ಪಡುಬಿದ್ರಿ: ಕೇಂದ್ರ ಸರಕಾರ ಜಿಲ್ಲಾಡಳಿತಕ್ಕೆ ಎ. 1ರಿಂದ ಹಸ್ತಾಂತರಿಸಿರುವ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ರಾಜ್ಯ ಸರಕಾರದ ಅನುದಾನದೊಂದಿಗೆ ತೇಲುವ ರೆಸ್ಟೋರೆಂಟ್ ಪ್ರಾರಂಭ, ಈಗಿನ 49 ಮಂದಿ ಸಿಬಂದಿ ವರ್ಗವನ್ನು ಉಳಿಸಿಕೊಂಡು ಮುಂದಿನ ಎರಡು ವರ್ಷಗಳಲ್ಲಿ 100 ಮಂದಿಗೆ ಉದ್ಯೋಗ ಸೃಷ್ಟಿ ಯೋಜನೆ, ಹೆಚ್ಚಿನ ಪ್ರವಾಸೀ ಆಕರ್ಷಣೆ ಹಾಗೂ ತೂಗು ಸೇತುವೆ ನಿರ್ಮಾಣದ ಮೂಲಕ ಅಭಿವೃದ್ಧಿಗಳಿಗೆ ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಹೇಳಿದರು.
ಅವರು ಎ. 2ರಂದು ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ಫುಡ್ ಕೋರ್ಟ್, ಪ್ರವಾಸಿ ಆಕರ್ಷಣೆಯ ಕಯಾಕಿಂಗ್, ಬೋಟಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿದರು. ಕಾಮಿನಿ ಹೊಳೆಯಲ್ಲಿ ಕಯಾಕಿಂಗ್ ವಿಶಿಷ್ಟ ಅನುಭವವನ್ನೂ ಜಿಲ್ಲಾಧಿಕಾರಿ ಪಡೆದರು.
ಜಿಲ್ಲಾಧಿಕಾರಿಗಳೊಂದಿಗೆ ಪ್ರವಾ ಸೋದ್ಯಮ ಇಲಾಖಾ ಉಪ ನಿರ್ದೇಶಕ ಸೋಮಶೇಖರ್, ಬ್ಲೂ ಫ್ಲ್ಯಾಗ್ ಬೀಚ್ ನೋಡಲ್ ಅಧಿಕಾರಿ ಚಂದ್ರಶೇಖರ್ ನಾಯಕ್, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಗಣೇಶ್, ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ| ಹರೀಶ್, ಜಿ. ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ಉಡುಪಿ ತಾ. ಪಂ. ಮಾಜಿ ಅಧ್ಯಕ್ಷೆ ನೀತಾ ಗುರುರಾಜ್, ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ (ಆ್ಯಕ್ಟ್)ನ ಅಧ್ಯಕ್ಷ ಮನೋಹರ ಶೆಟ್ಟಿ ಕಾಪು ಹಾಗೂ ಕಾರ್ಯದರ್ಶಿ ಗೌರವ್ ಶೇಣವ, ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು, ಉಪಾಧ್ಯಕ್ಷೆ ಯಶೋದಾ, ಗ್ರಾ. ಪಂ. ಸದಸ್ಯರು, ಮೊಗವೀರ ಮುಂದಾಳು ಸುಕುಮಾರ ಶ್ರೀಯಾನ್ ಮತ್ತಿತರಿದ್ದರು.
ಅಭಿವೃದ್ಧಿಗೆ ಕ್ರಮ
ಇಲ್ಲಿ ಬಾಕಿ ಉಳಿದಿರುವ ತಡೆಗೋಡೆಯನ್ನು 50 ಲಕ್ಷ ರೂ. ಗಳಲ್ಲಿ ಪೂರ್ಣಗೊಳಿಸಬೇಕಿದೆ. ರಸ್ತೆ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕಾಮಿನಿ ಹೊಳೆಗಡ್ಡವಾಗಿ ಸೇತುವೆ ನಿರ್ಮಾಣ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಲ್ಲಿಂದ ಪಡುಬಿದ್ರಿಯ ಮುಖ್ಯ ಬೀಚ್‌ವರೆಗೆ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.