Advertisement

ಪ್ರವಾಹ ನಿಭಾವಣೆಗೆ ತಯಾರಿ ಅಗತ್ಯ

01:04 AM Aug 12, 2019 | Sriram |

ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳು ಭೀಕರ ಪ್ರಳಯದಿಂದ ತತ್ತರಿಸಿ ಹೋಗಿವೆ. ಕಳೆದ ಸುಮಾರು ಹತ್ತು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಈ ಮೂರು ರಾಜ್ಯಗಳ ಎಲ್ಲ ನದಿಗಳು ತುಂಬಿ ಹರಿಯುತ್ತಿದ್ದು ನದಿ ಪಾತ್ರದ ಜನರ ಬದುಕು ಮೂರಾಬಟ್ಟೆಯಾಗಿದೆ. ಕರ್ನಾಟಕದ 17 ಜಿಲ್ಲೆಗಳ 80 ತಾಲೂಕುಗಳು ಪ್ರವಾಹ ಪೀಡಿತವಾಗಿವೆ ಎಂದು ಸರಕಾರ ಘೋಷಿಸಿದೆ. ಮಹಾರಾಷ್ಟ್ರದಲ್ಲಿ ಸುಮಾರು 5 ಲಕ್ಷ ಜನರು ಪ್ರವಾಹ ಸಂತ್ರಸ್ತರಾಗಿದ್ದಾರೆ. ಕೇರಳ ಸತತ ಎರಡನೇ ವರ್ಷ ಜಲ ಪ್ರಕೋಪಕ್ಕೆ ಗುರಿಯಾಗಿದೆ. ಕಳೆದ ವರ್ಷ ಉಂಟಾದ ಶತಮಾನದ ಪ್ರವಾಹದ ಹೊಡೆತದಿಂದ ಪೂರ್ತಿಯಾಗಿ ಚೇತರಿಸಿಕೊಳ್ಳುವ ಮೊದಲೇ ಈ ರಾಜ್ಯ ಮತ್ತೆ ಅದೇ ಪರಿಸ್ಥಿತಿಯನ್ನು ಎದುರಿಸಬೇಕಾಗಿರುವುದು ದುರದೃಷ್ಟಕರ.

Advertisement

ಮೂರೂ ರಾಜ್ಯಗಳಲ್ಲಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೃಷಿ ಹಾಗೂ ಆಸ್ತಿಪಾಸ್ತಿ ಹಾನಿಯನ್ನು ಇನ್ನೂ ಅಂದಾಜಿಸಲಾಗಿಲ್ಲ ಮತ್ತು ಅದಕ್ಕೆ ಇದು ಸಮಯವೂ ಅಲ್ಲ. ಪ್ರವಾಹ ಪೀಡಿತ ಸ್ಥಳಗಳಿಂದ ಸಂತ್ರಸ್ತರನ್ನು ಪಾರು ಮಾಡಿ ಸುರಕ್ಷಿತ ಸ್ಥಳಗಳಿಗೆ ಸಾಗಿಸುವುದೇ ಈಗ ಆಡಳಿತದ ಮುಂದೆ ಇರುವ ದೊಡ್ಡ ಸವಾಲು. ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಕೇಂದ್ರದ ಸಚಿವರೂ ಬಂದು ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

ಆಶ್ರಯ ಕೇಂದ್ರಗಳಲ್ಲಿರುವ ಜನರ ಗೋಳು ಹೇಳತೀರದು. ಅದರಲ್ಲೂ ವೃದ್ಧರು, ಮಕ್ಕಳು, ಗರ್ಭಿಣಿಯರು ಮತ್ತು ಅಸ್ವಸ್ಥರು ಸರಿಯಾದ ಆರೈಕೆಯಿಲ್ಲದೆ ಬಳಲುತ್ತಿದ್ದಾರೆ. ಪ್ರಕೃತಿಯ ಮುಂದೆ ಮಾನವ ಎಷ್ಟು ನಿಸ್ಸಹಾಯಕ ಎನ್ನುವುದಕ್ಕೆ ಈ ಪ್ರಳಯವೇ ಸಾಕ್ಷಿ.

ಇತ್ತೀಚೆಗಿನ ವರ್ಷಗಳಲ್ಲಿ ಮುಂಗಾರು ಸ್ವರೂಪ ಬದಲಾಗಿರುವುದು ಗಮನಕ್ಕೆ ಬರುತ್ತಿದೆ.ಈ ವರ್ಷವೂ ಆರಂಭದಲ್ಲಿ ಸುಮಾರು ಒಂದು ತಿಂಗಳು ಕಣ್ಣಾಮುಚ್ಚಾಲೆಯಾಡಿದ ಮುಂಗಾರು ಅನಂತರ ಅಸಲು ಬಡ್ಡಿ ಸಮೇತ ಎಂಬಂತೆ ಅಪ್ಪಳಿಸಿದೆ. ಮುಂಗಾರಿನ ಈ ಕಣ್ಣಾಮುಚ್ಚಾಲೆಗೆ ಹವಾಮಾನ ಬದಲಾವಣೆಯೂ ಕಾರಣ ಎಂದು ತಜ್ಞರು ಎಚ್ಚರಿಸುತ್ತಿದ್ದರೂ ಯಾರ ಕಿವಿಗೂ ಅದು ಬೀಳುತ್ತಿಲ್ಲ.

ಪ್ರವಾಹದಂಥ ಪ್ರಕೃತಿ ವಿಕೋಪಗಳನ್ನು ನಿಯಂತ್ರಿಸುವುದು ಅಸಾಧ್ಯ. ಆದರೆ ಇಂಥ ಪರಿಸ್ಥಿತಿಯನ್ನು ಎದುರಿಸುವ ಸಮರ್ಪಕ ತಯಾರಿಯನ್ನು ಆಡಳಿತ ಮಾಡಿಟ್ಟುಕೊಂಡರೆ ಕನಿಷ್ಠ ಪ್ರಾಣ ಹಾನಿಯನ್ನಾದರೂ ಕಡಿಮೆ ಮಾಡಬಹುದು. ಆದರೆ ನಮ್ಮಲ್ಲಿ ಇನ್ನೂ ಸರಿಯಾದ ಪ್ರವಾಹ ಮುನ್ನೆಚ್ಚರಿಕೆ ವ್ಯವಸ್ಥೆಯೇ ಇಲ್ಲ. ಉತ್ತರ ಕರ್ನಾಟಕದ ಪ್ರವಾಹಕ್ಕೆ ಅಣೆಕಟ್ಟೆಗಳ ನೀರಿನ ಅಸಮರ್ಪಕ ನಿರ್ವಹಣೆಯೂ ಕಾರಣ. ಪ್ರತಿ ವರ್ಷ ಹೀಗಾಗುತ್ತಿದ್ದರೂ ಇದಕ್ಕೊಂದು ನೀತಿಯನ್ನು ರೂಪಿಸುವ ಕೆಲಸ ಇನ್ನೂ ಆಗಿಲ್ಲ. ಪ್ರವಾಹದ ಮೇಲೆ ಕಣ್ಗಾವಲು ಇಟ್ಟು ಕಾಲಕಾಲಕ್ಕೆ ಜನರಿಗೆ ಮಾಹಿತಿ ಕೊಡುವ ವ್ಯವಸ್ಥೆ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಪ್ರವಾಹದಂಥ ವಿಕೋಪಗಳ ಸಂದರ್ಭದಲ್ಲಿ ಮಾಹಿತಿಗಿಂತ ವದಂತಿಗಳ ಕಾರುಬಾರೇ ಹೆಚ್ಚಿರುತ್ತದೆ. ಪ್ರವಾಹ ಇಳಿಯುವ ತನಕ ಏನೂ ಮಾಡಲಾಗದ ಸ್ಥಿತಿ ನಮ್ಮದು. ನದಿ ಪಾತ್ರಗಳಲ್ಲಿರುವ ಊರುಗಳಿಗಾಗಿ ಸಮಗ್ರವಾದ ಪ್ರವಾಹ ನಿರ್ವಹಣಾ ಯೋಜನೆಯೊಂದನ್ನು ರಾಷ್ಟ್ರೀಯ ಮಟ್ಟದಲ್ಲಿ ತಯಾರಿಸುವ ಕೆಲಸ ಆಗಬೇಕಾಗಿದೆ.

Advertisement

ಪಶ್ಚಿಮ ಘಟ್ಟವನ್ನು ಸಂರಕ್ಷಿಸುವ ನಿಟ್ಟಿನಲ್ಲಿ 2011ರಲ್ಲೇ ಪ್ರೊ| ಮಾಧವ ಗಾಡ್ಗೀಳ್‌ ನೇತೃತ್ವದ ಸಮಿತಿಯೊಂದು ಕೇಂದ್ರಕ್ಕೆ ಅಧ್ಯಯನ ವರದಿಯನ್ನು ಸಲ್ಲಿಸಿತ್ತು. ಮುಂದಾಲೋಚನೆಯಿಲ್ಲದ ಅಭಿವೃದ್ಧಿ ಯೋಜನೆಗಳು ಪಶ್ಚಿಮ ಘಟ್ಟವನ್ನು ಅಸ್ಥಿರಗೊಳಿಸುತ್ತಿದೆ ಎಂದು ಗಾಡ್ಗೀಳ್‌ ಈ ವರದಿಯಲ್ಲಿ ಎಚ್ಚರಿಸಿದ್ದರು.ಘಟ್ಟದ ಅರಣ್ಯ ಸಂಪತ್ತನ್ನು ಸಂರಕ್ಷಿಸುವ ಸಲುವಾಗಿ ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವ ರಾಜ್ಯಗಳು ಗಣಿಗಾರಿಕೆ, ಅಣೆಕಟ್ಟೆ ನಿರ್ಮಾಣ, ಕೃಷಿ ಕಾರ್ಯಗಳು ಮತ್ತು ವಸತಿ ಬಡಾವಣೆಗಳ ನಿರ್ಮಾಣ ಸಂದರ್ಭದಲ್ಲಿ ಸಂಯಮ ವಹಿಸಬೇಕೆಂಬ ಸಲಹೆ ಈ ವರದಿಯಲ್ಲಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಈ ವರದಿ ಅನುಷ್ಠಾನಗೊಂಡಿಲ್ಲ. ಕಳೆದ ವರ್ಷ ಮತ್ತು ಈ ವರ್ಷ ಸಂಭವಿಸಿರುವ ಪ್ರಳಯದ ಮೂಲ ಪಶ್ಚಿಮ ಘಟ್ಟದಲ್ಲಿದೆ ಎನ್ನುವುದು ಗಮನಾರ್ಹ ಅಂಶ. ನಮ್ಮ ವ್ಯವಸ್ಥೆ ಕಣ್ಣು ತೆರೆಯಲು ಇನ್ನೆಷ್ಟು ವಿಕೋಪಗಳು ಸಂಭವಿಸಬೇಕು?

Advertisement

Udayavani is now on Telegram. Click here to join our channel and stay updated with the latest news.

Next