ಕಲಬುರಗಿ: ಅಫಜಲಪುರ ತಾಲೂಕಿನ ಮಾಶ್ಯಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ, ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇ)ಯ ಆಡಳಿತ ಮಂಡಳಿ ಸದಸ್ಯ ಅರುಣಕುಮಾರ ಎಂ. ಪಾಟೀಲ ಅವರ 45ನೇ ಜನ್ಮ ದಿನಾಚರಣೆಗೆ ಅಫಜಲಪುರ ಪಟ್ಟಣ ಸಜ್ಜುಗೊಂಡಿದೆ.
ಪಟ್ಟಣದ ನ್ಯಾಷನಲ್ ಪಂಕ್ಷನ್ ಹಾಲ್‌ದಲ್ಲಿ ಯುವ ನಾಯಕನ ಜನ್ಮ ದಿನಾಚರಣೆಗೆ ವೇದಿಕೆ ನಿರ್ಮಿಸಲಾಗಿದ್ದು, ಹಲವಾರು ಸಮಾಜಮುಖೀ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಸಸಿಗಳ ವಿತರಣೆ, ತಾಲೂಕಾ ಆಸ್ಪತ್ರೆಗಳಲ್ಲಿ ಹಣ್ಣು ವಿತರಣೆ,
ಮಹಿಳಾ ಪೌರ ನೌಕರರಿಗೆ ಬಟ್ಟೆ ವಿತರಣೆ, ಬಡ ಮಕ್ಕಳಿಗೆ ನೋಟ್ ಬುಕ್ ವಿತರಣೆ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸವಾಲು ಹಾಗೂ ಪ್ರತಿಷ್ಠೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಇತಿಹಾಸ ನಿರ್ಮಿಸುವ ಮೂಲಕ ರಾಜಕೀಯ ದೃವತಾರೆಯಾಗಿ ಹೊರ ಹೊಮ್ಮಿದ ಹಾಗೂ ತಂದೆಯವರಾಗಿರುವ ಶಾಸಕ ಎಂ.ವೈ. ಪಾಟೀಲ ಅವರ ರಾಜಕೀಯ ಸೇವಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅರುಣಕುಮಾರ ಪಾಟೀಲ ದೂರದೃಷ್ಟಿ ಹಾಗೂ ಅಭಿವೃದ್ಧಿ ಪರ ನಾಯಕರಾಗಿದ್ದಾರೆ.
ಗುರುವಾರ ನಡೆಯುವ ಜನ್ಮ ದಿನಾಚರಣೆಯಲ್ಲಿ ಅಫಜಲಪುರ ಪಟ್ಟಣದ ವಿಶ್ವಾರಾಧ್ಯ ಮಳೇಂದ್ರ ಶಿಚಾವಾರ್ಯರು, ಬಡದಾಳದ ಚೆನ್ನಮಲ್ಲ ಶಿವಾಚಾರ್ಯರು, ಚಿನ್ಮಯಗಿರಿ ಮಹಾಂತೇಶ್ವರ ಮಠದ ಸಿದ್ಧರಾಮ ಶಿವಾಚಾರ್ಯರು, ವೀರಮಹಾಂತ ಶಿವಾಚಾರ್ಯರು ಸೇರಿದಂತೆ ನಾಡಿನ ಹಲವಾರು ಮಠಾಧೀಶರು, ರಾಜಕೀಯ ಗಣ್ಯರು, ಜನಪ್ರತಿನಿಧಿಗಳು, ಸಮಾಜ ಸೇವಕರು, ಕಾರ್ಯಕರ್ತರು, ಪಾಟೀಲ ಬಳಗದ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಜನ್ಮ ದಿನಾಚರಣೆಗೆ ಸಮಿತಿಯೊಂದನ್ನು ರಚಿಸಲಾಗಿದ್ದು, ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.