಾಗುತ್ತಿದೆ. ವಾಹನ ಸಂಚಾರಕ್ಕೆ ತೊಡಕಾಗದಂತೆ ಮಾ.22, 23 ಮತ್ತು 24ರಂದು ನಗರಕ್ಕೆ ಬರುವ ನಾಲ್ಕು ದಿಕ್ಕಿನಲ್ಲಿ ಸಂಚಾರ ಮಾರ್ಗ ಬದಲಿಸಲಾಗುತ್ತಿದೆ. ದೇವಸ್ಥಾನ ರಸ್ತೆಯ ಚೌಕಿ ಮನೆ ಹಾಗೂ ಮಾಜೇನಹಳ್ಳಿ ಗ್ರಾಮದೇವತೆ ದೇವಸ್ಥಾನದ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗುತ್ತದೆ ಎಂದರು.
ಪೌರಾಯುಕ್ತೆ ಎಸ್. ಲಕ್ಷ್ಮಿ ಮಾತನಾಡಿ , ನಗರಕ್ಕೆ ನೀರು ಸರಬರಾಜು ಮಾಡುವ ಕೌಲತ್ತು ಗ್ರಾಮದ ಪಂಪ್‌ಹೌಸ್ ದುರಸ್ತಿ ನಿಮಿತ್ತ ನೀರಿನ ಸಮಸ್ಯೆಯಾಗಿತ್ತು, ಉತ್ಸವದ ವೇಳೆ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದು. ಹೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡದಂತೆ ಮನವಿ ಮಾಡಿಕೊಂಡಿದ್ದೇವೆ ಎಂದರು.
ಇನ್ನೆರಡು ದಿನದಲ್ಲಿ ನಗರದ ಎಲ್ಲಾ ವಾರ್ಡ್‌ಗಳನ್ನು ಸಂಪೂರ್ಣ ಸ್ವತ್ಛಗೊಳಿಸಲಾಗುವುದು. ಮಲೇಬೆನ್ನೂರು ಹಾಗೂ ಹೊನ್ನಾಳಿಯಿಂದ ಹೆಚ್ಚುವರಿ ಪೌರಕಾರ್ಮಿಕರನ್ನು ಕರೆಸಿಕೊಳ್ಳಲಾಗುತ್ತಿದೆ. ಹೆಚ್ಚುವರಿಯಾಗಿ 4 ನೀರಿನ ಟ್ಯಾಂಕರ್ ತರಿಸಿದ್ದು, ಯಾವುದೇ ವಾರ್ಡ್‌ನಲ್ಲಿ ನೀರಿನ ಸಮಸ್ಯೆಯಾದರೆ ತಕ್ಷಣ ಟ್ಯಾಂಕರ್ ಕಳಿಸಲಾಗುವುದು. ದೇವಸ್ಥಾನ ರಸ್ತೆಯ ಚೌಕಿ ಮನೆ ಬಳಿ ತಾತ್ಕಾಲಿಕ ಪೈಪ್ ಅಳವಡಿಸಿ ನೀರು ಪೂರೈಸಲಾಗುವುದು. ಅಲ್ಲಲ್ಲಿ ಮಹಿಳೆಯರಿಗೆ ಸಂಚಾರಿ ಶೌಚಾಲಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ನಗರದಲ್ಲಿ ಅಳವಡಿಸಿರುವ ಕೃತಕ ಫ್ಲೆಕ್ಸ್‌ಗಳ ಬಗ್ಗೆ ಮಾಹಿತಿ ನೀಡದೆ ಪೌರಾಯುಕ್ತರು ಸಭೆಯಿಂದ ನಿರ್ಗಮಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ|ಚಂದ್ರಮೋಹನ ಮಾತನಾಡಿ, ಉತ್ಸವದ ವೇಳೆ ಸಾರ್ವಜನಿಕರು ಆರೋಗ್ಯ ಕಡೆಗಣಿಸಬಾರದು. ಆರೋಗ್ಯ ಇಲಾಖೆಯಿಂದ ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯಲಾಗುತ್ತಿದ್ದು, ಅಗತ್ಯವಿದ್ದವರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.