ಬಂಟ್ವಾಳ: ಈ ವರ್ಷದ ಕಂಬಳ ಸೀಸನ್ ಮುಗಿಯುತ್ತಾ ಬರುತ್ತಿದ್ದು, ಇದೀಗ ಬಂಟ್ವಾಳದ ನಾವೂರು ಗ್ರಾಮದಲ್ಲಿ ಮತ್ತೂಂದು ಕಂಬಳ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಮಂಗಳೂರಿನ ಬಂಗ್ರಕೂಳೂರಿನಲ್ಲಿ ರವಿವಾರ ಮುಕ್ತಾಯಗೊಂಡ ಕಂಬಳದಲ್ಲಿ ಎ. 16ರಂದು ನಾವೂರಿನ ಕಂಬಳ ನಡೆಯುವ ಸಾಧ್ಯತೆಯ ಕುರಿತು ಘೋಷಣೆ ಮಾಡಲಾಗಿದ್ದು, ಮಳೆಯ ಕಾರಣಕ್ಕೆ ಒಂದು ವಾರ ಹಿಂದೆ ಹೋಗುವ ಸಾಧ್ಯತೆಯೂ ಇದೆ.
ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಈ ಕಂಬಳ ಕೂಟ ನಡೆಯಲಿದ್ದು, ಕಾವಳಕಟ್ಟೆಯ ಮೂಡೂರು-ಪಡೂರು ಕಂಬಳ ನಿಂತ ಬಳಿಕ ಇದೀಗ ಮತ್ತೆ ಅವರ ನೇತೃತ್ವದಲ್ಲಿ ಕಂಬಳ ಆಯೋಜನೆಯ ಸಿದ್ಧತೆ ನಡೆದಿದೆ.
ಜಿಲ್ಲಾ ಕಂಬಳ ಸಮಿತಿ ಅನುಮತಿ ಸೇರಿದಂತೆ ಇನ್ನಿತರ ವಿಚಾರಗಳು ಇನ್ನೂ ಅಂತಿಮಗೊಳ್ಳದೆ ಇರುವುದರಿಂದ ಇದೇ ವರ್ಷ ಕಂಬಳ ನಡೆಯುತ್ತದೆಯೇ ಎಂಬುದು ಕೂಡ ಅಧಿಕೃತ ಘೋಷಣೆಯಾಗಿಲ್ಲ. ನಾವೂರು ಗ್ರಾಮದ ಕೂಡಿಬೈಲು ಎಂಬ ಪ್ರದೇಶ ಗದ್ದೆಯಲ್ಲಿ ಕಂಬಳಕ್ಕೆ ಜೋಡುಕರೆಗಳು ಸಿದ್ಧಗೊಳ್ಳುತ್ತಿದ್ದು, ಉದ್ಯಮಿ ಪಿಯೂಸ್ ಎಲ್.ರಾಡ್ರಿಗಸ್ ಅವರ ನೇತೃತ್ವದಲ್ಲಿ ಕರೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಜಿಲ್ಲಾ ಕಂಬಳ ಸಮಿತಿಯ ಈ ವರ್ಷದ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಎ. 9ರ ವೇಣೂರು ಸೂರ್ಯ-ಚಂದ್ರ ಕಂಬಳಕ್ಕೆ ಈ ವರ್ಷದ ಕಂಬಳ ಸೀಸಸ್ ಮುಕ್ತಾಯಗೊಳ್ಳಲಿದ್ದು, ಅದರ ಬಳಿಕ ನಾವೂರಿನ ಕಂಬಳಕ್ಕೆ ಅವಕಾಶ ಕೋರಲಾಗಿದೆ. ಈಗಾಗಲೇ ಎ. 16ಕ್ಕೆ ನಾವೂರು ಕಂಬಳ ನಡೆಯುವ ಘೋಷಣೆಯಾಗಿದ್ದರೂ, ಪ್ರಸ್ತುತ ಕಳೆದ ಕೆಲವು ದಿನಗಳಿಂದ ಮಳೆ ಕಾಣಿಸಿಕೊಂಡಿದೆ. ಹೀಗಾಗಿ ಅದನ್ನು ಒಂದು ವಾರ ಮುಂದಕ್ಕೆ ಹಾಕಿ ಎ. 23-24ಕ್ಕೆ ನಡೆಸುವ ಕುರಿತು ನಾವೂರು ಕಂಬಳ ಸಮಿತಿ ಚಿಂತನೆ ನಡೆಸುತ್ತಿದೆ.
ಮೂಡೂರು-ಪಡೂರು ಕಂಬಳ?
ಹಿಂದೆ ಕಾವಳಕಟ್ಟೆಯಲ್ಲಿ ಮೂಡೂರು-ಪಡೂರು ಹೆಸರಿನಲ್ಲಿ ಕಂಬಳ ನಡೆಯುತ್ತಿದ್ದು, ನಾವೂರಿನಲ್ಲೂ ಅದೇ ಹೆಸರಿನಲ್ಲಿ ಕಂಬಳ ನಡೆಸುವ ಕುರಿತು ಸಮಿತಿ ಆಲೋಚಿಸಿದೆ. ಅದೇ ಹೆಸರನ್ನು ಉಳಿಸುವ ಚಿಂತನೆಯಾದರೆ, ಮತ್ತೂಂದೆಡೆ ಕಂಬಳ ನಡೆಯುವ ಸ್ಥಳ ನಾವೂರಿನ ಪಕ್ಕದಲ್ಲೇ ದೇವಶ್ಯಪಡೂರು ಹಾಗೂ ದೇವಶ್ಯಮೂಡೂರು ಎಂಬ ಗ್ರಾಮಗಳಿವೆ. ಹೀಗಾಗಿ ಅದೇ ಹೆಸರು ಹೊಂದಿಕೊಳ್ಳಲಿದ್ದು, ಜತೆಗೆ ನಿರ್ಮಾಣವಾಗುತ್ತಿರುವ ಕಂಬಳದ ಜೋಡುಕರೆಗಳು ಮೂಡಾಯಿ- ಪಡ್ಡಾಯಿ ಬರುತ್ತದೆ ಎಂದು ಸಮಿತಿಯ ಪ್ರಮುಖರು ತಿಳಿಸಿದ್ದಾರೆ.
ದಿನಾಂಕ ಅಂತಿಮಗೊಂಡಿಲ್ಲ
ಪ್ರಸ್ತುತ ಕಂಬಳದ ಕರೆಗಳ ಕೆಲಸ ನಡೆಯುತ್ತಿದ್ದು, ಇನ್ನೂ ಕೂಡ ದಿನಾಂಕ ಅಂತಿಮಗೊಂಡಿಲ್ಲ. ಒಂದೆಡೆ ಮಳೆಯ ಲಕ್ಷಣ ಕೂಡ ಇದ್ದು, ಹೀಗಾಗಿ ದಿನಾಂಕ ಘೋಷಿಸಿಲ್ಲ. ಎ.1ಕ್ಕೆ ನಾವೂರು ಕಂಬಳದ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ.
–ಪಿಯೂಸ್ ಎಲ್.ರಾಡ್ರಿಗಸ್, ನಾವೂರು ಕಂಬಳದ ಮುಂದಾಳು.