Advertisement

ಆರ್ಥಿಕ ಗಣತಿಗೆ ಪೂರ್ವ ತಯಾರಿ

11:36 AM Jun 30, 2019 | Suhan S |

ಗದಗ: ಜಿಲ್ಲೆಯಲ್ಲಿ ಜರುಗುವ ಆರ್ಥಿಕ ಗಣತಿಯನ್ನು ಸುಸೂತ್ರವಾಗಿ ಜರುಗಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು.

Advertisement

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ 7ನೇ ಆರ್ಥಿಕ ಗಣತಿಯ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿರುವ ಸಂಘಟಿತ ಅಸಂಘಟಿತ ವಿಭಾಗಗಳಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಹೊಂದಿರುವ ಉದ್ಯಮಗಳ ಕುರಿತು ಆರ್ಥಿಕ ಗಣತಿ ಜರುಗಿಸಲಾಗುತ್ತಿದೆ. ಗಣತಿ ಕಾರ್ಯವನ್ನು ಸಾಮಾನ್ಯ ಸೇವಾ ಕೇಂದ್ರ ಜರುಗಿಸುತ್ತಿದ್ದು, ಈ ಸಂಸ್ಥೆಗೆ ಗಣತಿಯ ಪೂರ್ವಭಾವಿ ಸಿದ್ಧತೆಗಳಿಗೆ ಅಗತ್ಯವಾದ ನಗರ, ಗ್ರಾಮಗಳ ಪಟ್ಟಿ, ನಕ್ಷೆಗಳನ್ನು ಸಂಬಂಧಪಟ್ಟ ಇಲಾಖೆಗಳು ಒದಗಿಸಲು ಸೂಚನೆ ನೀಡಿದರು. ಗಣತಿದಾರರು ಮತ್ತು ಮೇಲ್ವಿಚಾರಕರು ಮಾಹಿತಿ ಸಂಗ್ರಹಣೆಗಾಗಿ ಕ್ಷೇತ್ರಕ್ಕೆ ಭೆಟಿ ನೀಡಿದಾಗ ಅವರುಗಳಿಗೆ ಪಿಡಿಒ, ತಾಪಂ ಇಒ ಹಾಗೂ ಗ್ರಾಮ ಲೆಕ್ಕಿಗರು ಅಗತ್ಯದ ಸಹಕಾರ ನೀಡಿ, ಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ಸೂಚಿಸಿದರು.

ಆರ್ಥಿಕ ಗಣತಿ ಅತ್ಯಂತ ಮಹತ್ವದಾಗಿದ್ದು, ಈ ಕಾರ್ಯವು ಮೊಬೈಲ್ ಆ್ಯಪ್‌ ಮೂಲಕ ಜರುಗುತ್ತಿದೆ. ಗಣತಿ ಕಾರ್ಯಕ್ಕೆ ನಿಯೋಜಿಸಲಾದ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಸಾಮಾನ್ಯ ಸೇವಾ ಕೇಂದ್ರದಿಂದ ಅಗತ್ಯದ ತರಬೇತಿ ನೀಡಿ ಗಣತಿ ಕಾರ್ಯದಲ್ಲಿ ಯಾವುದೇ ಲೋಪಗಳಾಗದಂತೆ ಅಗತ್ಯ ಎಚ್ಚರ ವಹಿಸುವಂತೆ ಸೂಚಿಸಿದರು.

ಆರ್ಥಿಕ ಗಣತಿ ಕಾರ್ಯದ ಕುರಿತು ವಿದ್ಯಾರ್ಥಿಗಳ ಮೂಲಕ ಪಾಲಕರಲ್ಲಿ ಜಾಗೃತಿ ಮೂಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಕ್ರಮ ಜರುಗಿಸಲು ಸೂಚನೆ ನೀಡಿದ ಅವರು, ಆರ್ಥಿಕ ಗಣತಿ ಕಾರ್ಯದಲ್ಲಿ ಸಂಬಂಧಿತ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಗಣತಿಯಲ್ಲಿ ಯಾವುದೇ ಲೊಪಗಳಾಗದಂತೆ ಯಶಸ್ವಿಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

Advertisement

ಆರ್ಥಿಕ ಗಣತಿಗಾಗಿ ನಿಯೋಜಿಸಲಾದ ಗಣತಿದಾರರು ಹಾಗೂ ಮೇಲ್ವಿಚಾರಕರು ತಮಗೆ ವಹಿಸಿದ ಪ್ರದೇಶಗಳ ಗಣತಿ ಕಾರ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಚಿದ ಕರಾಳೆ ಸೂಚಿಸಿದರು.

ಜಿ.ಪಂ. ಉಪಕಾರ್ಯದರ್ಶಿ ಪ್ರಾಣೇಶರಾವ್‌, ಗದಗ ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ನಾಸೀರಹ್ಮದ ಪಾಪಣ್ಣವರ ಹಾಗೂ ಬಸವರಾಜ ಸೊರಟೂರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

ಪ್ರಥಮ ಬಾರಿಗೆ ಆರ್ಥಿಕ ಗಣತಿ:

7ನೇ ಆರ್ಥಿಕ ಗಣತಿಯನ್ನು ಪ್ರಾಥಮಿಕ, ಉತ್ಪಾದನೆ, ವಿದ್ಯುತ್‌, ಅನಿಲ, ನೀರು ಸರಬರಾಜು, ನಿರ್ಮಾಣ, ವ್ಯಾಪಾರ ಮತ್ತು ಸೇವೆಗಳಾಗಿ ಆರ್ಥಿಕ ಚಟುವಟಿಕೆ ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದೆ. ಪ್ರಥಮ ಬಾರಿಗೆ ಆರ್ಥಿಕ ಗಣತಿಯಡಿ ಉದ್ಯಮಗಳ ಗಣತಿ ಕಾರ್ಯವನ್ನು ಸಾಮಾನ್ಯ ಸೇವಾ ಕೇಂದ್ರದವರು ಜರುಗಿಸುತ್ತಿದ್ದು, ಈಗಾಗಲೇ ನೇಮಕವಾಗಿರುವ ಗಣತಿದಾರರು ಹಾಗೂ ಮೇಲ್ವಿಚಾರಕರಿಂದ ಕೈಗೊಳ್ಳಲಾಗುವುದು. ಆರ್ಥಿಕ ಗಣತಿ ಕಾರ್ಯ ನಿರ್ವಹಿಸಲು ಜಿಲ್ಲೆಯಲ್ಲಿ ಒಟ್ಟು 400 ಜನ ಗಣತಿದಾರರನ್ನು ಹಾಗೂ 150 ಜನ ಮೇಲ್ವಿಚಾರಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಸಾಂಖ್ಯೀಕ ಅಧಿಕಾರಿ ಎ.ಎ. ಕಂಬಾಳಿಮಠ ಸಭೆಗೆ ಮಾಹಿತಿ ನೀಡಿದರು.
Advertisement

Udayavani is now on Telegram. Click here to join our channel and stay updated with the latest news.

Next