Advertisement
ಸಭಾಧ್ಯಕ್ಷತೆ ವಹಿಸಿದ್ದ ಪುಣೆ ತುಳುಕೂಟದ ಅಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು ಸದಸ್ಯರೆಲ್ಲರನ್ನು ಸ್ವಾಗತಿಸಿ ಮಾತನಾಡಿ, 21 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಈ ವರ್ಷ ಬಂಟರ ಭವನದಲ್ಲಿ ನಡೆಯಲಿದ್ದು, ಗಣ್ಯ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಅಂತೆಯೇ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಮಾರಂಭವನ್ನು ಯಾವುದೇ ಲೋಪವಿಲ್ಲದೆ ಯಶಸ್ವಿಯಾಗಿ ಸಂಘಟಿಸುವಲ್ಲಿ ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಪೂರ್ಣ ರೀತಿಯಲ್ಲಿ ಸಹಕಾರ ನೀಡಬೇಕಾಗಿದೆ. ಯಾವುದೇ ಜಾತಿ, ಧರ್ಮ, ಬಡವ ಬಲ್ಲಿದನೆಂಬ ಭೇದವಿಲ್ಲದೆ ಪುಣೆಯಲ್ಲಿರುವ ಸರ್ವ ತುಳುನಾಡ ಬಾಂಧವರೆಲ್ಲರನ್ನು ನಮ್ಮ ತುಳುಭಾಷೆ, ಸಂಸ್ಕೃತಿಯ ತಳಹದಿಯಲ್ಲಿ ಭಾವೈಕ್ಯತೆಯೊಂದಿಗೆ ಒಂದೇ ಛತ್ರದಡಿಯಲ್ಲಿ ಸೇರಿಸುವ ಉದ್ದೇಶವೇ ಪುಣೆ ತುಳುಕೂಟದ ಆಶಯವಾಗಿದ್ದು ಈ ನಿಟ್ಟಿನಲ್ಲಿ ಕಳೆದ ಎರಡು ದಶಕಗಳಿಂದ ತುಳುಕೂಟ ಯಶಸ್ಸನ್ನು ಕಂಡಿದೆ ಎನ್ನಲು ಹರ್ಷವಾಗುತ್ತಿದೆ. ಪುಣೆಯಲ್ಲಿ ಹತ್ತು ಹಲವು ತುಳು-ಕನ್ನಡಿಗರ ಸಂಘ ಸಂಸ್ಥೆಗಳಿದ್ದರೂ ತುಳುಕೂಟ ತನ್ನದೇ ಆದ ಪ್ರತಿಷ್ಠೆಯೊಂದಿಗೆ ಪುಣೆಯಲ್ಲಿ ಮನೆಮಾತಾಗಿದೆ. ಪ್ರತೀವರ್ಷ ಸಂಘದ ವಾರ್ಷಿಕೋತ್ಸವ ಸಂದರ್ಭ ನಿರೀಕ್ಷೆಗೂ ಮೀರಿ ಜನರು ಆಗಮಿಸಿ ಸಂಭ್ರಮಿಸುತ್ತಿರುವುದು ನಮ್ಮ ಸಂಘಟನಾತ್ಮಕ ಬೆಳವಣಿಗೆಗೆ ಶಕ್ತಿ ತುಂಬಿದೆ. ಆದುದರಿಂದ ಅವರೆಲ್ಲರ ನಿರೀಕ್ಷಿತ ರೀತಿಯಲ್ಲಿ ನಮ್ಮ ಕಾರ್ಯಕ್ರಮವನ್ನು ಉತ್ತಮವಾಗಿ ಸಂಘಟಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಎಲ್ಲಾ ಸಮಿತಿಗಳು ಸಕ್ರಿಯರಾಗಿ ತೊಡಗಿಸಿಕೊಂಡು ಅಚ್ಚುಕಟ್ಟಿನ ವ್ಯವಸ್ಥೆಯನ್ನು ಮಾಡುವಲ್ಲಿ ಶ್ರಮಿಸಬೇಕು. ಅದೇ ರೀತಿ ಪ್ರತಿಯೋರ್ವ ತುಳು-ಕನ್ನಡಿಗರಿಗೂ ಆಮಂತ್ರಣವನ್ನು ನೀಡಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪ್ರೇರೇಪಿಸಬೇಕಾಗಿದೆ ಎಂದು ನುಡಿದರು.
Related Articles
Advertisement
ಮಹಿಳಾ ವಿಭಾಗದ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಸರಿತಾ ಟಿ. ಶೆಟ್ಟಿ ಸಂಘದ ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಮಾಹಿತಿಯಿತ್ತರು. ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಜಾತಾ ಡಿ. ಶೆಟ್ಟಿ ಮಹಿಳಾ ವಿಭಾಗದ ಜವಾಬ್ದಾರಿಯ ಬಗ್ಗೆ ತಿಳಿಸಿದರು. ಈ ಸಂದರ್ಭ ಸಂಘದ ಗೌರವಾಧ್ಯಕ್ಷ ಮಿಯ್ನಾರ್ ರಾಜ್‌ಕುಮಾರ್ ಎಂ. ಶೆಟ್ಟಿ, ಉಪಾಧ್ಯಕ್ಷರಾದ ಮೋಹನ್ ಶೆಟ್ಟಿ ಎಣ್ಣೆಹೊಳೆ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು ಮತ್ತು ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದರು. ಸಂತೋಷ್ ಶೆಟ್ಟಿ ಎಣ್ಣೆಹೊಳೆ ವಂದಿಸಿದರು.
ಪುಣೆ ತುಳುಕೂಟವು ಯಶಸ್ಸಿನ ಪಥದಲ್ಲಿ ಮುಂದುವರಿಯುತ್ತಾ ತನ್ನ ಉದ್ದೇಶವನ್ನು ಸಾರ್ಥಕಗೊಳಿಸುತ್ತಾ 21 ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವುದಕ್ಕೆ ಆನಂದವಾಗುತ್ತಿದೆ. ಈಗಾಗಲೇ ಕಾರ್ಯಕ್ರಮದ ಯಶಸ್ಸಿಗೆ ಸದಸ್ಯರೆಲ್ಲರೂ ಉತ್ಸಾಹದಿಂದ ತೊಡಗಿಕೊಂಡಿದ್ದು ಸಮಾರಂಭವನ್ನು ಶಿಸ್ತುಬದ್ಧಗೊಳಿಸುವಲ್ಲಿ ಶ್ರಮಿಸಬೇಕಾಗಿದೆ. ಕಾರ್ಯಕ್ರಮದಲ್ಲಿ ಪುಣೆಯ ಎಲ್ಲಾ ತುಳುಕನ್ನಡಿಗರು ಆಗಮಿಸುವಂತೆ ಮಾಡಲು ವಿವಿಧೆಡೆಗಳಿಂದ ಬಸ್ಸಿನ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಅದೇ ರೀತಿ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮವನ್ನು ನಡೆಸುವಲ್ಲಿ ಆದ್ಯತೆಯನ್ನು ನೀಡಬೇಕಾಗಿದೆ. ನಮ್ಮ ಕಾರ್ಯಕ್ರಮದಲ್ಲಿ ಸಾಧ್ಯವಾದಷ್ಟು ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಕಾರ್ಯವನ್ನು ಮಾಡಬೇಕಾಗಿದೆ.-ಜಯ ಕೆ. ಶೆಟ್ಟಿ, ಸಂಘದ ಸ್ಥಾಪಕಾಧ್ಯಕ್ಷರು, ಪುಣೆ ತುಳುಕೂಟ ಚಿತ್ರ -ವರದಿ :ಕಿರಣ್ ಬಿ. ರೈ ಕರ್ನೂರು