ಶಿವಮೊಗ್ಗ: ಇಡೀ ವ್ಯವಸ್ಥೆಯೇ ಅಲ್ಲೊಲ ಕಲ್ಲೋಲವಾಗಿರುವ ಕೋವಿಡ್ ಕಾಲದಲ್ಲಿ ಜೂ.18ರಂದು ನಡೆಯುವ ದ್ವಿತೀಯ ಪಿಯು ಪರೀಕ್ಷೆ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಪಪೂ ಶಿಕ್ಷಣ ಇಲಾಖೆ ಸಿಬ್ಬಂದಿ ಹಗಲಿರುಳು ಶ್ರಮ ವಹಿಸಿ ಯಾವ ವಿದ್ಯಾರ್ಥಿಯೂ ಪರೀಕ್ಷೆಯಿಂದ ತಪ್ಪಿಸಿಕೊಳ್ಳದಂತೆ ನಿಗಾ ವಹಿಸಿದ್ದಾರೆ.
ಜಿಲ್ಲೆಯಲ್ಲಿ 18799 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಇಲಾಖೆಯಿಂದ ಇವರೆಲ್ಲರನ್ನೂ ಈಗಾಗಲೇ ಸಂಪರ್ಕಿಸಿ ಪರೀಕ್ಷೆ ಬರುವುದನ್ನು ಖಚಿತ ಪಡಿಸಿಕೊಳ್ಳಲಾಗಿದೆ. ಇದರಲ್ಲಿ 791 ವಿದ್ಯಾರ್ಥಿಗಳು ಹೊರ ಜಿಲ್ಲೆಯವರಾಗಿದ್ದು ಇಲ್ಲೇ ಪರೀಕ್ಷೆ ಬರೆಯುವುದಾಗಿ ತಿಳಿಸಿದ್ದು, ಅವರಿಗೂ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಇನ್ನು ಇದೇ ಜಿಲ್ಲೆಯ 372 ವಿದ್ಯಾರ್ಥಿಗಳು ಬೇರೆ ಜಿಲ್ಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.
ಅವರಿಗೆ ಹಾಲ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. 3 ಸಾವಿರ ವಿದ್ಯಾರ್ಥಿಗಳಿಗೆ ಬಸ್: ಜಿಲ್ಲೆಯ ಗ್ರಾಮಾಂತರ ಭಾಗಗಳಿಂದ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಶಿಕಾರಿಪುರ, ಸಾಗರ, ಸೊರಬ, ತೀರ್ಥಹಳ್ಳಿ ಭಾಗದಿಂದ ಬಸ್‌ಗೆ ಹೆಚ್ಚಿನ ಬೇಡಿಕೆ ಬಂದಿದೆ. ಒಟ್ಟು ಮೂರು ಸಾವಿರ ವಿದ್ಯಾರ್ಥಿಗಳಿಗೆ ಬಸ್ ಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ.
ತಹಶೀಲ್ದಾರ್ ಅಧ್ಯಕ್ಷತೆಯ ಸಮಿತಿ ವತಿಯಿಂದ ರೂಟ್ ಆಫೀಸರ್‌ಗಳನ್ನು ನೇಮಕ ಮಾಡಲಾಗಿದ್ದು ವಿದ್ಯಾರ್ಥಿಗಳಿಗೆ ಕರೆ ಮಾಡಿ ಬಸ್ ಮೂಲಕ ಕರೆತರುವ ವ್ಯವಸ್ಥೆ ಮಾಡುತ್ತಾರೆ. ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಹೆಚ್ಚುವರಿ ವಾಹನ ವ್ಯವಸ್ಥೆ ಮಾಡಲಾಗಿದ್ದು ಅಗತ್ಯ ಬಿದ್ದರೆ ಬಳಸಿಕೊಳ್ಳಲಿದ್ದಾರೆ. 137 ರೂಟ್‌ಗಳನ್ನು ಗುರುತಿಸಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಬಸ್ ವ್ಯವಸ್ಥೆ ಆಗಲಿದೆ. ಬಸ್‌ಗೆ ಬರುವುದಾಗಿ ಹೇಳಿ ಸ್ವಂತ ವಾಹನದಲ್ಲಿ ಹೋಗುವವರು ಮೇಲ್ವಿಚಾರಕರಿಗೆ ಮಾಹಿತಿ ನೀಡಬೇಕು. ಬಹುತೇಕರು ಸ್ವಂತ ವಾಹನದಲ್ಲಿ ಬರುವುದಾಗಿ ತಿಳಿಸಿದ್ದಾರೆ.
ಪರೀಕ್ಷೆಗೂ ಮುನ್ನ ಹಾಜರಾತಿ ನಡೆಯಲಿದೆ. ಶಿವಮೊಗ್ಗ ತಾಲೂಕಿನಲ್ಲಿ 12, ಭದ್ರಾವತಿ 6, ತೀರ್ಥಹಳ್ಳಿ 3, ಸಾಗರ 5, ಸೊರಬ 2, ಹೊಸನಗರ 2, ಶಿಕಾರಿಪುರದಲ್ಲಿ 3 ಸೇರಿ ಒಟ್ಟು 33 ಪರೀಕ್ಷಾ ಕೇಂದ್ರಗಳಿವೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ಕೊಠಡಿಗಳ ಸಂಖ್ಯೆ ಏರಿಕೆ ಮಾಡಲಾಗಿದೆ. ಮೊದಲು 630 ಕೊಠಡಿಗಳಿತ್ತು. ಈಗ 860ಕ್ಕೆ ಏರಿಕೆಯಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಹಿಂದೆ 750 ಜನ ಕೊಠಡಿ ಮೇಲ್ವಿಚಾರಕರು ಇದ್ದರೂ ಈಗ ಅವರ ಸಂಖ್ಯೆ 1024ಕ್ಕೆ ಏರಿಕೆಯಾಗಿದೆ.