ರಬಕವಿ-ಬನಹಟ್ಟಿ: ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜು ಹಾಗೂ ಮುಧೋಳದ ಎಂಆರ್‌ಎನ್ (ನಿರಾಣಿ) ಫೌಂಡೇಶನ್ ಆಶ್ರಯದಲ್ಲಿ ನವೆಂಬರ್ 2ರಂದು ನಡೆಯುವ ಉಚಿತ ಆರೋಗ್ಯ ಶಿಬಿರದ ಮೂಲಕ ಬಡವರ, ನಿರ್ಗತಿಕರ ಮತ್ತು ನೊಂದವರ ಸೇವೆಗೆ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ. ಈ ಒಂದು ಕಾರ್ಯಕ್ರಮ ಯಶಸ್ವಿಯಾಗಲು ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇರುವವರನ್ನು ಕರೆದುಕೊಂಡು ಬರಬೇಕು ಎಂದು ನಿರಾಣಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಸಂಗಮೇಶ ನಿರಾಣಿ ತಿಳಿಸಿದರು.
ಅವರು ಬನಹಟ್ಟಿಯ ಜನತಾ ಶಿಕ್ಷಣ ಸಂಘದ ಎಸ್‌ಟಿಸಿ ಕಾಲೇಜು ಸಭಾ ಭವನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ಮಹಾಲಿಂಗಪುರ, ಮುಧೋಳ, ಜಮಖಂಡಿ ಹಾಗೂ ಬೀಳಗಿಯಲ್ಲಿ ಹಮ್ಮಿಕೊಳ್ಳಲಾದ ಉಚಿತ ಆರೋಗ್ಯ ತಪಸಣಾ ಶಿಬಿರಗಳು ಯಶಸ್ವಿಯಾಗಿವೆ. ಇಲ್ಲಿಯೂ ಕೂಡಾ ಸ್ಥಳೀಯ ಸಾರ್ವಜನಿಕರು ಹಾಗೂ ವೈದ್ಯರು ಕೂಡಿಕೊಂಡು ಯಶಸ್ವಿಯಾಗಿ ಕೈಗೊಳ್ಳಲು ಶ್ರಮಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಉಚಿತ ಕಣ್ಣು ಪರೀಕ್ಷೆ ಹಾಗೂ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮ ಹಾಗೂ ಸ್ಥಳೀಯ ಎಸ್ಟಿಸಿ ಕಾಲೇಜಿನಲ್ಲಿ ಉದ್ಯೋಗ ಮಹಾಮೇಳವನ್ನು ಕೂಡಾ ಹಮ್ಮಿಕೊಳ್ಳಲಾಗುವುದು ಎಂದು ಸಂಗಮೇಶ ನಿರಾಣಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್ ಮಾತನಾಡಿ, ಈ ಕಾರ್ಯಕ್ರಮವನ್ನು ದಿ.ಶಿದಗೌಡ ಮಗದುಮ್ ಸ್ಮರಣಾರ್ಥವಾಗಿ ಹಮ್ಮಿಕೊಳ್ಳಲಾಗಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕಾಗಿ ಮಹಾವಿದ್ಯಾಲಯ ಪೂರ್ತಿಯಾಗಿ ಸಜ್ಜಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಿಕೆಪಿಎಸ್ ಅಧ್ಯಕ್ಷ ಭೀಮಶಿ ಮಗದುಮ್ ಮಾತನಾಡಿ, ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇರುವ ರೋಗಿಗಳನ್ನು ಪೂರ್ಣ ಪ್ರಮಾಣದ ಕಾಳಜಿಯನ್ನು ಕೈಗೊಳ್ಳಲಾಗುವುದು. ಅವರನ್ನು ಶಸ್ತ್ರ ಚಿಕಿತ್ಸೆಗೆ ಕರೆದುಕೊಂಡು ಹೋಗಿ, ನಂತರ ಅವರ ಮನೆಗೆ ತಲುಪಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಂಗಳವಾರ ಪೇಟೆ ದೈವ ಮಂಡಳಿಯ ಅಧ್ಯಕ್ಷ ಶ್ರೀಶೈಲ ಧಬಾಡಿ, ಗಿರೀಶ ಅನಿಖಿಂಡಿ ಮಾತನಾಡಿದರು.
ಹಿರಿಯ ವೈದ್ಯ ಡಾ. ಪಂಡಿತ ಪಟ್ಟಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಸುರೇಶ ಚಿಂಡಕ, ರಾಮಣ್ಣ ಭದ್ರನವರ, ಶಂಕರ ಜುಂಜಪ್ಪನವರ, ಮಲ್ಲಿಕಾರ್ಜುನ ಬಾಣಕಾರ, ಮಲ್ಲಿಕಾರ್ಜುನ ಕುಂಚನೂರ, ಬಸವರಾಜ ದಲಾಲ, ಸುರೇಶ ಕೋಲಾರ ಇದ್ದರು.
ಕಾರ್ಯಕ್ರಮದಲ್ಲಿ ಹನಮಂತ ಸವದಿ, ರಾಜಶೇಖರ ಮಾಲಾಪುರ, ವೀರೂಪಾಕ್ಷಪ್ಪ ಕೊಕಟನೂರ, ಸಿದ್ರಾಮ ಸವದತ್ತಿ, ಡಾ.ರವಿ ಜಮಖಂಡಿ, ಡಾ.ಎಂ.ಸಿ.ಸಾಬೋಜಿ, ಡಾ.ಪರಶುರಾಮ ರಾವಳ, ಡಾ. ವಸ್ತ್ರದ, ಡಾ.ರೇಶ್ಮಾ ಗಜಾಕೋಶ, ಡಾ.ಪ್ರಕಾಶ ಕೆಂಗನಾಳೆ, ಡಾ.ಶಿರಹಟ್ಟಿ, ಗೀತಾ ಸಜ್ಜನ ಸೇರಿದಂತೆ ಅನೇಕರು ಇದ್ದರು.
ಮಧು ಗುರುವ ಪ್ರಾರ್ಥಿಸಿದರು. ಪ್ರೊ. ವೈ.ಬಿ.ಕೊರಡೂರ ಸ್ವಾಗತಿಸಿದರು. ಪ್ರೊ. ವಿ.ವೈ.ಪಾಟೀಲ ನಿರೂಪಿಸಿದರು. ವಿಶ್ವಜ ಕಾಡದೇವರ ವಂದಿಸಿದರು.