ಕೋಲಾರ: ಜಿಲ್ಲೆಯ ಒಟ್ಟು 15 ಕೇಂದ್ರಗಳಲ್ಲಿ ಆ.7 ಭಾನುವಾರ ನಡೆಯಲಿರುವ ಕೆಪಿಟಿಸಿಎಲ್ ಕಿರಿಯ ಸಹಾಯಕರ ಹುದ್ದೆಗಳ ನೇಮಕಾತಿ ಪರೀಕ್ಷೆಗೆ 6336 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದು, ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದರು.
ತಮ್ಮ ಕಚೇರಿ ನ್ಯಾಯಾಂಗ ಸಭಾಂಗ ಣದಲ್ಲಿ ನಡೆದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರೀಕ್ಷೆಯಲ್ಲಿ ಯಾವುದೇ ಲೋಪಗಳಿಗೆ ಅವಕಾಶವಿಲ್ಲದಂತೆ ಎಲ್ಲಾ ಅಗತ್ಯಕ್ರಮಗಳನ್ನು ಕೈಗೊಳ್ಳಲು ಸೂಚಿಸಿ, ಕೇಂದ್ರದ ಹೊರಗೆ ಹಾಗೂ ಒಳಗೆ ಸ್ವತ್ಛತೆಗೆ ಒತ್ತು ನೀಡಿ, ಬೆಳಕು,ಗಾಳಿ ಇರುವಂತೆ ನೋಡಿಕೊಳ್ಳಿ ಎಂದರು. ಅಭ್ಯರ್ಥಿಗಳಿಗೆ ಶುದ್ಧ ಕುಡಿವ ನೀರು, ಶೌಚಾಲಯ ಬಳಕೆಗೆ ಯೋಗ್ಯವಾಗಿರುವಂತೆ ನೋಡಿಕೊಳ್ಳಿ ಎಂದ ಅವರು, ಪರೀಕ್ಷಾ ಕೇಂದ್ರಗಳಲ್ಲಿ ಮೈಕ್ ಬಳಸಿ ಅಭ್ಯರ್ಥಿಗಳಿಗೆ ಸೂಚನೆಗಳನ್ನು ಸಮರ್ಪಕವಾಗಿ ನೀಡಿ, ಪರೀಕ್ಷಾ ಕೇಂದ್ರದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ಮೊಬೈಲ್ ಜಾಮರ್ ಅಳವಡಿಸಲಿದ್ದಾರೆ ಎಂದು ತಿಳಿಸಿದರು.
ನಿಷೇಧಾಜ್ಞೆ ಜಾರಿ: ಪರೀಕ್ಷಾ ಕೇಂದ್ರಗಳ ಸುತ್ತ ಪರೀಕ್ಷೆ ನಡೆಯುವ ದಿನ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಲಾಗುವುದು. ಪರೀಕ್ಷಾ ಕೇಂದ್ರಕ್ಕೆ ಬರುವ ಸಿಬ್ಬಂದಿಗೂ ಸಹಿತ ಮೊಬೈಲ್ ಬಳಕೆ ನಿಷೇಧಿಸಿದ್ದು, ಯಾವುದೇ ಅವ್ಯವಹಾರಗಳಿಗೆ ಅವಕಾಶವಿಲ್ಲದಂತೆ ಎಲ್ಲಾ ಅಗತ್ಯ ಕ್ರಮಕೈಗೊಳ್ಳಿ, ಕೇಂದ್ರಗಳಲ್ಲಿ ಭದ್ರತೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿ ಎಂದು ಸೂಚಿಸಿದರು.
15 ಕೇಂದ್ರಗಳಲ್ಲೂ ಸಿದ್ಧತೆ: ಪರೀಕ್ಷೆಯ ನೋಡಲ್ ಅಧಿಕಾರಿಯೂ ಆಗಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮ ಚಂದ್ರಪ್ಪ ಸಿದ್ದತೆಗಳ ಕುರಿತು ಮಾಹಿತಿ ನೀಡಿ, ಜಿಲ್ಲಾ ಕೇಂದ್ರವಾದ ಕೋಲಾರದಲ್ಲೇ 12 ಕೇಂದ್ರ ಗಳಿದ್ದು, ಉಳಿದಂತೆ ಮಾಲೂರಿನ ಮೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
ಎಲ್ಲಾ ಕೇಂದ್ರಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ, ಅಭ್ಯರ್ಥಿಗಳು ಕೇಂದ್ರ ಪ್ರವೇಶಿಸುವ ಮುನ್ನಾ 2 ಪ್ರತ್ಯೇಕ ಕಡೆಗಳಲ್ಲಿ ಪರಿಶೀಲನೆಗೆ ಕ್ರಮವಹಿಸಲಾಗಿದೆ ಎಂದ ಅವರು ಅಭ್ಯರ್ಥಿಗಳು ಅರ್ಧತೋಳಿನ ಅಥವಾ ಮೊಣಕೈ ಕಾಣುವ ರೀತಿಯ ಬಟ್ಟೆ ಧರಿಸಿರಬೇಕು, ಶೂ ಧರಿಸುವಂತಿಲ್ಲ, ಕಡ್ಡಾಯವಾಗಿ ಗುರುತಿನ ಚೀಟಿ ತಂದಿರಬೇಕು, ಬಸ್‌ಪಾಸ್, ಆಧಾರ್ ಕಾರ್ಡ್, ಪಾನ್‌ಕಾರ್ಡ್, ಚಾಲನಾ ಪರವಾನಗಿ ಯಾವುದಾದರೊಂದು ಗುರುತಿನ ಚೀಟಿ ಇರಬೇಕು ಎಂದರು.
ಪರೀಕ್ಷೆ ಬೆಳಗ್ಗೆ 10-30 ರಿಂದ 12-30 ರವರೆಗೂ ಹಾಗೂ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೂ ಎರಡು ಅವಧಿಯಲ್ಲಿ ನಡೆಯಲಿದೆ ಎಂದರು. ಪರೀಕ್ಷಾ ಕೇಂದ್ರ ಮುಖ್ಯಅಧೀಕ್ಷಕರು, ಮಾರ್ಗಾಧಿಕಾರಿಗಳಿದ್ದರು.