ವಾಷಿಂಗ್ಟನ್: ಬಾಲಿವುಡ್ ನಟಿ, ಉದ್ಯಮಿ ಪ್ರೀತಿ ಜಿಂಟಾ ಮತ್ತು ಜೀನ್ ಗುಡ್ ಇನಫ್ ದಂಪತಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆಯುವ ಮೂಲಕ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ಅವಳಿ ಮಕ್ಕಳನ್ನು ಪಡೆದಿರುವ ಬಗ್ಗೆ ಪ್ರೀತಿ ಜಿಂಟಾ ಸಾಮಾಜಿಕ ಜಾಲತಾಣದಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯನವರೇ ನಿಮ್ಮ ಆರೋಪವನ್ನು ಸಾಬೀತುಪಡಿಸಿ: ಶಾಸಕ ರಾಜೀವ್
ಬಾಡಿಗೆ ತಾಯ್ತನದ ಈ ಸೋಜಿಗದ ಪಯಣದಲ್ಲಿ ಸಹಕರಿಸಿದ ವೈದ್ಯರು ಮತ್ತು ನರ್ಸ್ ಗಳಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದ್ದಾರೆ. “ನಾನು ನಿಮ್ಮೆಲ್ಲರೊಂದಿಗೆ ಅದ್ಭುತವಾದ ಖುಷಿಯ ವಿಚಾರವನ್ನು ಹಂಚಿಕೊಳ್ಳುತ್ತಿದ್ದೇನೆ. ನಮಗೆ ಅವಳಿ ಮಕ್ಕಳು ಜನಿಸಿದ್ದು, ಜೈ ಜಿಂಟಾ ಹಾಗೂ ಜಿಯಾ ಜಿಂಟಾ ಗುಡ್ ಇನಫ್ ಎಂದು ಹೆಸರಿಡಲಾಗಿದೆ ಎಂಬುದಾಗಿ ಪ್ರೀತಿ ಜಿಂಟಾ ತಿಳಿಸಿದ್ದಾರೆ.
ನಮ್ಮ ಬದುಕಿನಲ್ಲಿನ ಹೊಸ ಮುಖಗಳ ಆಗಮನದಿಂದ ತುಂಬಾ ಖುಷಿಯಾಗಿದೆ. ವೈದ್ಯರಿಗೆ, ನರ್ಸ್ ಗಳಿಗೆ ಹೃದಯಾಂತರಾಳದ ಧನ್ಯವಾದಗಳು. ನಿಮ್ಮೆಲ್ಲರ ಶುಭ ಹಾರೈಕೆಗೆ ಅಭಿನಂದನೆಗಳು ಎಂದು ಪ್ರೀತಿ ಜಿಂಟಾ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
2016ರ ಫೆಬ್ರುವರಿ 29ರಂದು ಪ್ರೀತಿ ಜಿಂಟಾ ಮತ್ತು ಜೀನ್ ಗುಡ್ ಇನಫ್ ವಿವಾಹವಾಗಿದ್ದರು. ಇದಕ್ಕೂ ಮುನ್ನ ಐದು ವರ್ಷಗಳ ಕಾಲ ಡೇಟಿಂಗ್ ನಲ್ಲಿದ್ದರು. ಮದುವೆ ನಂತರ ಜಿಂಟಾ ಅಮೆರಿಕಕ್ಕೆ ಹೋಗಿ ನೆಲೆಸಿದ್ದರು. 2018ರಲ್ಲಿ ನೀರಜ್ ಪಾಠಕ್ ನಿರ್ದೇಶನದ ಭಯ್ಯಾಜೀ ಪ್ರೀತಿ ಜಿಂಟಾ ನಟನೆಯ ಕೊನೆಯ ಸಿನಿಮಾವಾಗಿದೆ.