ಪಣಜಿ: ನವೆಂಬರ್ ನಲ್ಲಿ ಗೋವಾದಲ್ಲಿ ನಡೆಯಲಿರುವ 52 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಇದುವರೆಗೂ 13,000 ಜನ ದೇಶ ವಿದೇಶಿಯ ಪ್ರತಿನಿಧಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಪ್ರಸಕ್ತ ವರ್ಷವೂ ಕೂಡ ಹೈಬ್ರಿಡ್ ಪದ್ಧತಿಯಲ್ಲಿ ಚಲನಚಿತ್ರ ಮಹೋತ್ಸವ ನಡೆಯಲಿದೆಯಾದರೂ ಓಪನ್ ಸ್ಕ್ರೀನ್‍ನಲ್ಲಿ ಚಲನಚಿತ್ರ ಮಹೋತ್ಸವ ಪ್ರದರ್ಶಿಸುವ ಪ್ರಸ್ತಾವವನ್ನು ಗೋವಾ ಮನೋರಂಜನಾ ಸಂಸ್ಥೆ ಹೊಂದಿದೆ.
ಪ್ರಸಕ್ತ ವರ್ಷದ ನೊವೆಂಬರ್ 20 ರಿಂದ 28 ರ ವರೆಗೆ ಪಣಜಿಯಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಮಹೋತ್ಸವಕ್ಕಾಗಿ ಈಗಾಗಲೇ ಸಿದ್ಧತಾ ಕಾರ್ಯ ಆರಂಭಗೊಂಡಿದೆ. ಉದ್ಘಾಟನೆ ಮತ್ತು ಇತರ ಕಾರ್ಯಕ್ರಮಗಳ ಮಾಹಿತಿಯನ್ನು ಅಕ್ಟೋಬರ್ 30 ರಂದು ಜಾರಿಗೊಳಿಸಲಾಗುವುದು ಎಂದು ಮನೋರಂಜನಾ ಸಂಸ್ಥೆ ಉಪಾಧ್ಯಕ್ಷ ಸುಭಾಷ ಫಳದೇಸಾಯಿ ಮಾಹಿತಿ ನೀಡಿದ್ದಾರೆ.
ಚಲನಚಿತ್ರ ಮಹೋತ್ಸವಕ್ಕೆ ಪ್ರತಿನಿಧಿಗಳ ನೋಂದಣಿ ನಡೆಯುತ್ತಿದೆ. ಚಲನಚಿತ್ರ ಮಹೋತ್ಸವಕ್ಕೆ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ಮನೋರಂಜನಾ ಸಂಸ್ಥೆ ಮಾಹಿತಿ ನೀಡಿದೆ.
ಪ್ರಸಕ್ತ ವರ್ಷ ಅಂತರಾಷ್ಟ್ರೀಯ ಚಲನಚಿತ್ರ ಮಹೋತ್ಸವದಲ್ಲಿ ದೇಶ ವಿದೇಶಿಯ ಸುಮಾರು 300 ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಬೀಚ್‍ಗಳಲ್ಲಿ ಮತ್ತು ಇತರೆಡೆ ತೆರೆದ ಪ್ರದೇಶಗಳಲ್ಲಿ ಓಪನ್ ಸ್ಕ್ರೀನ್ ಮೂಲಕ ಚಲನಚಿತ್ರ ಪ್ರದರ್ಶನ ಮಾಡುವ ಪ್ರಸ್ತಾವವಿದ್ದು ಕರೋನಾ ಸ್ಥಿತಿಯನ್ನು ನೋಡಿಕೊಂಡು ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಸುಭಾಷ ಫಳದೇಸಾಯಿ ಮಾಹಿತಿ ನೀಡಿದರು.
ಚಲನಚಿತ್ರ ಮಹೋತ್ಸವದಲ್ಲಿ ಕೆಲ ಕಾರ್ಯಕ್ರಮಗಳನ್ನು “ವರ್ಚುವಲ್” ಪದ್ಧತಿಯಲ್ಲಿ ಮತ್ತು ಕೆಲ ಕಾರ್ಯಕ್ರಮಗಳನ್ನು “ಪ್ರತ್ಯಕ್ಷ” ಪದ್ಧತಿಯಲ್ಲಿ ನಡೆಸಲಾಗುವುದು ಎಂದು ಸುಭಾಷ ಫಳದೇಸಾಯಿ ಮಾಹಿತಿ ನೀಡಿದರು.