Advertisement

ದ್ರಾಕ್ಷಿ ಬೆಳೆಗೆ ಕಾಡುತ್ತಿದೆ ಮೋಡ ಕವಿದ ವಾತಾವರಣ: ದೌಣಿ, ಬೂದಿ, ಗೊನೆ ಕೊಳೆ ರೋಗದ ಆತಂಕ

02:49 PM Nov 18, 2021 | Team Udayavani |

ವಿಜಯಪುರ: ರಾಜ್ಯದಲ್ಲಿ ದ್ರಾಕ್ಷಿ ಕಣಜ ಎಂದು ಕರೆಸಿಕೊಂಡಿರುವ ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಮೋಡ ಕವಿದ ವಾತಾರಣದಿಂದ ಕಂಗಾಲಾಗಿದ್ದಾರೆ. ಮೋಡ ಕವಿದ ವಾತಾವರಣದಿಂದ ದ್ರಾಕ್ಷಿ ಬೆಳೆ ದೌಣಿ ಹಾಗೂ ಬೂದು ರೋಗಕ್ಕೆ ಸಿಲಕಿದ್ದು, ವರ್ಷದ ಅನ್ನ ಕಳೆದುಕೊಳ್ಳುವ ಆತಂಕ ಎದುರಾಗಿದೆ.

Advertisement

ವಿಜಯಪುರ ಜಿಲ್ಲೆಯಲ್ಲಿ 17 ಸಾವಿರ ಹೆಕ್ಟೇರ್ ದ್ರಾಕ್ಷಿ ಬೆಳೆ ಇದ್ದು, ಬಹುತೇಕರು ಚಾಟ್ನಿ (ಫ್ರೂನಿಂಗ್) ಮಾಡಿದ್ದಾರೆ. ಮುಂಚಿತವಾಗಿ ಚಾಟ್ನಿ ಮಾಡಿದ ತೋಟಗಳಲ್ಲಿ ಅದಾಗಲೇ ಹೂಗಳು ಮಾಡಿ, ಕಾಯಿ ಕಟ್ಟುವ ಹಂತದಲ್ಲಿವೆ. ಇಂತ ಸ್ಥಿತಿಯಲ್ಲಿ ಮೋಡ ಕವಿತ ವಾತಾವರಣ ಹಾಗೂ ಮಳೆ ಸುರಿದಲ್ಲಿ ಬೆಳೆಗೆ ವಿವಿಧ ರೋಗಗಳು ಬಾಧಿಸುತ್ತವೆ.

ಕಳೆದ ಹಲವು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದೆ. ಬೆಳಿಗ್ಗೆ ಮಂಜು ಕವಿದ ವಾತಾವರಣದಿಂದ ತಂಗಾಳಿ ಬೀಸುತ್ತಿದ್ದು, ಮಧ್ಯಾಹ್ನ ಬಿಸಿಲಿನ ತಾಪ ಹೆಚ್ಚುತ್ತಿದೆ. ಕಳೆದ ಎರಡು ದಿನಗಳಿಂದ ಸಂಜೆ ಮೋಡ ತುಂತುರು ಮಳೆ ಸುರಿಯುತ್ತಿದೆ. ಇಂತ ವಾತಾವರಣ ದ್ರಾಕ್ಷಿ ಬೆಳೆ ವಿಷಮವಾಗಿದ್ದು, ದೌಣಿ ರೋಗ ಹಾಗೂ ಬೂದಿ ರೋಗ ಬೇಗನೇ ವ್ಯಾಪಿಸಿ ಹೂ ಹಾಗೂ ಕಾಯಿ ಕಟ್ಟುವ ಹೀಚುಗಳನ್ನು ಮುರುಟುವಂತೆ ಮಾಡುತ್ತದೆ. ಮುರಿಟಿದ ಹೂ-ಹೀಚುಗಳು ಗೊನೆಯಿಂದ ಕಳಚುತ್ತಿವೆ. ಹೆಚ್ಚು ತಂಪು ಕಾಣಿಸಿಕೊಂಡರೆ ಕೊಳೆ ರೋಗ ಕಾಣಿಸಿಕೊಂಡು ಗೊನೆಯೇ ಕಳಚಿ ನೆಲಕ್ಕೆ ಬೀಳುತ್ತವೆ.

ಇದನ್ನೂ ಓದಿ:ಕಾಂಗ್ರೆಸ್‌ನವರನ್ನೇ ಗುರಿಯಾಗಿಟ್ಟುಕೊಂಡು ಸಿದ್ದರಾಮಯ್ಯ ಆರೋಪ: ಶೆಟ್ಟರ್ ಬಾಂಬ್

ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ವಾತಾವರಣದಲ್ಲಿನ ತಂಪು ಪರಿಸ್ಥಿತಿ ದ್ರಾಕ್ಷಿ ಬೆಳೆಗೆ ರೋಗಗಳ ಬಾಧೆ ಆವರಿಸುವಂತೆ ಮಾಡಿದೆ. ಇದರಿಂದ ರೈತರು ಕಂಗಾಲಾಗಿದ್ದು, ಸರ್ಕಾರ ತಮ್ಮ ರಕ್ಷಣೆಗೆ ಬರಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದರಿಂದ ಎಚ್ಚೆತ್ತಿರುವ ವಿಜಯಪುರ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಪರಿಸ್ಥಿತಿ ಅಧ್ಯಯನ ನಡೆಸಲು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

Advertisement

“ಹಲವು ದಿನಗಳಿಂದ ಮಂಜು ಕವಿದ ವಾತಾವರಣವಿದ್ದು, ಹಲವು ಕಡೆಗಳಲ್ಲಿ ತುಂತುರು ಮಳೆಯೂ ಬೀಳುತ್ತಿದೆ. ಇದರಿಂದ ದ್ರಾಕ್ಷಿ ಬೆಳೆಗೆ ದೌಣಿ, ಕೊಳೆ ರೋಗ ಸೇರಿದಂತೆ ಹಲವು ರೋಗಗಳು ಬಾಧಿಸುತ್ತಿವೆ. ಇದರಿಂದ ವರ್ಷದ ಬೆಳೆ ಕೈಕೊಟ್ಟರೆ ಲಕ್ಷಾಂತರ ರೂ. ಸಾಲ ಮೈಮೇಲೆ ಬರುತ್ತದೆ” ಎನ್ನುತ್ತಾರೆ ಸೋಮದೇವರಹಟ್ಟಿಯ ಬೆಳೆಗಾರ ರವಿ ಎನ್. ಬಾಗಲಕೋಟ.

“ತಡವಾಗಿ ಚಾಟ್ನಿ ಮಾಡಿದ ತೋಟಗಳಲ್ಲಿ ಈ ದೌಣಿ ರೋಗದ ಭೀತಿ ಕೊಂಚ ಕಡಿಮೆ. ಆದರೆ ಮೊದಲು ಚಾಟ್ನಿ ಮಾಡಿದ ಬಹುತೇಕ ತೋಟಗಳಲ್ಲಿ ಹೂ-ಮಿಡಿಗಾಯಿ ಕಾಣಿಸಿಕೊಂಡಿದ್ದು, ರೋಗಕ್ಕೆ ಸಿಲುಕುತ್ತಿವೆ. ಬಹುತೇಕ ರೈತರು ಮೊದಲೇ ಚಾಟ್ನಿ ಮಾಡಿದ್ದಾರೆ” ಎನ್ನುತ್ತಾರೆ ತಿಕೋಟದ ದ್ರಾಕ್ಷಿ ಬೆಳೆಗಾರ ರಮೇಶ ಕೊಣ್ಣೂರು.

ಈ ಬಗ್ಗೆ ಮಾಹಿತಿ ನೀಡಿರುವ ವಿಜಯಪುರ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಎಸ್.ಎಂ.ಬರಗಿಮಠ, “ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮಂಜು ಹಾಗೂ ಮೋಟ ಕವಿದ ವಾತಾವರಣದಿಂದ ದ್ರಾಕ್ಷಿ ಬೆಳೆಗೆ ವಿವಿಧ ರೋಗಗಳು ಬಾಧಿಸುತ್ತಿವೆ. ರೋಗ ನಿಯಂತ್ರಣಕ್ಕೆ ತುರ್ತು ಕ್ರಮ ಕಐಗೊಳ್ಳಲು ಅಧ್ಯಯನ ನಡೆಸುವಂತೆ ತಜ್ಞರಿಗೆ ಮನವಿ ಮಾಡಲು ಮುಂದಾಗಿದ್ದೇವೆ” ಎಂದಿದ್ದಾರೆ.

ವರದಿ: ಜಿ.ಎಸ್.ಕಮತರ

Advertisement

Udayavani is now on Telegram. Click here to join our channel and stay updated with the latest news.

Next