ಚಿತ್ರದುರ್ಗ: ಜಿಲ್ಲಾ ಕೇಂದ್ರದಲ್ಲಿ ನ. 15 ರಂದು ಸಂತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕನಕ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನಕ ಜಯಂತಿ ಅಂಗವಾಗಿ ನ. 15 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಕನಕ ವೃತ್ತದಲ್ಲಿ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು. ನಂತರ ಕನಕದಾಸರ ಭಾವಚಿತ್ರದೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಮೆರವಣಿಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಕನಕ ವೃತ್ತದಿಂದ ಆರಂಭವಾಗಲಿದೆ. ಗಾಂ ಧಿ ವೃತ್ತ, ಮೈಸೂರು ಬ್ಯಾಂಕ್, ಅಂಬೇಡ್ಕರ್ ವೃತ್ತ ಮಾರ್ಗದಲ್ಲಿ ಸಂಚರಿಸಿ ಮಧ್ಯಾಹ್ನ 12ಕ್ಕೆ ತರಾಸು ರಂಗಮಂದಿರವನ್ನು ತಲುಪಲಿದೆ. ಅಲ್ಲಿ ವೇದಿಕೆ ಕಾರ್ಯಕ್ರಮ ನಡೆಯುತ್ತದೆ ಎಂದರು. ಕಾರ್ಯಕ್ರಮದ ಮುನ್ನಾ ದಿನ ಕನಕ ವೃತ್ತದ ಬಳಿ ಸ್ವತ್ಛತಾ ಕೆಲಸ ಮಾಡಬೇಕು. ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಲಾಗುವುದು. ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ತಪ್ಪದೇ ಭಾಗವಹಿಸುವಂತೆ ನಿರ್ದೇಶನ ನೀಡಲಾಗುವುದು ಎಂದು ಎಂದು ತಿಳಿಸಿದರು.
ಜಿಲ್ಲಾ ಕುರುಬ ಸಮಾಜದ ಪ್ರಧಾನ ಕಾರ್ಯದರ್ಶಿ ಬಿ.ಎಚ್. ಗೌಡ್ರು ಮಾತನಾಡಿ, ಕನಕ ಜಯಂತಿ ಅಂಗವಾಗಿ ನ. 14 ರಂದು ನಗರದಲ್ಲಿ ಬೈಕ್ ರ್ಯಾಲಿ ಆಯೋಜಿಸಲಾಗಿದೆ. ಸುಮಾರು 300 ರಿಂದ 400 ಜನರು ಬೈಕ್‌ಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದ್ದಾರೆ. ನ. 15 ರಂದು ಸಮವಸ್ತ್ರ ಧರಿಸಿದ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ ನಡೆಯಲಿದೆ.
ಕನಕದಾಸರು ಒಂದು ಜಾತಿಗೆ ಸೀಮಿತರಲ್ಲ, ಅವರು ವಿಶ್ವಮಾನವರು. ಹೀಗಾಗಿ ಕಾರ್ಯಕ್ರಮಗಳಲ್ಲಿ ಎಲ್ಲ ಸಮುದಾಯದವರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಶ್ರೀರಾಮ್, ಜಿಲ್ಲಾ ಮಹಿಳಾ ಕುರುಬ ಸಮಾಜದ ಅಧ್ಯಕ್ಷೆ ಪಿ.ಕೆ. ಮೀನಾಕ್ಷಿ ಮತ್ತಿತರರು ಭಾಗವಹಿಸಿದ್ದರು