Advertisement

ರೈತರ ಕಂಗಾಲಾಗಿಸಿದ ಅಕಾಲಿಕ ಮಳೆ

04:15 PM Nov 17, 2021 | Team Udayavani |

ಹಾವೇರಿ: ಪ್ರಸಕ್ತ ವರ್ಷ ಅಕಾಲಿಕವಾಗಿ ಸುರಿಯುತ್ತಿರುವ ಮಳೆ ಅನ್ನದಾತರು ಕಂಗಾಲಾಗುವಂತೆ ಮಾಡಿದ್ದು, ಸಾಲ ಮಾಡಿ ಬಿತ್ತನೆ ಮಾಡಿದ್ದ ಬೆಳೆಗಳು ರೈತರ ಕೈ ಸೇರದೇ ನಷ್ಟ ಅನುಭವಿಸುವಂತಾಗಿದೆ.

Advertisement

ಮುಂಗಾರು, ಹಿಂಗಾರು ಅವಧಿ  ಮುಗಿದಿದ್ದರೂ ಅಕಾಲಿಕವಾಗಿ ಸುರಿಯುತ್ತಿರುವ ಮಳೆ ರೈತರ ನೆಮ್ಮದಿ ಹಾಳು ಮಾಡುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಅಪಾರ ನಷ್ಟ ಅನುಭವಿಸಿದ್ದ ರೈತರು ಪ್ರಕಸ್ತ ವರ್ಷ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದ ಮತ್ತೆ ಸಂಕಷ್ಟಕ್ಕೆ ತುತ್ತಾಗುವಂತೆ ಮಾಡಿದೆ.

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ 2.65 ಲಕ್ಷ ಹೆಕ್ಟೇರ್‌ ಮಳೆಯಾಶ್ರಿತ ಹಾಗೂ 65 ಸಾವಿರ ಹೆಕ್ಟೇರ್‌ ನೀರಾವರಿ ಸೇರಿದಂತೆ 3.30 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. ಇದರಲ್ಲಿ 19 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ, 14 ಸಾವಿರ ಹೆಕ್ಟೇರ್‌ನಲ್ಲಿ ಸೋಯಾ, 44 ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಗೋವಿನಜೋಳ ಹೆಚ್ಚಾಗಿ ಬೆಳೆಯುತ್ತಿದ್ದು, ಈ ಸಲ 2 ಲಕÒ ಹೆಕ್ಟೇರ್‌ನಲ್ಲಿ ಗೋವಿನಜೋಳ ಬಿತ್ತನೆ ಮಾಡಲಾಗಿತ್ತು.

 9791.23 ಹೆಕ್ಟೇರ್‌ ಬೆಳೆ ಹಾನಿ: ಮುಂಗಾರು ಹಂಗಾಮಿನ ಜುಲೈ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಜಿಲ್ಲೆಯ ರೈತರು ಅಪಾರ ನಷ್ಟ ಅನುಭವಿಸುವಂತಾಯಿತು. ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ 8329.68 ಹೆಕ್ಟೇರ್‌ ಪ್ರದೇಶದ ಅಂದಾಜು 23.99 ಕೋಟಿ ಮೌಲ್ಯದ ಕೃಷಿ ಬೆಳೆ ಹಾನಿ, 1406.55 ಹೆಕ್ಟೇರ್‌ ಪ್ರದೇಶದ ಅಂದಾಜು 5.31 ಕೋಟಿ ಮೌಲ್ಯದ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಇದರಲ್ಲಿ ಮೆಕ್ಕೆಜೋಳ ಅತಿ ಹೆಚ್ಚು 4,932 ಹೆಕ್ಟೇರ್‌ ಪ್ರದೇಶದಲ್ಲಿ, ಬಿಟಿ ಹತ್ತಿ 1,457 ಹೆಕ್ಟೇರ್‌ ಪ್ರದೇಶದಲ್ಲಿ ಹಾನಿಯಾಗಿದೆ.

ಅಲ್ಲದೇ, 55 ಹೆಕ್ಟೇರ್‌ ಪ್ರದೇಶದ ಕೃಷಿ ಭೂಮಿಯಲ್ಲಿ ಹೂಳು ತುಂಬಿಕೊಂಡಿತ್ತು. ಒಟ್ಟಾರೆ 9791.23 ಹೆಕ್ಟೇರ್‌ ಹಾನಿಯಾಗಿ, 29.36 ಕೋಟಿ ಮೌಲ್ಯದ ಬೆಳೆ ನಷ್ಟ ಉಂಟಾಯಿತು. ಎನ್‌ಡಿಆರ್‌ ಎಫ್‌ ಮಾರ್ಗಸೂಚಿಯಂತೆ 8.97 ಕೋಟಿ ರೂ. ಪರಿಹಾರ ಅಗತ್ಯವಾಗಿದೆ ಎಂದು ಜಿಲ್ಲಾಡಳಿತದಿಂದ ಬೇಡಿಕೆ ಸಲ್ಲಿಸಲಾಗಿತ್ತು. ಸದ್ಯ ರೈತರಿಗೆ ಸುಮಾರು ಸುಮಾರು 6 ಕೋಟಿ ಪರಿಹಾರ ವಿತರಿಸಲಾಗಿದ್ದು, ಇನ್ನು ಪೂರ್ಣ ಪ್ರಮಾಣದಲ್ಲಿ ರೈತರಿಗೆ ಪರಿಹಾರ ವಿತರಣೆಯಾಗಿಲ್ಲ.

Advertisement

4-5 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿ: ಸದ್ಯ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಜಿಲ್ಲೆಯ ಕೆಲವೊಂದು ಪ್ರದೇಶ ಹೊರತುಪಡಿಸಿದರೆ ಅಷ್ಟಾಗಿ ರೈತರಿಗೆ ನಷ್ಟ ಉಂಟು ಮಾಡಿಲ್ಲ. ಜಿಲ್ಲೆಯ ತೋಟಗಾರಿಕೆ ಬೆಳೆಗಳಾದ ಬಾಳೆ, ಈರುಳ್ಳಿ ಸೇರಿದಂತೆ ತರಕಾರಿ ಬೆಳೆಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ 4-5 ಹೆಕ್ಟೇರ್‌ ಪ್ರದೇಶದ ತೋಟಗಾರಿಕಾ ಬೆಳೆ ಹಾನಿಗಿಡಾಗಿದ್ದು, ಸುಮಾರು 1.20 ಲಕ್ಷ ರೂ. ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ ತಿಳಿಸಿದ್ದಾರೆ. ಜಿಲ್ಲೆಯ ರಾಣಿಬೆನ್ನೂರು ಭಾಗದಲ್ಲಿ ಸುರಿದ ಅಕಾಲಿಕ ಮಳೆಯಿಂದ ಸುಮಾರು 73 ಎಕರೆ ಪ್ರದೇಶದ ಭತ್ತದ ಬೆಳೆ ಹಾನಿಯಾಗಿದೆ.

ಮಳೆಯ ಕಾಟದಿಂದ ರೈತರು ದಿನಗಳನ್ನು ದೂಡುತ್ತಿದ್ದು, ಕಟಾವು ಮಾಡಿದ ಬಳಿಕ ಮಳೆಗೆ ತೋಯ್ದರೆ ಇಷ್ಟು ದಿನದ ಶ್ರಮ ನೀರಿನಲ್ಲಿ ಮಾಡಿದ ಹೋಮದಂತಾಗುತ್ತದೆ ಎಂಬುದು ರೈತರ ಭಯವಾಗಿದೆ. ಸದ್ಯ ಬೆಳೆಹಾನಿಯ ಅಂದಾಜು ವೆಚ್ಚದ ಮಾಹಿತಿ ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ. ಸದ್ಯ ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಮೆಕ್ಕೆಜೋಳ ಕಟಾವು ನಡೆಯುತ್ತಿದ್ದು, ಅಕಾಲಿಕ ಮಳೆಯಿಂದ ಮೆಕ್ಕೆಜೋಳಕ್ಕೆ ಹಾನಿಯಾಗಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆ ರೈತರು ಅಕಾಲಿಕ ಮಳೆ, ದರ ಕುಸಿತ, ಬೆಳೆಗಳಿಗೆ ರೋಗ ಭಾದೆ ಸೇರಿದಂತೆ ಒಂದಿಲ್ಲೊಂದು ಸಂಕಷ್ಟಗಳನ್ನು ಎದುರಿಸುವಂತಾಗಿದ್ದು, ಕಷ್ಟಪಟ್ಟು ಬೆಳೆದ ಫಸಲು ಕೈ ಸೇರುವ ಮುನ್ನವೇ ಹಾನಿಗಿಡಾಗುತ್ತಿರುವುದು ರೈತರನ್ನು ಹೈರಾಣಾಗಿಸಿದೆ.

ಸದ್ಯ ಜಿಲ್ಲೆಯಲ್ಲಿ ಅಕಾಲಿಕ ಮಳೆಗೆ 73 ಎಕರೆ ಪ್ರದೇಶದ ಭತ್ತದ ಬೆಳೆ ಹಾನಿಗೀಡಾಗಿದ್ದು, ಅಂದಾಜು ವೆಚ್ಚದ ಮಾಹಿತಿ ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ. ಇನ್ನುಳಿದಂತೆ ಯಾವುದೇ ಬೆಳೆಗೆ ಹಾನಿಯಾಗಿಲ್ಲ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಸಂದರ್ಭದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ 8329.68 ಹೆಕ್ಟೇರ್‌ ಪ್ರದೇಶದ ಕೃಷಿ ಬೆಳೆ ಹಾನಿಗೀಡಾಗಿತ್ತು. ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ 8.97 ಕೋಟಿ ರೂ. ಪರಿಹಾರಕ್ಕೆ ಜಿಲ್ಲಾಡಳಿತ ಮನವಿ ಮಾಡಿತ್ತು. ಸದ್ಯ ಸುಮಾರು 5-6 ಕೋಟಿ ಪರಿಹಾರ ವಿತರಿಸಲಾಗಿದೆ.-ಮಂಜುನಾಥ ಬಿ. ಜಂಟಿ ಕೃಷಿ ನಿರ್ದೇಶಕರು, ಹಾವೇರಿ

-ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next