Advertisement
ದೇಶದಲ್ಲಿನ ಸಾಂಪ್ರದಾಯಿಕ ಮತ್ತು ಪಾರಂಪರಿಕ ಧಾರ್ಮಿಕ ಸ್ಥಳ ಹಾಗೂ ಪ್ರವಾಸಿಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಅವುಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿಯ ರಾಜ್ಯಗಳಿಗೆ ಬಂಡವಾಳ ಹೂಡಿಕೆಗೆ ವಿಶೇಷ ನೆರವು (ಎಸ್‌ಎಎಸ್‌ಸಿಐ) ಯೋಜನೆಯಡಿ ರಾಜ್ಯದಲ್ಲಿ ಆಯ್ದ ಧಾರ್ಮಿಕ ಸ್ಥಳಗಳು ಹಾಗೂ ಪ್ರವಾಸಿ ಯಾತ್ರಾ ತಾಣಗಳು ಸೇರಿ ಒಟ್ಟು ಏಳು ಸ್ಥಳಗಳನ್ನು ಆಯ್ಕೆ ಮಾಡಿ ಒಟ್ಟು 664 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಕಳೆದ ವಾರ ಕೇಂದ್ರ ಪ್ರವಾಸೋದ್ಯಮ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದೆ.
Related Articles
ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಬೆಂಗಳೂರಿನ ತಾತಾಗುಣಿಯ ರೋರಿಚ್ ಆ್ಯಂಡ್ ದೇವಿಕಾರಾಣಿ ಎಸ್ಟೇಟ್‌ನಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಕಲ್ಚರಲ್ ಹಬ್ ಸ್ಥಾಪನೆಗೆ 99.88 ಕೋಟಿ ರೂ., ಸವದತ್ತಿ ಯಲ್ಲಮ್ಮ ಗುಡ್ಡದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ 100 ಕೋಟಿ ರೂ., ಕೊಲ್ಲೂರಿನ ಪಡುವರಿ ಸೋಮೇಶ್ವರದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಗೆ 99.95 ಕೋಟಿ ರೂ., ಲಕ್ಕುಂಡಿ ತಾಣದ ಅಭಿವೃದ್ಧಿಗೆ 57.16 ಕೋಟಿ ರೂ., ಐಹೊಳೆಯನ್ನು ಜಾಗತಿಕ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು 109 ಕೋಟಿ ರೂ., ಕರಕುಶಲ ಅಭಿವೃದ್ಧಿ ನಿಗಮದಿಂದ ಬೆಂಗಳೂರಿನಲ್ಲಿ ಅಮೃತ್ ಭಾರತ್ ಮೆಗಾ ಆರ್ಟ್ ಆ್ಯಂಡ್ ಹೆರಿಟೇಜ್ ಪಾರ್ಕ್ ನಿರ್ಮಾಣಕ್ಕೆ 100 ಕೋಟಿ ರೂ., ಗೋಕರ್ಣದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಗೆ 99.29 ಕೋಟಿ ರೂ, ವೆಚ್ಚಗಳ ಪ್ರಸ್ತಾವನೆಗಳನ್ನು ಕೇಂದ್ರದ ಎಸ್‌ಎಎಸ್‌ಸಿಐ ಯೋಜನೆಯಡಿ ಕಳಹಿಸಿಕೊಡಲಾಗಿದೆ.
Advertisement
ಸಾಲ ರೂಪದ ನೆರವು ಧಾರ್ಮಿಕ ಕೇಂದ್ರ ಹಾಗೂ ಪ್ರವಾಸಿ ಯಾತ್ರಾ ತಾಣಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಅವುಗಳನ್ನು ಜಾಗತಿಕ ಮಟ್ಟಕ್ಕೆ ಮಾರ್ಕೆಟಿಂಗ್ ಹಾಗೂ ಬ್ರಾಂಡಿಂಗ್ ಮಾಡಲು 50 ವರ್ಷಗಳ ದೀರ್ಘಾವಧಿಗೆ ಬಡ್ಡಿ ರಹಿತ ಸಾಲದ ರೂಪದಲ್ಲಿ ಕೇಂದ್ರ ಸರಕಾರ ರಾಜ್ಯಗಳಿಗೆ ಆರ್ಥಿಕ ನೆರವು ನೀಡುತ್ತದೆ. ಪ್ರವಾಸೋದ್ಯಮ ಯೋಜನೆಗಳನ್ನು ಸುಸ್ಥಿರವಾಗಿ ಅಭಿವೃದ್ಧಿಪಡಿಸಿ ಅದರ ಮೂಲಕ ಸ್ಥಳೀಯ ಆರ್ಥಿಕತೆಯ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಮೊದಲು ಬಂದವರಿಗೆ ಆದ್ಯತೆ
“ಫಸ್ಟ್ ಕಮ್ ಫಸ್ಟ್ ಸರ್ವ್’ ಸೂತ್ರದಂತೆ ಮೊದಲು ಬಂದವರಿಗೆ ಮೊದಲ ಆದ್ಯತೆಯನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ನೀಡಲಿದೆ. ಒಂದು ರಾಜ್ಯ ಗರಿಷ್ಠ 3 ಯೋಜನೆಗಳನ್ನು ಸಲ್ಲಿಸಬಹುದು. 2024-25ರಲ್ಲಿ ಕೇಂದ್ರ ಸರಕಾರ ಈ ಯೋಜನೆಗೆ 2 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಒಂದು ರಾಜ್ಯ ಒಂದು ಯೋಜನೆಗೆ ಗರಿಷ್ಠ 100 ಕೋಟಿ ರೂ. ಅನುದಾನ ಪಡೆದುಕೊಳ್ಳಬಹುದು. ಒಂದು ರಾಜ್ಯ ಗರಿಷ್ಠ 250 ಕೋಟಿ ರೂ. ಅನುದಾನ ಪಡೆದುಕೊಳ್ಳುವ ಅರ್ಹತೆ ಹೊಂದಿರುತ್ತದೆ. ಈ ಯೋಜನೆಯನ್ನು ಕೇಂದ್ರ ಸರಕಾರ 2022-23ರಲ್ಲಿ ಜಾರಿಗೆ ತಂದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಯಾವ್ಯಾವ ತಾಣ ಅಭಿವೃದ್ಧಿ?
ಬೆಂಗಳೂರಿನ ರೋರಿಚ್ ಆ್ಯಂಡ್ ದೇವಿಕಾರಾಣಿ ಎಸ್ಟೇಟ್, ಸವದತ್ತಿ ಯಲ್ಲಮ್ಮ ಗುಡ್ಡ, ಕೊಲ್ಲೂರಿನ ಪಡುವರಿ ಸೋಮೇಶ್ವರ, ಲಕ್ಕುಂಡಿ ತಾಣ, ಐಹೊಳೆ, ಬೆಂಗಳೂರಿನ ಅಮೃತ್ ಭಾರತ್ ಮೆಗಾ ಆರ್ಟ್ ಆ್ಯಂಡ್ ಹೆರಿಟೇಜ್ ಪಾರ್ಕ್, ಗೋಕರ್ಣ. -ರಫೀಕ್ ಅಹ್ಮದ್