Advertisement

ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆ 

09:58 AM Sep 12, 2018 | Team Udayavani |

ಮಹಾನಗರ: ಗಣೇಶ ಚತುರ್ಥಿಗೆ ಇನ್ನೆರಡು ದಿನಗಳು ಬಾಕಿ ಇದ್ದು, ದೇವಸ್ಥಾನ, ಮನೆ-ಮನೆಗಳಲ್ಲಿ ವಿಶೇಷ ಸಿದ್ಧತೆಗಳು ಆರಂಭವಾಗಿವೆ. ಕೆಲವೊಂದು ಸಂಘ-ಸಂಸ್ಥೆಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೂ ಬಿರುಸಿನ ತಯಾರಿಯಲ್ಲಿ ತೊಡಗಿವೆ.

Advertisement

ಗಣೇಶನ ಹಬ್ಬಕ್ಕೆಂದು ಸ್ಥಳೀಯವಾಗಿಯಲ್ಲದೆ, ಮಂಡ್ಯ, ಬೆಂಗಳೂರು, ಹುಬ್ಬಳ್ಳಿ, ಉತ್ತರ ಕರ್ನಾಟಕ ಭಾಗದಿಂದ ಹೂವು, ಹಣ್ಣು, ತರಕಾರಿಗಳು ನಗರಕ್ಕೆ ಬಂದಿದ್ದು ಬಿರುಸಿನ ವ್ಯಾಪಾರ ನಡೆಯುತ್ತಿದೆ. ವಿಶೇಷವಾಗಿ ಆ್ಯಪಲ್‌, ಕಿತ್ತಳೆ, ಮುಸುಂಬಿ, ಸೀಯಾಳ ಮತ್ತು ಇತರ ಹಣ್ಣುಗಳು, ಬೀನ್ಸ್‌, ಆಲೂಗಡ್ಡೆ, ಟೊಮೇಟೊ ಮುಂತಾದ ತರಕಾರಿಗಳನ್ನು ನಗರಕ್ಕೆ ತರಿಸಲಾಗಿದೆ.

ಆ್ಯಪಲ್‌ ಬೆಲೆ ಕೆಲವೆಡೆ ಕೆ.ಜಿ.ಗೆ 200 ರೂ. ದಾಟಿದೆ. 30 ರೂ.ಗಳಿದ್ದ ಸೀಯಾಳ ಪ್ರಸ್ತುತ 35ರಿಂದ 40 ರೂ.ಗಳವರೆಗೂ ಮಾರಾಟವಾಗುತ್ತಿದೆ.

ಹೂವಿನ ಮಾರಾಟ
ಕಂಕನಾಡಿ, ಬಿಜೈ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಮುಂಭಾಗ, ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್‌ ಮುಂತಾದೆಡೆ ಗಣೇಶನ ಹಬ್ಬಕ್ಕಾಗಿ ಹೂವು ಮಾರಾಟಗಾರರು ಉತ್ತರ ಕನ್ನಡ ಭಾಗಗಳಿಂದ ಆಗಮಿಸಿದ್ದು, ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಗುರುವಾರ ಗಣೇಶ ಚತುರ್ಥಿಯಾದ್ದರಿಂದ ಮಂಗಳವಾರ ಹೂವು ಖರೀದಿ ಪ್ರಕ್ರಿಯೆ ಕಡಿಮೆ ಇದೆ. ಈಗಾಗಲೇ ಮಲ್ಲಿಗೆ, ಸೇವಂತಿಗೆ, ಗುಲಾಬಿ ಮುಂತಾದ ಹೂವುಗಳನ್ನು ಮಾರಾಟಗಾರರು ನಗರಕ್ಕೆ ತಂದಿದ್ದು, ಕೆಲವು ಕಡೆ ಸೇವಂತಿಗೆ ಮತ್ತು ಕನಕಾಂಬರ ಮೊಳಕ್ಕೆ 20 ರೂ., ಮಲ್ಲಿಗೆ ಮೊಳಕ್ಕೆ 150 ರೂ.ಗಳಿಂದ 200 ರೂ., ಗುಲಾಬಿ 10 ರೂ.ಗಳಿಗೆ ಮಾರಾಟವಾಗುತ್ತಿದೆ. ಆದರೆ ಯಾವುದೇ ವ್ಯಾಪಾರಸ್ಥರಲ್ಲಿಯೂ ಏಕದರ ಇಲ್ಲ.

ಮಣ್ಣಿನ ಗಣಪನ ಆರಾಧನೆ
ವಿಶೇಷವೆಂದರೆ ಇತ್ತೀಚಿನ ವರ್ಷಗಳಲ್ಲಿ ಪಿಓಪಿ ಗಣಪನಿಗೆ ಬೇಡಿಕೆ ಇಲ್ಲದಾಗಿದ್ದು, ನಿಸರ್ಗಸ್ನೇಹಿ ಗಣಪನ ಆರಾಧನೆಗೆ ಮಂಗಳೂರಿನ ಜನತೆ ಮುಂದಾಗಿದ್ದಾರೆ. ಈಗಾಗಲೇ ಮೂರ್ತಿ ತಯಾರಿಕೆ ಕಾರ್ಯಗಳೂ ಮುಗಿದಿದ್ದು, ಶಾಸ್ತ್ರಬದ್ಧವಾಗಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆಗೆ ಕೊಂಡೊಯ್ಯುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರತಿಷ್ಠಾಪನ ಕಾರ್ಯಕ್ಕೂ ಮುನ್ನ ನಡೆಯಬೇಕಾದ ಧಾರ್ಮಿಕ ವಿಧಿವಿಧಾನಗಳಿಗೂ ಜನ ಶ್ರದ್ಧಾ ಭಕ್ತಿಯೊಂದಿಗೆ ಸಿದ್ಧತೆ ನಡೆಸುತ್ತಿದ್ದಾರೆ.

Advertisement

ಕಬ್ಬಿಗೂ ಬೇಡಿಕೆ
ಗಣೇಶೋತ್ಸವ ಸಂದರ್ಭದಲ್ಲಿ ಮುಖ್ಯವಾಗಿ ಬೇಕಾಗುವ ಕಬ್ಬಿಗೂ ನಗರದಲ್ಲಿ ಬೇಡಿಕೆ ಕುದುರಿದೆ. ಈಗಾಗಲೇ ಲೋಡ್‌ ಗಟ್ಟಲೆ ಕಬ್ಬು ನಗರಕ್ಕಾಗಮಿಸಿದ್ದು, ನಗರದ ಉರ್ವ ಮಾರ್ಕೆಟ್‌, ಹಂಪನಕಟ್ಟೆ ಮುಂತಾದೆಡೆ ಕಬ್ಬಿನ ಮಾರಾಟ ನಡೆಯುತ್ತಿದೆ. ಮೋದಕಪ್ರಿಯನಿಗೆ ಇಷ್ಟವಾಗುವ ಲಡ್ಡುಗಳ ತಯಾರಿಕೆ ಕಾರ್ಯವೂ ಈಗಾಗಲೇ ಮುಗಿದಿದೆ.

ಅಲ್ಲಲ್ಲಿ ಚೌತಿ ಸಂಭ್ರಮಕ್ಕೆ ಸಿದ್ಧತೆ
ಗಣೇಶೋತ್ಸವಕ್ಕೆ ವಿವಿಧ ದೇವಸ್ಥಾನಗಳಲ್ಲಿ ಈಗಾಗಲೇ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ಕದ್ರಿ ಶ್ರೀ ಮಂಜುನಾಥ ಸನ್ನಿಧಿ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ಮಹತೋಭಾರ ಶ್ರೀ ಮಂಗಳಾ ದೇವಿ ದೇವಸ್ಥಾನ, ಬಿಕರ್ನಕಟ್ಟೆ ಶ್ರೀ ಬಲಮುರಿ ಸಿದ್ಧಿವಿನಾಯಕ ದೇವಸ್ಥಾನ ಸಹಿತ ವಿವಿಧ ದೇವಸ್ಥಾನಗಳಲ್ಲಿ ಗಣೇಶನಿಗೆ ನಾನಾ ರೀತಿಯ ಪೂಜಾ ವಿಧಿ- ವಿಧಾನಗಳು ನಡೆಯಲಿವೆ. ಪ್ರತಿ ವರ್ಷದಂತೆ ಈ ಬಾರಿಯೂ ಸಂಘನಿಕೇತನ ಗಣೇಶೋತ್ಸವ, ಕೋಡಿಕಲ್‌ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಮತ್ತು ಗಣೇಶೋತ್ಸವ ಸಮಿತಿಯ ಗಣೇಶೋತ್ಸವ, ಬಂಟ್ಸ್‌ಹಾಸ್ಟೆಲ್‌ ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದಿಂದ 15ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆ ಹಬ್ಬ, ಅಷ್ಟೋತ್ತರ ಸಹಸ್ರ ನಾರಿಕೇಲ ಮಹಾ ಗಣಯಾಗ ಕಾರ್ಯಕ್ರಮಗಳಿವೆ.

ಶ್ರೀ ವಿದ್ಯಾ ಗಣಪತಿ ಸೇವಾ ಟ್ರಸ್ಟ್‌, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದ ವತಿಯಿಂದ ಬಿಜೈ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಆವರಣದಲ್ಲಿ ನಡೆಯಲಿದೆ. ದೇವಿನಗರ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಬೊಕ್ಕಪಟ್ಣ ಯುವಜನ ಸಂಘ ‘ಅಕ್ಷಯ’, ಬೊಕ್ಕಪಟ್ಣ ದೋಸ್ತ್ ಕ್ರಿಕೆಟ್‌ ಟೀಂ, ಕೊಟ್ಟಾರ ಶ್ರೀ ವಿದ್ಯಾ ಸರಸ್ವತಿ ಕ್ಷೇತ್ರ, ಜಪ್ಪಿನಮೊಗರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಶ್ರದ್ಧಾ ಭಕ್ತಿಯ ಗಣೇಶನ ಹಬ್ಬ ಸಂಭ್ರಮ ನಡೆಯಲಿದೆ.

ಮಂಗಳೂರು ಗಣೇಶೋತ್ಸವ
ಹಿಂದೂ ಯುವ ಸೇನೆಯಿಂದ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಮಂಗಳೂರು ಗಣೇಶೋತ್ಸವಕ್ಕೆ ಈ ಬಾರಿ 26ನೇ ವರ್ಷದ ಸಂಭ್ರಮವಾಗಿದ್ದು, ಭರದಿಂದ ಸಿದ್ಧತಾ ಕಾರ್ಯ ಸಾಗಿದೆ. ಕೇಂದ್ರ ಮೈದಾನದ ಛತ್ರಪತಿ ಶಿವಾಜಿ ಮಂಟಪದಲ್ಲಿ ಜರ ಗುವ ಈ ಕಾರ್ಯಕ್ರಮ ಮಂಗಳೂರಿನಲ್ಲೇ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಏಳು ದಿನಗಳ ಕಾಲ ಗಣೇಶನಿಗೆ ವಿವಿಧ ಪೂಜೆ, ಪುನಸ್ಕಾರಾದಿಗಳು ನಡೆಯಲಿದ್ದು, 19ರಂದು ವಿಸರ್ಜನ ಮೆರವಣಿಗೆಯೂ ವಿಶಿಷ್ಟವಾಗಿ ಜರಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next