ಧಾರವಾಡ: ಪ್ಲಾಸ್ಟಿಕ್ ವಸ್ತುಗಳನ್ನು ಕಡಿಮೆ ಮಾಡಿ, ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಪರ್ಯಾಯವಾಗಿ ಬಳಸಲು ಉತ್ತೇಜಿಸಲು ಕಂದಾಯ ಇಲಾಖೆ ಮುಂದಾಗಿದ್ದು, ಅದರ ಮೊದಲ ಪ್ರಯತ್ನವಾಗಿ ಜಿಲ್ಲೆಯ ಎಲ್ಲ ಕಂದಾಯ ಇಲಾಖೆಯ ಕಚೇರಿಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ, ಸ್ವಚ್ಛ-ಸುಂದರ ಆವರಣಗಳಾಗಿ ನಿರ್ಮಿಸಲಾಗುವುದು ಎಂದು ಧಾರವಾಡ ಉಪ ವಿಭಾಗಾಧಿಕಾರಿ ಜಯಮಾಧವ ಪಿ. ಹೇಳಿದರು. ನಗರದ ತಹಶೀಲ್ದಾರ್ ಕಚೇರಿ ಆವರಣ, ರೆವ್ಯೂನೀವ್ ಕ್ಲಬ್ ಆವರಣ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಡಾ|ಎಸ್.ಬಿ.ಬೊಮ್ಮನಹಳ್ಳಿ ಅವರು ವಿಶ್ವ ಪರಿಸರ ದಿನಾಚರಣೆ ಕುರಿತು ಪೂರ್ವಭಾವಿ ಸಭೆ ಜರುಗಿಸಿ, ಎಲ್ಲ ಇಲಾಖೆ ಅಧಿಕಾರಿಗಳು ಮುಂದಿನ ಒಂದು ತಿಂಗಳಲ್ಲಿ ತಮ್ಮ ಕಚೇರಿಗಳನ್ನು ಪ್ಲಾಸ್ಟಿಕ್ ಬಳಕೆ ಮುಕ್ತಗೊಳಿಸಬೇಕು. ಕಡ್ಡಾಯವಾಗಿ ಪ್ಲಾಸ್ಟಿಕ್ ಮುಕ್ತ ಕಚೇರಿಗಳೆಂದು ನಾಮಫಲಕ ಅಳವಡಿಸಲು ಆದೇಶ ನೀಡಿದರು. ಆ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಮೊದಲನೆಯದಾಗಿ ಈ ಆದೇಶ ಜಾರಿಗೊಳಿಸಲು ಮುಂದಾಗಿದೆ ಎಂದರು.
ಧಾರವಾಡ ತಾಲೂಕಿನ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು, ಉಪ ತಹಸಿಲ್ದಾರರು ಹಾಗೂ ತಹಶೀಲ್ದಾರ್ ಕಚೇರಿಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಇಂದಿನ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ ವಾರ ಉಳಿದ ತಾಲೂಕಿನ ತಹಶೀಲ್ದಾರರು ತಮ್ಮ ಕಚೇರಿಯಲ್ಲಿ ಈ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲು ಆದೇಶ ನೀಡಲಾಗಿದೆ. ಆದಷ್ಟು ಶೀಘ್ರ ಎಲ್ಲ ಕಚೇರಿಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ, ಸ್ವಚ್ಛ-ಸುಂದರ ಕಚೇರಿ ಆವರಣಗಳನ್ನಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಧಾರವಾಡ ತಹಶೀಲ್ದಾರ್ ಪ್ರಕಾಶ ಕುದರಿ ಮಾತನಾಡಿ, ಪ್ರತಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಹಾಗೂ ಇತರ ಕಂದಾಯ ಕಚೇರಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಿ, ಪ್ಲಾಸ್ಟಿಕ್ ಮುಕ್ತ ಕಚೇರಿ ಎಂದು ನಾಮಫಲಕ ಹಾಕಿ ಅದನ್ನು ಚಾಚೂ ತಪ್ಪದೇ ಪಾಲಿಸುವಂತೆ ಆದೇಶ ನೀಡಿದ್ದೇನೆ. ತಪ್ಪು ಕಂಡು ಬಂದಲ್ಲಿ ಸ್ಥಳೀಯ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇನೆ ಎಂದರು.
ಪ್ಲಾಸ್ಟಿಕ್ ಮುಕ್ತ ಕ್ಯಾಂಪ್ಸ್-ಸ್ವಚ್ಛತಾ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಚೇರಿಯ ಪ್ರಭಾರಿ ಗ್ರೇಡ್-2 ತಹಶೀಲ್ದಾರ್ ಪ್ರದೀಪಕುಮಾರ ಎ. ಪಾಟೀಲ, ಶಿರಸ್ತೇದಾರರಾದ ಟಿ.ಬಿ.ಬಡಿಗೇರ, ಎಚ್.ಎ.ಕೊಚ್ಚರಗಿ, ಮಲ್ಲಿಕಾರ್ಜುನ ಬಿರಾದಾರ, ಕಂದಾಯ ನಿರೀಕ್ಷಕರಾದ ಕೆ.ಶ್ರೀಧರ, ವಿನಾಯಕ ದೀಕ್ಷಿತ, ಅಜೇಯ ಆಯಿ, ಬಸವರಾಜ ಚಂದರಗಿ, ತಹಶೀಲ್ದಾರ ಕಚೇರಿ ಸಿಬ್ಬಂದಿ ಆರ್.ಎಸ್.ಬೆಂಗಳೂರಕರ, ಎಚ್.ಎಸ್ .ದೇಸಾಯಿ, ಅರುಣ ಬೆಟಗೇರಿ, ರಮೇಶ ಮೆಹರವಾಡಿ ಮತ್ತು ಗ್ರಾಮಲೆಕ್ಕಾ ಕಾರಿ ವೆಂಕಟೇಶ ಹಟ್ಟಿ, ಕುಮಾರ ಪಡೆಪ್ಪನವರ, ಎನ್.ಎಸ್.ಪಟ್ಟೇದ, ಆನಂದ ಆನಿಕಿವಿ ಸೇರಿದಂತೆ ಕಂದಾಯ ಇಲಾಖೆ ಎಪ್ಪತ್ತಕ್ಕೂ ಹೆಚ್ಚು ವಿವಿಧ ಹಂತದ ಅಧಿಕಾರಿ, ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.