Advertisement
ಗರ್ಭಧಾರಣಾ ಅವಧಿಯಲ್ಲಿ ಆಗುವ ಹಾರ್ಮೋನ್ ಏರುಪೇರಿನಿಂದಾಗಿ ಗರ್ಭಿಣಿ ಮಹಿಳೆಯರಲ್ಲಿ ಒಸಡಿನ ಸಮಸ್ಯೆ, ಒಸಡಿನ ಉರಿಯೂತ, ಒಸಡು ಊದಿಕೊಳ್ಳುವುದು, ಬ್ರಷ್ ಮಾಡುವಾಗ ಅಥವಾ ಫ್ಲಾಸ್ ಮಾಡುವಾಗ ಒಸಡಿನಲ್ಲಿ ರಕ್ತ ಬರುವುದು ಮತ್ತು ಒಸಡಿನಲ್ಲಿ ಮಾಂಸದ ಗುಳ್ಳೆಗಳು(ಎಪ್ಯುಲಿಸ್) ಕಾಣಿಸಿಕೊಳ್ಳುವುದು ಅಥವಾ ಪಯೋಜೆನಿಕ್ ಗ್ರ್ಯಾನ್ಯುಲೋಮಾ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಮಹಿಳೆಯು ಗರ್ಭಧಾರಣಾ ಅವಧಿಯಲ್ಲಿ ಬಾಯಿಯ ಆರೋಗ್ಯ ಅಂದರೆ ಹಲ್ಲು ಮತ್ತು ಬಾಯಿಗೆ ಸಂಬಂಧಿಸಿದ ಅಭ್ಯಾಸಗಳು ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತದೆ. ಗರ್ಭಧಾರಣಾ ಅವಧಿಯಲ್ಲಿ ದಂತವೈದ್ಯರನ್ನು ನಿಯಮಿತವಾಗಿ ಭೇಟಿಯಾಗಿ ಕ್ಲೀನಿಂಗ್ ಮತ್ತು ಚೆಕ್-ಅಪ್ ಮಾಡಿಸಿಕೊಳ್ಳುವ ಮೂಲಕ ಬಾಯಿಯ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ತಗ್ಗಿಸಿಕೊಳ್ಳಬಹುದು. ನಿಮ್ಮ ಹಲ್ಲುಗಳನ್ನು ಮೃದುವಾದ ಟೂತ್‌ಬ್ರಷ್ ಮೂಲಕ ದಿನಕ್ಕೆ ಕನಿಷ್ಠ ಎರಡು ಬಾರಿ ಬ್ರಷ್ ಮಾಡಿಕೊಂಡು ಸೂಕ್ಷ್ಮಾಣು ನಿರೋಧಕ ಮೌತ್‌ವಾಶ್ ಅನ್ನು ಬಳಸಿ ಎರಡು ಬಾರಿ ಬಾಯಿ ಮುಕ್ಕಳಿಸುವ ಮೂಲಕ ಹಲ್ಲುಗಳ ಮೇಲೆ ಕಟ್ಟಿಕೊಂಡಿರುವ ಕಿಟ್ಟವನ್ನು (ಹಲ್ಲುಗಳ ಮೇಲೆ ಕಟ್ಟಿಕೊಳ್ಳುವ ಸೂಕ್ಷ್ಮಾಣುಗಳ ಜೈವಿಕ ಪರದೆ) ನಿವಾರಿಸಿಕೊಳ್ಳಬಹುದು. ಪ್ರತೀ ಬಾರಿ ವಾಂತಿಯಾದ ಅನಂತರವೂ ಎರಡು ಬಾರಿ ತಿಳಿ ನೀರಿನಿಂದ ನಿಮ್ಮ ಬಾಯಿ ಮುಕ್ಕಳಿಸಿಕೊಳ್ಳಿ ಮತ್ತು ಹೊಟ್ಟೆಯ ಆಮ್ಲವು ನಿಮ್ಮ ಹಲ್ಲುಗಳ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿಕೊಳ್ಳಿ ಆದರೆ ಈ ಸಂದರ್ಭದಲ್ಲಿ ಬ್ರಷ್ ಮಾಡದಿರಿ. ಬಾಯಿಯ ಆರೋಗ್ಯಕ್ಕೆ ಅಷ್ಟೇ ಅಲ್ಲ ನಿಮ್ಮ ಇಡಿಯ ಶರೀರದ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಗರ್ಭಧಾರಣೆಯ ಅವಧಿಯ ಉದ್ದಕ್ಕೂ ಉತ್ತಮ ಆಹಾರ ಕ್ರಮವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ಈ ಅವಧಿಯಲ್ಲಿ ವಿವಿಧ ರೀತಿಯ ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇವಿಸಿ. ನೀವು ಸೇವಿಸುವ ಆಹಾರದಲ್ಲಿ ತಾಜಾ ಹಣ್ಣು-ತರಕಾರಿಗಳು, ಇಡಿಯ – ಧಾನ್ಯಗಳು ಮತ್ತು ಹಾಲಿನ ಉತ್ಪನ್ನಗಳನ್ನು ಸೇರಿಸಿ. ವಿಶೇಷವಾಗಿ ಸಕ್ಕರೆ ಸೇರಿಸಿರುವ ಆಹಾರ-ಪಾನೀಯಗಳನ್ನು, ಕ್ಯಾಂಡಿ ಮತ್ತು ಕುಕ್ಕೀಸ್‌ಗಳನ್ನು, ಜ್ಯೂಸ್ ಮತ್ತು ಸೋಡಾವನ್ನು ದೂರವಿರಿಸಿ. ಊಟ ಮತ್ತು ಉಪಾಹಾರದ ನಡುವೆ ಯಥೇತ್ಛವಾಗಿ ನೀರು ಕುಡಿಯಿರಿ.
ನೀವು ಗರ್ಭಿಣಿ ಎನ್ನುವ ವಿಚಾರವನ್ನು ನಿಮ್ಮ ದಂತವೈದ್ಯರಿಗೆ ತಿಳಿಸುವುದು ಬಹಳ ಆವಶ್ಯಕ ಯಾಕೆಂದರೆ ಮೊದಲ ಮೂರು ತಿಂಗಳಲ್ಲಿ ದಂತಚಿಕಿತ್ಸೆಗೆ ಸಂಬಂಧಿಸಿದ ಹಾಗೆ ಕೆಲವು ಚಿಕಿತ್ಸೆಗಳನ್ನು ಮಾಡಬಾರದು ಮತ್ತು ಕೆಲವು ಔಷಧಿಗಳನ್ನು ಸೇವಿಸಬಾರದು ಎಂಬ ನಿಯಮವಿದೆ. ಗರ್ಭಧಾರಣೆಯ ಅವಧಿಯಲ್ಲಿ ನಿಯಮಿತವಾಗಿ ದಂತಪರೀಕ್ಷೆ ಮಾಡಿಸಿಕೊಳ್ಳುವುದು ಸುರಕ್ಷಿತ. ನಿಮ್ಮ ಗರ್ಭಧಾರಣೆಯ ನಾಲ್ಕು ಮತ್ತು ಆರನೆಯ ತಿಂಗಳಲ್ಲಿ ದಂತಚಿಕಿತ್ಸೆಯ ಯೋಜನೆ ಇದ್ದರೆ ಉತ್ತಮ ಯಾಕೆಂದರೆ ಗರ್ಭಧಾರಣೆಯ ಕೊನೆಯ ಮೂರು ತಿಂಗಳಲ್ಲಿ ದಂತಚಿಕಿತ್ಸೆಯ ಕುರ್ಚಿಯಲ್ಲಿ ಬಹಳ ಹೊತ್ತು ಕುಳಿತಿರುವುದು ಕಷ್ಟ ಆಗಬಹುದು. ಒಂದು ತುರ್ತು ದಂತ ಚಿಕಿತ್ಸೆಯ ಕಾರಣಕ್ಕಾಗಿ ನಿಮಗೆ ಎಕ್ಸ್-ರೇ ತೆಗೆಯುವ ಅನಿವಾರ್ಯತೆ ಇದ್ದರೆ, ಆ ಪ್ರಕ್ರಿಯೆ ನಡೆಸುವುದಕ್ಕೆ ಮೊದಲು, ನಿಮ್ಮ ಮತ್ತು ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಬಗ್ಗೆ ಸಂಪೂರ್ಣ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಆವಶ್ಯಕ.
Related Articles
Advertisement
ಬಾಯಿಯ ಉತ್ತಮ ಆರೋಗ್ಯ ಮತ್ತು ಹಲ್ಲುಗಳ ಕಾಯಿಲೆಗಳನ್ನು ತಡೆಗಟ್ಟುವ ಬಗೆಗಿನ ಅರಿವು, ಗರ್ಭಿಣಿಯ ಆರೋಗ್ಯದ ದೃಷ್ಟಿಯಿಂದ ಅಷ್ಟೇ ಅಲ್ಲ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಬಾಯಿಯ ಆರೋಗ್ಯದ ದೃಷ್ಟಿಯಿಂದಲೂ ಬಹಳ ಮುಖ್ಯವಾಗುತ್ತದೆ. ನವಜಾತ ಶಿಶುಗಳು/ಎಳೆಯ ಮಕ್ಕಳಲ್ಲಿ ಕಂಡು ಬರುವ ದಂತಕುಳಿಯನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳು ಅವರ ತಾಯಿಯಿಂದ ಬಂದಿರುತ್ತವೆ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ. ಬಾಯಿಯ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವ ಮೂಲಕ ಇಂತಹ ದಂತಕುಳಿಕಾರಕ ಬ್ಯಾಕ್ಟೀರಿಯಗಳು ನವಜಾತ ಶಿಶುವಿಗೆ ವರ್ಗಾವಣೆ ಆಗುವುದನ್ನು ವಿಳಂಬಗೊಳಿಸಬಹುದು ಅಥವಾ ತಡೆಯಬಹುದು ಮತ್ತು ಆ ಮೂಲಕ ಎಳೆಯ ಮಕ್ಕಳಲ್ಲಿ ದಂತಕುಳಿ ಉಂಟಾಗುವ ಸಮಸ್ಯೆಯ ಪ್ರಮಾಣವನ್ನು ತಗ್ಗಿಸಿಕೊಳ್ಳಬಹುದು.
ಗರ್ಭಧಾರಣೆ ಅನ್ನುವುದು ಒಬ್ಬ ಮಹಿಳೆಯ ಜೀವನದ ಪ್ರಮುಖ ಘಟ್ಟ. ಬಾಯಿಯ ಆರೋಗ್ಯವು ಒಟ್ಟಾರೆ ಆರೋಗ್ಯದ ಮೇಲೆ ನೇರ ಪ್ರಭಾವವನ್ನು ಬೀರುತ್ತದೆ. ಗರ್ಭಧಾರಣಾ ಅವಧಿಯ ಬಾಯಿಯ ಆರೈಕೆಯು ಬಹಳ ಸುರಕ್ಷಿತ ವಾಗಿರುತ್ತದೆ. ನಿಯುತವಾಗಿ ದಂತ ಪರೀಕ್ಷೆ ಮಾಡಿಸಿಕೊಂಡು, ಚಿಕಿತ್ಸೆಯ ಆವಶ್ಯಕತೆ ಇದ್ದಲ್ಲಿ ಚಿಕಿತ್ಸೆ ಮಾಡಿಸಿಕೊಂಡು ಬಾಯಿಯ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು ಎಂಬುದು ನಮ್ಮ ಸಲಹೆ.
-ಡಾ| ನಿಶು ಸಿಂಘಾÉ , ರೀಡರ್, ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ವಿಭಾಗ,
ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ಮಣಿಪಾಲ.