ಮೈಸೂರು: ದೇಶದಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ. ಆ ಒಂದು ದೃಷ್ಟಿಯಿಂದ ಎಲ್ಲಾ ಮಿತ್ರ ಪಕ್ಷಗಳು ಒಗ್ಗೂಡಿ ದೇಶದಲ್ಲಿ ನಡೆಯುತ್ತಿರುವ ದುರಾಡಳಿತ ವಿರುದ್ಧ ಒಂದು ತೀರ್ಮಾನ ಮಾಡುತ್ತಾರೆ. ಒಗ್ಗಟ್ಟಾಗಿ ಮುಂಬರುವ ಲೋಕಸಭಾ ಚುನಾವಣೆ ತಯಾರಿ ನಡೆಯುತ್ತದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಸೋಮವಾರ ನಡೆಯುವ ಕಾಂಗ್ರೆಸ್ ಮಿತ್ರ ಪಕ್ಷಗಳ ಸಭೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳು ಆಗಿವೆ. ದೇಶದಲ್ಲಿರುವ ಎಲ್ಲಾ ಪ್ರತಿಪಕ್ಷಗಳು ಭಾಗಿಯಾಗುತ್ತವೆ. ಯಾರು ಸಂವಿಧಾನ, ಪ್ರಜಾಪ್ರಭುತ್ವ ಉಳಿಸಬೇಕು ಎಂದು ಬಯಸುತ್ತಾರೆ ಅವರೆಲ್ಲರೂ ಭಾಗಿಯಾಗುತ್ತಾರೆ ಎಂದರು.
ದಸರಾ ಸಿದ್ಧತೆ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಇಂದು ಅಧಿಕಾರಿಗಳ ಸಭೆ ಕರೆದಿದ್ದೇನೆ. ದಸರಾ ಜಂಬೂ ಸವಾರಿಗೆ ಆನೆಗಳು ಇನ್ನಿತರ ತಯಾರಿ ಬಗ್ಗೆ ಸವಿಸ್ತಾರ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಇದನ್ನೂ ಓದಿ:ಪ್ರತಿಪಕ್ಷಗಳು ಒಟ್ಟಾದರೂ ಪ್ರಧಾನಿ ಮೋದಿಯವರನ್ನು ಸೋಲಿಸಲು ಸಾಧ್ಯವಿಲ್ಲ: ಬೊಮ್ಮಾಯಿ
ಸಚಿವ ಆದ ಬಳಿಕ ಮೊದಲ ಬಾರಿಗೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ್ದೇನೆ. ವಿಶೇಷವಾಗಿ ಈ ಮೃಗಾಲಯದಲ್ಲಿ 5 ಸಿಂಹಗಳಿವೆ, ರಾಜು ಮತ್ತು ನಿರ್ಭಯ ಸಿಂಹಗಳಿಗೆ ಜನಿಸಿದ 3 ಮರಿಗಳಿಗೆ ಇಂದು ಸೂರ್ಯ, ಚಂದ್ರ, ಕಬಿನಿ ಎಂದು ನಾಮಕರಣ ಮಾಡಿದ್ದೇವೆ. ಇಲ್ಲಿನ ಅಧಿಕಾರಿಗಳು ಮೃಗಾಲಯವನ್ನು ತುಂಬಾ ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಲಕ್ಷಾಂತರ ಜನ ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ನಮ್ಮ ಮುಂದಿನ ಪೀಳಿಗೆಗೆ ಪ್ರಾಣಿಗಳ ಕುರಿತು ತಿಳುವಳಿಕೆ ನೀಡುವಲ್ಲಿ ಮೃಗಾಲಯ ಪ್ರಮುಖವಾಗುತ್ತಿದೆ. ನನ್ನ ಇಲಾಖೆಯ ವತಿಯಿಂದ ಮೃಗಾಲಯದ ಅಭಿವೃದ್ಧಿಯ ಕುರಿತು ಸಭೆಯನ್ನೂ ನಡೆಸುತ್ತೇನೆ ಎಂದು ಈಶ್ವರ್ ಖಂಡ್ರೆ ಹೇಳಿದರು.