ರಾಮ ಹುಲ್ಲುಕಡ್ಡಿಯನ್ನು ಎತ್ತಿಕೊಂಡು ಬ್ರಹ್ಮಾಸ್ತ್ರವನ್ನು ಮಂತ್ರಿಸಿ ಪ್ರಯೋಗಿಸುತ್ತಾನೆ. ಕಾಗೆ ಇಡೀ ಜಗತ್ತನ್ನೇ ಸುತ್ತಿದರೂ ಪಾರಾಗಲು ಸಾಧ್ಯವಾಗುವುದಿಲ್ಲ. ಕಡೆಗೆ ರಾಮನಿಗೇ ಬಂದು ಶರಣಾಗುತ್ತದೆ. ಕಡೆಗೆ ಅದರ ಬಲಗಣ್ಣಿಗೆ ಮಾತ್ರ ಹಾನಿಯಾಗುವಂತೆ ರಾಮ ಮಾಡುತ್ತಾನೆ. ಒಂದುಕಣ್ಣು ಕಳೆದುಕೊಂಡ ಕಾಗೆಗೆ ರಾಮ ಪ್ರಾಣಭಿಕ್ಷೆ ನೀಡುತ್ತಾನೆ. ರಾಮನಿಗೆ ಸೀತೆಯ ಮೇಲಿನ ಪ್ರೇಮದ ತೀವ್ರತೆ ಏನು ಅನ್ನುವುದಕ್ಕೆ ಇದು ಉದಾಹರಣೆ.
ಶ್ರೀರಾಮನನ್ನು ಕಾಕುಸ್ಥ್ಯ ಎನ್ನುತ್ತಾರೆ. ಭಗೀರಥನ ಪುತ್ರ ಕಕುಸ್ಥ್ಯನ ವಂಶಜನಾಗಿರುವುದರಿಂದ ಈ ಹೆಸರು. ರಾವಣನಿಂದ ಅಪಹೃತಗೊಂಡಿರುವ ಸೀತೆಯನ್ನು ನೆನೆಯುತ್ತ, ಕೊರಗುತ್ತ ಶ್ರೀರಾಮ ಋಷ್ಯಮೂಕ ಪರ್ವತದಲ್ಲಿ, ಸುಗ್ರೀವನ ಸ್ನೇಹಬಂಧನದಲ್ಲಿರುತ್ತಾನೆ. ಸೀತೆಯನ್ನು ಹುಡುಕುವುದಕ್ಕಾಗಿ ಸುಗ್ರೀವ ದಶದಿಕ್ಕುಗಳಿಗೂ ತನ್ನ ಸೇನೆಯನ್ನು ಕಳುಹಿಸುತ್ತಾನೆ. ಅಗಾಧ ಸಮುದ್ರದಂತೆ ನುಗ್ಗಿಬಂದ ಕಪಿಗಳು ಒಬ್ಬೊಬ್ಬರ ನಾಯಕತ್ವದಲ್ಲಿ ಒಂದೊಂದು ದಿಕ್ಕಿಗೆ ಚದುರಿ ಹೋಗುತ್ತವೆ. ಒಂದು ದೊಡ್ಡ ಗುಂಪು ಅಂಗದ, ಹನುಮಂತನ ನಾಯಕತ್ವದಲ್ಲಿ ದಕ್ಷಿಣ ದಿಕ್ಕಿಗೆ ತಲುಪುತ್ತವೆ.
ಸಂಪಾತಿಯ ಭೇಟಿಯಾಗಿದ್ದರಿಂದ ಈ ಗುಂಪಿಗೆ ಸೀತೆ ಎಲ್ಲಿದ್ದಾಳೆಂದು ತಿಳಿಯುತ್ತದೆ. ಹನುಮಂತ ಸಮುದ್ರೋಲ್ಲಂಘನ ಮಾಡಿ ತ್ರಿಕೂಟ ಪರ್ವತದಲ್ಲಿದ್ದ ಲಂಕೆಯನ್ನು ತಲುಪುತ್ತಾನೆ. ಹನುಮಂತನ ಈ ಸಾಹಸ ಯಾವುದೇ ರೋಚಕ ಸಿನಿಮಾಗಳಿಗೆ ಸ್ಫೂರ್ತಿ. ಅಲ್ಲಿ ಹನುಮಂತ ಏನೆಲ್ಲ ಸಾಹಸ ಮಾಡುತ್ತಾನೆಂದರೆ, ನಮಗೆ ಈಗ ಗೊತ್ತಿರುವುದು ಆತ ಕೇವಲ ಲಂಕೆಗೆ ಬೆಂಕಿಯಿಟ್ಟ ಎನ್ನುವ ಕಥೆ ಮಾತ್ರ. ಅದನ್ನು ಮೀರಿ, ಆತ ತೋರುವ ಬುದ್ಧಿವಂತಿಕೆ, ಶೌರ್ಯ, ಸಮಯಪ್ರಜ್ಞೆ, ವಿವೇಕ…ಪ್ರತಿಯೊಬ್ಬ ಮನುಷ್ಯನಿಗೂ ಇವೆಲ್ಲ ಮಾರ್ಗದರ್ಶಕಗಳು. ಸುಂದರಕಾಂಡದಲ್ಲಿ ಬರುವ ಹನುಮನ ಈ ಭಾಗವನ್ನು ಪೌರಾಣಿಕಪ್ರಜ್ಞೆಯನ್ನು ಬದಿಗೆ ಸರಿಸಿ ನಾವೆಲ್ಲ ಓದಬೇಕು. ಅದನ್ನು ಕೇವಲ ಪುರಾಣದ ರಮ್ಯ ಕಥೆಗಳನ್ನೊಂದಾಗಿ ನೋಡದೆ, ಅದರಲ್ಲಿ ಜೀವನದರ್ಶನವನ್ನು ಹುಡುಕಲು ಯತ್ನಿಸಬೇಕು. ಹನುಮಂತ ಹೆಜ್ಜೆಹೆಜ್ಜೆಗೂ ತೋರಿಸುವ ಔಚಿತ್ಯಪ್ರಜ್ಞೆಯನ್ನು ನಾವು ಗಮನಿಸಬೇಕು.
ಹಾಗೂ ಹೀಗೂ ಸಾಹಸ ಮಾಡಿ ಹನುಮಂತ ಅಶೋಕವನದಲ್ಲಿದ್ದ ಸೀತೆಯನ್ನು ಭೇಟಿ ಮಾಡುತ್ತಾನೆ (ಇಲ್ಲಿ ವನದ ಹೆಸರು ಅಶೋಕ ಎಂದು. ಹಾಗಂತ ಸೀತೆ ಕುಳಿತಿದ್ದು ಅಶೋಕ ವೃಕ್ಷದ ಕೆಳಗೆ ಎಂದು ಭಾವಿಸಬಾರದು. ರಾಮಾಯಣದ ಉಲ್ಲೇಖಗಳನ್ನು, ಅಲ್ಲಿದ್ದ ವೃಕ್ಷಗಳ ಪಟ್ಟಿಯನ್ನು ಗಮನಿಸಿದರೆ ಆ ವನದಲ್ಲಿ ಅಶೋಕವೃಕ್ಷವೇ ಇರಲಿಲ್ಲ! ಅಶೋಕವೆಂದರೆ ಶೋಕವಿಲ್ಲದ್ದು ಎಂದರ್ಥ. ಸೀತೆ ಕುಳಿತಿದ್ದು ಶಿಂಶಪಾ ಅಂದರೆ ಬೀಟೆ ಮರದ ಕೆಳಗೆ). ಇದಿರಲಿ, ಸೀತೆಯನ್ನು ಹೇಗೋ ಮಾಡಿ ಹನುಮಂತ ತಾನು ರಾಮನಬಂಟ ಎಂದು ನಂಬಿಸುತ್ತಾನೆ. ಸೀತೆಯ ಗುರುತಿಗಾಗಿ ಶ್ರೀರಾಮ ಒಂದು ಮುದ್ರೆಯನ್ನು ನೀಡಿರುತ್ತಾನೆ. ಅಂದರೆ ಬಂದಿರುವ ವ್ಯಕ್ತಿ ರಾಮನ ಕಡೆಯವನು ಎನ್ನುವುದಕ್ಕೆ ಇದು ಸಾಕ್ಷಿ. ಆಗ ಸೀತೆ, ಆಕೆಯನ್ನು ಬಿಟ್ಟರೆ ಕೇವಲ ರಾಮನಿಗೆ ಮಾತ್ರ ಗೊತ್ತಿರುವ ಒಂದು ಕಥೆಯನ್ನು ಹೇಳುತ್ತಾಳೆ. ಇದು ನಡೆದಿದ್ದು ಅವರಿಬ್ಬರು ವನವಾಸದ ಆರಂಭದಲ್ಲಿ ಚಿತ್ರಕೂಟದಲ್ಲಿದ್ದಾಗ. ರಾಮ, ಸೀತೆಯ ತೊಡೆಯ ಮೇಲೆ ಮಲಗಿ ನಿದ್ರಿಸುತ್ತಿರುತ್ತಾನೆ. ಆಗ ಇಂದ್ರನ ಪುತ್ರ ಜಯಂತ ಕಾಗೆಯ ರೂಪದಲ್ಲಿ ಬಂದು ಸೀತೆಯ ಎದೆಯನ್ನು ಕುಕ್ಕಲು ಪ್ರಾರಂಭಿಸುತ್ತಾನೆ. ಆಕೆಗೆ ಅಲ್ಲಾಡಿದರೆ ರಾಮನಿಗೆ ಎಚ್ಚರಾಗುತ್ತದೆ ಎಂಬ ಧರ್ಮ ಸಂಕಟ, ಸುಮ್ಮನೆ ಕುಳಿತರೆ ಕಾಗೆ ಕುಕ್ಕುವುದನ್ನು ನಿಲ್ಲಿಸುವುದಿಲ್ಲ ಎಂಬ ಹೆದರಿಕೆ. ಸೀತೆಯ ಎದೆಯಿಂದ ರಕ್ತ ಸುರಿಯಲು ಆರಂಭಿಸುತ್ತದೆ.
ಈ ತಾಕಲಾಟದಲ್ಲಿದ್ದಾಗಲೇ ರಾಮನಿಗೆ ಎಚ್ಚರಾಗುತ್ತದೆ, ನೋಡುತ್ತಾನೆ, ಕಾಗೆಯ ಕಾಲಿನಿಂದ ರಕ್ತ ಹನಿಯುತ್ತಿದೆ. ಸಿಟ್ಟಿಗೆದ್ದ ರಾಮ ಹುಲ್ಲುಕಡ್ಡಿಯನ್ನು ಎತ್ತಿಕೊಂಡು ಬ್ರಹ್ಮಾಸ್ತ್ರವನ್ನು ಮಂತ್ರಿಸಿ ಪ್ರಯೋಗಿಸುತ್ತಾನೆ. ಕಾಗೆ ಇಡೀ ಜಗತ್ತನ್ನೇ ಸುತ್ತಿದರೂ ಪಾರಾಗಲು ಸಾಧ್ಯವಾಗುವುದಿಲ್ಲ. ಕಡೆಗೆ ರಾಮನಿಗೇ ಬಂದು ಶರಣಾಗುತ್ತದೆ. ಕಡೆಗೆ ಅದರ ಬಲಗಣ್ಣಿಗೆ ಮಾತ್ರ ಹಾನಿಯಾಗುವಂತೆ ರಾಮ ಮಾಡುತ್ತಾನೆ. ಒಂದುಕಣ್ಣು ಕಳೆದುಕೊಂಡ ಕಾಗೆಗೆ ರಾಮ ಪ್ರಾಣಭಿಕ್ಷೆ ನೀಡುತ್ತಾನೆ. ರಾಮನಿಗೆ ಸೀತೆಯ ಮೇಲಿನ ಪ್ರೇಮದ ತೀವ್ರತೆ ಏನು ಅನ್ನುವುದಕ್ಕೆ ಇದು ಉದಾಹರಣೆ. ಹಾಗೆಯೇ, ಸೀತೆಗೆ ರಾಮನ ಮೇಲಿನ ಪ್ರೇಮದ ಆಳ ಹೇಗಿತ್ತು ಎನ್ನುವುದಕ್ಕೂ ಇದು ನಿದರ್ಶನ. ಸೀತೆಯನ್ನು ಕುಕ್ಕಿದ ಕಾಗೆಯ ಮೇಲೆ ಬ್ರಹ್ಮಾಸ್ತ್ರವನ್ನೇ ಪ್ರಯೋಗ ಮಾಡುವುದು ಅಂದರೆ?