ರಾಯಚೂರು: ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ಬಹಳ ಮುಖ್ಯ. ಅದನ್ನು ನಿಯಮಿತವಾಗಿ ಸೇವಿಸಿದಲ್ಲಿ ಮಾತ್ರ ತಾಯಿ ಮಗು ಆರೋಗ್ಯದಿಂದಿರಲು ಸಾಧ್ಯ ಎಂದು ನಟಿ ಪ್ರೇಮಾ ತಿಳಿಸಿದರು.
ತಾಲೂಕಿನ ಯರಗೇರಾ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ರಾಯಚೂರು ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಪೌಷ್ಟಿಕ ಆಹಾರ ಮಾಸಾಚರಣೆಯ ಪೋಷಣ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ಇಲಾಖೆಯಲ್ಲಿ ಇರುವ ಹಲವು ಆರೋಗ್ಯ ಸೇವೆಗಳನ್ನು ಉಪಯೋಗಿಸಲು ಸಲಹೆ ನೀಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ| ವೆಂಕಟೇಶ ವೈ. ನಾಯಕ ಮಾತನಾಡಿ, ಲಯನ್ಸ್ ಕ್ಲಬ್‌ನಿಂದ ಆರೋಗ್ಯ ಇಲಾಖೆಯಲ್ಲಿ ಬರುವ ಹಲವು ಸೇವೆಗಳನ್ನು ನೀಡಲು ಸದಾ ಸಿದ್ಧವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ| ಸುನೀತಾ ಮಾತನಾಡಿ, ಇಲಾಖೆಯಲ್ಲಿ ಬರುವ ಹಲವು ಸೇವೆಗಳ ಬಗ್ಗೆ ತಿಳವಳಿಕೆ ನೀಡಿದರು. ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಹಾಗೂ ಐರನ್ ಟಾನಿಕ್ ಹಾಗೂ ಕ್ಯಾಲ್ಸಿಯಂ ಮಾತ್ರೆಗಳ ಕಿಟ್ ವಿತರಿಸಲಾಯಿತು. ಬಾಣಂತಿಯರಿಗೆ ಸೀಮಂತ ಕಾರಣ ಮಾಡಲಾಯಿತು.
ಕ್ಲಬ್ ಕಾರ್ಯದರ್ಶಿ ನರೇಶಬಾಬು, ಖಜಾಂಚಿ ಹೇಮಣ್ಣ ಉಣ್ಣಿ, ಹಿರಿಯ ಸದಸ್ಯ ಬಸವರಾಜ ಗದಗಿನ, ಮಹಾದೇವಪ್ಪ, ದಿನೇಶ ದಪ್ತರಿ, ಕ್ಲಬ್ ಸದಸ್ಯರಾದ ಶೋಭಾ, ಶ್ರೀದೇವಿ, ಆರೋಗ್ಯಾ ಧಿಕಾರಿ ಡಾ| ಸುಧಾ, ಕಿರಿಯ ಆರೋಗ್ಯ ಸಹಾಯಕಿ ಶಾರದಾ ಗೋನಾಳ, ವಿನಯಕುಮಾರ ಸೇರಿದಂತೆ ಇತರರಿದ್ದರು.