ದಾವಣಗೆರೆ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯ ಮಹತ್ವಾಕಾಂಕ್ಷಿ ʼಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ’ ತಯಾರಿಕೆ ಒಂದೂವರೆ ವರ್ಷ ವಿಳಂಬವಾಗಿ ಶುರುವಾಗಿದ್ದು, ಈಗಷ್ಟೇ ರಾಜ್ಯಾದ್ಯಂತ ಗ್ರಾಪಂ ಸದಸ್ಯರಿಗೆ ಹಾಗೂ ಗ್ರಾಪಂ ಮಟ್ಟದ ಅಧಿಕಾರಿಗಳಿಗೆ ತರಬೇತಿ ಶುರುವಾಗಿದೆ.
ಗ್ರಾಪಂಗಳಿಗೆ ಹೊಸ ಆಡಳಿತ ಮಂಡಳಿ ಬಂದ ಮೂರು ತಿಂಗಳಲ್ಲಿ ತಯಾರಿಸಬೇಕಿದ್ದ “ಗ್ರಾಪಂ ದೂರದೃಷ್ಟಿ ಯೋಜನೆ’ ಒಂದೂವರೆ ವರ್ಷದ ಬಳಿಕ ಯೋಜನೆ ತಯಾರಿಗೆ ಸಿದ್ಧತೆ ನಡೆದಿದೆ. ರಾಜ್ಯದ ಎಲ್ಲ ಗ್ರಾಪಂಗಳ ಚುನಾಯಿತ ಜನಪ್ರತಿನಿಧಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳಿಗೆ ರಾಜ್ಯದ 233 ತಾಪಂಗಳ ಸಾಮರ್ಥ್ಯ ಸೌಧ, ತಾಪಂ ಸಭಾಂಗಣ ಹಾಗೂ ಇತರೆ ಸಭಾಂಗಣದಲ್ಲಿ ಮೂರು ದಿನಗಳ ತರಬೇತಿ ಸೆ.21ರಿಂದ ಆರಂಭಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 309ರ ಅನ್ವಯ ಗ್ರಾಪಂಗಳಿಗೆ ಚುನಾವಣೆ ನಡೆದು ಹೊಸದಾಗಿ ಅಸ್ತಿತ್ವಕ್ಕೆ ಬಂದ 90 ದಿನಗಳ ಒಳಗಾಗಿ ಮುಂದಿನ ಐದು ವರ್ಷಗಳಿಗೆ ದೂರದೃಷ್ಟಿ ಯೋಜನೆಯೊಂದನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ರಾಜ್ಯದಲ್ಲಿ 2020, ಡಿಸೆಂಬರ್ ತಿಂಗಳಲ್ಲಿ ಗ್ರಾಪಂಗಳಿಗೆ ಚುನಾವಣೆ ನಡೆದಿದ್ದು ಅಧಿನಿಯಮದನ್ವಯ ಮೂರು ತಿಂಗಳೊಳಗೆ ದೂರದೃಷ್ಟಿ ಯೋಜನೆ ಸಿದ್ಧಪಡಿಸಬೇಕಿತ್ತು. ಕೋವಿಡ್-19 ಕಾರಣದಿಂದಾಗಿ ಈ ಕಾರ್ಯ ನಡೆಯದೆ ಭಾರಿ ವಿಳಂಬವಾಗಿ ಈಗ ಯೋಜನೆ ತಯಾರಿಕೆ ಪ್ರಕ್ರಿಯೆ ಆರಂಭವಾಗಿದೆ.
ಸುಸ್ಥಿರ ಅಭಿವೃದ್ಧಿಗೆ ಆದ್ಯತೆ: ಕೇಂದ್ರ ಸರ್ಕಾರದ ದೂರದೃಷ್ಟಿ ಯೋಜನೆ ತಯಾರಿಸುವಾಗ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಆದ್ಯತೆ ನೀಡಬೇಕು. ಬಡತನ ನಿವಾರಣೆ, ಕೌಶಲ್ಯಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಮಹಿಳೆ ಹಾಗೂ ಮಕ್ಕಳ ಕಲ್ಯಾಣ, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಇನ್ನಿತರ ಸುಸ್ಥಿರ ಅಭಿವೃದ್ಧಿ ಗುರಿಗಳನ್ನೊಳಗೊಂಡ ಅಂಶಗಳಿಗೆ ಯೋಜನೆಯಲ್ಲಿ ಪ್ರಾಧಾನ್ಯತೆ ನೀಡಬೇಕು.
ಪಂಚಾಯತ್‌ರಾಜ್ ಸಂಸ್ಥೆಗಳು ನಿರ್ವಹಿಸಬೇಕಾದ ಪ್ರಕಾರ್ಯಗಳನ್ನೂ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಇಲಾಖೆ ಮಾರ್ಗಸೂಚಿ ನೀಡಿದ್ದು ಇದರನ್ವಯ ಗ್ರಾಪಂ ಸದಸ್ಯರು ಯೋಜನೆ ಸಿದ್ಧಪಡಿಸಬೇಕಾಗಿದೆ.ಜಾಗತಿಕ ಮಟ್ಟದಲ್ಲಿ ಭಾರತ 2030ರೊಳಗೆ ಸುಸ್ಥಿರ ಅಭಿವೃದ್ಧಿ ಸಾಧಿಸುವ ಗುರಿ ಹೊಂದಲಾಗಿದ್ದು ಗ್ರಾಮೀಣ ಪ್ರದೇಶದಲ್ಲಿನ ಸಾಧನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಇತರ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದೊಂದಿಗೆ ಅನುಷ್ಠಾನಗೊಳಿಸಬೇಕು. ಈ ಗುರಿ ಸಾಧನೆಗಾಗಿ ರಚಿಸಿದ ತಜ್ಞರ ಸಮಿತಿಯ ವರದಿಯಂತೆ ಗ್ರಾಪಂಗಳಲ್ಲಿ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ಯೋಜನೆ ಹಾಕಿಕೊಳ್ಳಬೇಕು.
ಗ್ರಾಪಂಗಳು ದೂರದೃಷ್ಟಿ ಯೋಜನೆ ಸಿದ್ಧಪಡಿಸುವ ಸಂದರ್ಭದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸಹಕಾರಿಯಾಗುವಂತೆ ಮಾನವ ಅಭಿವೃದ್ಧಿ ಮತ್ತು ಸ್ಥಳೀಕರಣಗೊಂಡಿರುವ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವತ್ತ ಗಮನಹರಿಸಬೇಕು ಎಂದು ಸರ್ಕಾರ ಈಗಾಗಲೇ ಗ್ರಾಪಂಗಳಿಗೆ ನಿರ್ದೇಶನವೂ ನೀಡಿದೆ.
ಯೋಜನಾ ವರದಿ ತಂತ್ರಾಂಶದಲ್ಲಿ ಅಳವಡಿಕೆ
ಗ್ರಾಪಂ ಹಂತದ ದೂರದೃಷ್ಟಿ ಯೋಜನೆ ಸಿದ್ಧಪಡಿಸಲು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆ ವಿವರವಾದ ಮಾರ್ಗಸೂಚಿ ಸಿದ್ಧಪಡಿಸಿದ್ದು ಅದರನ್ವಯ ರಾಜ್ಯದ ಎಲ್ಲ ಗ್ರಾಪಂಗಳು ಕ್ರಮ ವಹಿಸಬೇಕು. ಗ್ರಾಪಂ ದೂರದೃಷ್ಟಿ ಯೋಜನಾ ವರದಿ ಸಿದ್ಧಪಡಿಸಿದ ಬಳಿಕ ಅದನ್ನು ಪಂಚತಂತ್ರ 2.0 ತಂತ್ರಾಂಶದಲ್ಲಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಆದೇಶಿಸಿದ್ದಾರೆ.
ಎಚ್.ಕೆ. ನಟರಾಜ