Advertisement

ಕೊರೊನಾ ಸೋಂಕು ತಡೆಗೆ ಸಕಲ ಸಿದ್ಧತೆ

10:46 AM Mar 10, 2020 | Suhan S |

ಕಲಬುರಗಿ: ಜಗತ್ತಿನಾದ್ಯಂತ ಕೊರೊನಾ ಸೋಂಕು ಮಾರಣಾಂತಿಕವಾಗಿ ಹರಡುತ್ತಿದ್ದು, ದೇಶದಲ್ಲೂ ತಲ್ಲಣ ಉಂಟು ಮಾಡುತ್ತಿದೆ. ಈ ನಡುವೆ ಜಿಲ್ಲೆಯಲ್ಲಿ ಸೋಂಕು ಹರಡುವಿಕೆ ತಡೆಯಲು ಜಿಲ್ಲಾ ಆರೋಗ್ಯ ಇಲಾಖೆ ಮತ್ತಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಜಿಮ್ಸ್‌ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದ್ದ ಐದು ಬೆಡ್‌ಗಳ ವಿಶೇಷ ಘಟಕವನ್ನು 12 ಬೆಡ್‌ಗಳಿಗೆ ವಿಸ್ತರಿಸಿದೆ.

Advertisement

ಯಾವುದೇ ಸಮಯದಲ್ಲಿ ಕೊರೊನಾ ಶಂಕಿತರಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸರ್ವ ಸನ್ನದ್ಧ ಸ್ಥಿತಿಯಲ್ಲಿದೆ. ಮಾ.3ರಂದು ನಗರದ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್‌-ಜಿಲ್ಲಾಸ್ಪತ್ರೆ) ಕಟ್ಟಡದ ಮೊದಲ ಮಹಡಿಯಲ್ಲೇ ತುರ್ತು ಕ್ರಮವಾಗಿ ಐದು ಬೆಡ್‌ಗಳ ವಿಶೇಷ ಘಟಕ ತೆರೆಯಲಾಗಿತ್ತು. ಈಗ ಅದರ ಬದಲಾಗಿ ಜಿಮ್ಸ್‌ ಕಟ್ಟಡದ ಹಿಂಭಾಗಕ್ಕೆ ಹೊಂದಿಕೊಂಡಿರುವ ಹಾಗೂ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯ ಮುಂಭಾಗದಲ್ಲಿರುವ ಹಿರಿಯ ನಾಗರಿಕರ ಸಾಮಾನ್ಯ ಒಳರೋಗಿಗಳ ವಿಭಾಗವನ್ನು ಸಂಪೂರ್ಣ “ಕೋವಿಡ್‌-19′ ಕೊರೊನಾ ಘಟಕವನ್ನಾಗಿ ಪರಿವರ್ತಿಸಲಾಗಿದೆ.

ಸುಸಜ್ಜಿತ ಕಟ್ಟಡ: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಶಂಕಿತರು ಅಥವಾ ಸಂಶಯಾಸ್ಪದ ವ್ಯಕ್ತಿಗಳಿಗೆ ತುರ್ತು ಚಿಕಿತ್ಸೆ ನೀಡಿ ನಿಗಾ ವಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಜಿಮ್ಸ್‌ ಆಸ್ಪತ್ರೆ ವೈದ್ಯರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. “ಕೋವಿಡ್‌-19′ ಕೊರೊನಾ ಘಟಕವನ್ನಾಗಿ ಪರಿವರ್ತಿಸಿರುವ ಹಿರಿಯ ನಾಗರಿಕರ ಸಾಮಾನ್ಯ ಒಳರೋಗಿಗಳ ವಿಭಾಗ ಪ್ರತ್ಯೇಕವಾದ ಕಟ್ಟಡ ಹೊಂದಿದ್ದು, ಸುಸಜ್ಜಿತವಾಗಿದೆ. ವೈದ್ಯರು ಕೊಠಡಿ, ನರ್ಸ್ ಗಳ ಕೊಠಡಿ, ತಪಾಸಣಾ ಕೊಠಡಿ ಹಾಗೂ ರೋಗಿಗಳಿಗೆ ಎರಡು ವಾರ್ಡ್‌ಗಳು ಇದ್ದು, ಎಲ್ಲ ಕೊಠಡಿಗಳು ಪ್ರತ್ಯೇಕವಾಗಿವೆ. ಎರಡು ವಾರ್ಡ್‌ಗಳನ್ನು ಪುರುಷರು ಮತ್ತು ಮಹಿಳೆಯರಿಗೆಂದು ಬೇರೆ-ಬೇರೆ ವಿಂಗಡಿಸಲಾಗಿದೆ. ಪ್ರತಿ ವಾರ್ಡ್‌ಗಳಲ್ಲಿ ತಲಾ ಆರು ಬೆಡ್‌ಗಳಂತೆ ಒಟ್ಟಾರೆ ರೋಗಿಗಳಿಗೆ 12 ಬೆಡ್‌ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸೋಮವಾರ ಜಿಲ್ಲಾ ವೈದ್ಯಾಧಿಕಾರಿ ಡಾ| ಎಂ.ಎ. ಜಬ್ಟಾರ್‌, ಜಿಲ್ಲಾ ಶಸ್ತ್ರಜ್ಞ ಡಾ| ಎ.ಎಸ್‌.ರುದ್ರವಾಡಿ, ನಿರ್ದೇಶಕಿ ಜಿಮ್ಸ್‌ ಡಾ| ಕವಿತಾ ಪಾಟೀಲ, ಜಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ| ಎ.ಎಸ್‌. ರುದ್ರವಾಡಿ ಘಟಕಕ್ಕೆ ಭೇಟಿ ನೀಡಿ ಸುಮಾರು ಹೊತ್ತು ಪರಿಶೀಲನೆ ನಡೆಸಿದರು. ನರ್ಸ್‌ಗಳು ಹಾಗೂ ಸ್ವತ್ಛತಾ ಸಿಬ್ಬಂದಿ ಘಟಕವನ್ನು ಸಜ್ಜುಗೊಳಿಸುವಲ್ಲಿ ಮಗ್ನರಾಗಿದ್ದರು.

ಅಗತ್ಯ ಚಿಕಿತ್ಸಾ ಸಲಕರಣೆ: ಕೊರೊನಾ ಸೋಂಕು ಬಗ್ಗೆ ಜನತೆ ಅನಗತ್ಯ ಆತಂಕ ಪಡುವ ಅಗತ್ಯವಿಲ್ಲ. ರೋಗ ಹರಡದಂತೆ ಎಲ್ಲ ರೀತಿಯ ಕಟ್ಟೆಚ್ಚರ ವಹಿಸಲಾಗಿದ್ದು, ಮುನ್ನೆಚ್ಚರಿಕ ಕ್ರಮವಾಗಿ ಕೊರೊನಾ ಶಂಕಿತರನ್ನು ಪ್ರತ್ಯೇಕ ತಪಾಸಣೆಗೆ ಒಳಪಡಿಸಲು ಘಟಕವನ್ನು ಸ್ಥಾಪಿಸಲಾಗಿದೆ. ಅಗತ್ಯ ಚಿಕಿತ್ಸಾ ಸಲಕರಣೆಗಳೊಂದಿಗೆ ತಕ್ಷಣ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

Advertisement

ಕೊರೊನಾ ಶಂಕಿತರ ಚಿಕಿತ್ಸೆಗೆ ಪ್ರತ್ಯೇಕ ವೈದ್ಯರು, ನರ್ಸ್‌ಗಳ ತಂಡ ರಚಿಸಲಾಗಿದೆ. ಎರಡು ವಾರ್ಡ್‌ಗಳೂ ವೆಂಟಿಲೇಟರ್‌ ವ್ಯವಸ್ಥೆಯುಳ್ಳ ವಾರ್ಡ್‌ಗಳಾಗಿವೆ. ಪ್ರತಿ ಬೆಡ್‌ಗೆ ಆಕ್ಸಿಜನ್‌ ಸಿಲಿಂಡರ್‌ ಕಲ್ಪಿಸಲಾಗಿದೆ. ಎನ್‌-95 ಮಾಸ್ಕ್ಗಳು, ತ್ರಿಬಲ್‌ ಲೆಯರ್‌ ಮಾಸ್ಕ್ಗಳು ಹಾಗೂ ಔಷಧಿ ಮತ್ತು ಮಾತ್ರೆಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕಲಬುರಗಿ ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸೋಂಕು ಪತ್ತೆಯಾಗಿಲ್ಲ. ರೋಗ ಹರಡದಂತೆ ಎಲ್ಲ ರೀತಿಯ ಕಟ್ಟೆಚ್ಚರ ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮಧ್ಯರಾತ್ರಿ 12ಗಂಟೆಗೆ ಬಂದರೂ ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. –ಡಾ| ಎಂ.ಎ. ಜಬ್ಟಾರ್‌, ಜಿಲ್ಲಾ ವೈದ್ಯಾಧಿಕಾರಿ

ಪ್ರತ್ಯೇಕ ಆ್ಯಂಬುಲೆನ್ಸ್‌ :  ಕೊರೊನಾ ಸೋಂಕು ಶಂಕಿತರಿಗಾಗಿಯೇ ಪ್ರತ್ಯೇಕ ಆ್ಯಂಬುಲೆನ್ಸ್‌ ವ್ಯವಸ್ಥೆಯನ್ನೂ ಆರೋಗ್ಯ ಇಲಾಖೆ ಮಾಡಿದೆ. ರೋಗದ ಲಕ್ಷಣಗಳು ಕಂಡು ಬಂದ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್‌ ಸಹಕಾರಿಯಾಗಲಿದೆ. ಸದ್ಯಕ್ಕೆ ಕಲಬುರಗಿ ಮಹಾನಗರ ವ್ಯಾಪ್ತಿಯಲ್ಲಿ ದಿನದ 24 ಗಂಟೆ ಆ್ಯಂಬುಲೆನ್ಸ್‌ ಕಾರ್ಯ ನಿರ್ವಹಿಸಲಿದೆ. ಆ್ಯಂಬುಲೆನ್ಸ್‌ನಲ್ಲೂ ಪ್ರತ್ಯೇಕವಾದ ಸಿಬ್ಬಂದಿ ಹಾಗೂ ಚಾಲಕರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next