Advertisement

ಖಾಸಗಿ ಬಸ್‌ ಚಾಲಕ-ನಿರ್ವಾಹಕರಿಗೆ ತಿಂಗಳಿಗೊಂದು ಕಾರ್ಯಾಗಾರಕ್ಕೆ ಸಿದ್ಧತೆ

04:48 PM May 31, 2024 | Team Udayavani |

ಮಹಾನಗರ: ಸಂಚಾರ ನಿಯಮ ಪಾಲನೆ, ಒತ್ತಡದ ಮನಸ್ಸಿಗೆ ಸಮಾಲೋಚನೆ ಸಹಿತ ವಿವಿಧ ಚಟುವಟಿಕೆಗಳನ್ನಾಧರಿಸಿ ಖಾಸಗಿ ಬಸ್‌ ಚಾಲಕ ನಿರ್ವಾಹಕರಿಗೆ ತಿಂಗಳಿಗೊಂದು ಕಾರ್ಯಾಗಾರ ನಡೆಸಲು ಸಾರಿಗೆ ಇಲಾಖೆ ಮುಂದಾಗಿದೆ.

Advertisement

ಕೆಲವೊಂದು ಖಾಸಗಿ ಬಸ್‌ ಗಳಲ್ಲಿ ಸಂಚಾರ ನಿಯಮ ಪಾಲನೆ ಮಾಡಲಾಗುತ್ತಿಲ್ಲ, ಟೈಮ್‌ ಕೀಪಿಂಗ್‌ ಹೆಸರಿನಲ್ಲಿ ಜಗಳಗಳು ನಡೆಯುತ್ತಿದೆ, ತಂಗುದಾಣದ ಎದುರು ಬಸ್‌ ನಿಲ್ಲುತ್ತಿಲ್ಲ, ಕರ್ಕಶ ಹಾರ್ನ್ ಬಳಕೆ ಮಾಡಲಾಗುತ್ತಿದೆ. ಬಸ್‌ ಟಿಕೆಟ್‌ ನೀಡುತ್ತಿಲ್ಲ ಎಂಬಿತ್ಯಾದಿ ದೂರುಗಳು ಪ್ರಯಾಣಿಕರಿಂದ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಬಸ್‌ ಮಾಲಕರ ಸಂಘದಿಂದ ಬ್ಯಾಚ್‌ ಆಧಾರವಾಗಿ ಚಾಲಕ-ನಿರ್ವಾಹಕರನ್ನು ಕಳುಹಿಸಿಕೊಟ್ಟರೆ ತರಬೇತಿ ನೀಡಲು ಸಾರಿಗೆ ಇಲಾಖೆ ನಿರ್ಧರಿಸಿದೆ.

ಬಸ್‌ ಚಾಲಕರಿಗೆ ಟೈಮಿಂಗ್‌ ವಿಚಾರದಲ್ಲಿ ಒತ್ತಡ ಹೆಚ್ಚಾಗುತ್ತಿದ್ದು, 40ರ ವಯಸ್ಸಿನಲ್ಲಿಯೇ ಹಲವು ರೋಗಗಳು ಕಾಣಿಸಿಕೊಳ್ಳುತ್ತಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಒಂದೇ ರೂಟ್‌ನಲ್ಲಿ ಸಂಚರಿಸುತ್ತೇವೆ, ಇದರಿಂದ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬಸ್‌ ಮಾಲಕರು ಸಹಿತ ಚಾಲಕ- ನಿರ್ವಾಹಕರಿಂದ ಅಹವಾಲುಗಳು ಕೇಳಿ ಬರುತ್ತಿದೆ. ಮುಡಿಪುವಿನಲ್ಲಿ ಈಗಾಗಲೇ ಭಾರೀ ವಾಹನ ಚಾಲನ ತರಬೇತಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಪ್ರತಿ ತಿಂಗಳು 20 ಮಂದಿ ಚಾಲಕ – ನಿರ್ವಾಹಕರಿಗೆ ಕಾರ್ಯಾಗಾರ ನಡೆಸಲು ನಿರ್ಧರಿಸಲಾಗಿದೆ.

ಇನ್ನಷ್ಟು ಕಾರ್ಯಾಗಾರ ಸಂಚಾರ ನಿಯಮ ಪಾಲನೆಗೆ ಸಂಬಂಧಪಟ್ಟಂತೆ ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್‌ ಮಾಲಕರ ಸಂಘದಿಂದ ಬಸ್‌ ಚಾಲಕರು ಮತ್ತು ನಿರ್ವಾಹಕರಿಗೆ ಈಗಾಗಲೇ ಕೆಲವೊಂದು ಕಡೆಗಳಲ್ಲಿ ಕಾರ್ಯಾಗಾರ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಪೊಲೀಸ್‌ ಇಲಾಖೆಯ ಸಹಕಾರದೊಂದಿಗೆ ಮಂಗಳೂರಿನ ಇನ್ನಷ್ಟು ಕಡೆಗಳಲ್ಲಿ ಕಾರ್ಯಾಗಾರ ನಡೆಸಲು
ಸಂಘ ಮುಂದಾಗಿದೆ.

ಬಾಂಧ್ಯವ ಬೆಳಸಲು ಸಹಕಾರಿ
ಬಸ್‌ಗಳ ಚಾಲಕ-ನಿರ್ವಾಹಕರಿಗೆ ಕಾರ್ಯಾಗಾರ ನಡೆಸಲು ಸಾರಿಗೆ ಇಲಾಖೆ ನಿರ್ಧರಿಸಿದ್ದು, ಉತ್ತಮ ಬೆಳವಣಿಗೆ. ನಮ್ಮ ಸಂಘದಿಂದಲೂ ಈಗಾಗಲೇ ಕೆಲವೊಂದು ಕಡೆ ಕಾರ್ಯಾಗಾರ ನಡೆಸಿದ್ದೇವೆ. ಇದು ಕೂಡು ಮುಂದುವರಿಯುತ್ತದೆ.ಸಾರಿಗೆ ಇಲಾಖೆಯ ಕಾರ್ಯಾಗಾರಕ್ಕೆ ತಂಡವಾಗಿ ಚಾಲಕ-ನಿರ್ವಾಹಕರನ್ನು ಕಳುಹಿಸಿಕೊಡುತ್ತೇವೆ. ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳ ನಡುವಣ ಮಧುರ ಬಾಂಧ್ಯವ ಬೆಳಸುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಾಗಾರ ಸಹಕಾರಿಯಾಗುತ್ತದೆ.
*ಅಝೀಝ್ ಪರ್ತಿಪಾಡಿ, ದಕ್ಷಿಣ ಕನ್ನಡ ಬಸ್‌
ಮಾಲಕರ ಸಂಘದ ಅಧ್ಯಕ್ಷ

Advertisement

ಕಾರ್ಯಾಗಾರಕ್ಕೆ ಮುಂದು
ಪ್ರತೀ ದಿನ ಬಸ್‌ಗಳಲ್ಲಿ ದುಡಿಯುತ್ತಿರುವ ಚಾಲಕ-ನಿರ್ವಾಹಕರಿಗೆ ಸಂಚಾರ ನಿಯಮ ಪಾಲನೆ ಸಹಿತ ಮತ್ತಿತರ ವಿಷಯವನ್ನು ಆಧರಿಸಿ ಕಾರ್ಯಾಗಾರ ನಡೆಸಲು ಸಾರಿಗೆ ಇಲಾಖೆ ತಯಾರಿದೆ. ಮುಡಿಪುವಿನಲ್ಲಿ ಈಗಾಗಲೇ ಭಾರೀ ವಾಹನ ಚಾಲನ ತರಬೇತಿ ಸಂಸ್ಥೆ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಪ್ರತಿ ತಿಂಗಳು 20 ಮಂದಿ ಚಾಲಕ- ನಿರ್ವಾಹಕರಿಗೆ ಕಾರ್ಯಾ ಗಾರ ನಡೆಸಲು ನಿರ್ಧರಿಸಿದ್ದೇವೆ.
*ಶ್ರೀಧರ ಮಲ್ಲಾಡ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next