Advertisement

ಆರೋಗ್ಯ ವಲಯಕ್ಕೆ ಆದ್ಯತೆ ಸ್ವಾಗತಾರ್ಹ

09:54 PM Feb 01, 2020 | Lakshmi GovindaRaj |

ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್‌ನಲ್ಲಿ ಇತರೆ ವಲಯಗಳನ್ನು ಹೋಲಿಸಿದರೆ ಆರೋಗ್ಯ ವಲಯಕ್ಕೆ ಅಗತ್ಯ ಪ್ರಮಾಣದ ಆದ್ಯತೆ ನೀಡಲಾಗಿದೆ. ಕಳೆದ ವರ್ಷಕ್ಕಿಂತ ಶೇ.10 ರಷ್ಟು ಹೆಚ್ಚು ಅನುದಾನ ಈ ಬಾರಿ ಆರೋಗ್ಯ ವಲಯಕ್ಕೆ ಸಿಕ್ಕಿದೆ. ಇನ್ನು 2025ಕ್ಕೆ ಆರೋಗ್ಯ ವಲಯದ ಜಿಡಿಪಿಯನ್ನು ಶೇ.2.5ಕ್ಕೆ ತಲುಪಿಸಲು ಈ ಹೆಚ್ಚಿನ ಅನುದಾನವು ಅಗತ್ಯವಾಗಿತ್ತು. ಜತೆಗೆ ದೇಶದ ಆರೋಗ್ಯ ವಲಯದ ಸೌಕರ್ಯಗಳನ್ನು ಇನ್ನಷ್ಟು ಉತ್ತಮಗೊಳಿಸಲು ಸಹಾಯಕವಾಗಲಿದೆ.

Advertisement

ಮೂಲಸೌಕರ್ಯ ನಿಧಿಯನ್ನು ಬಳಸಿಕೊಂಡು ಎರಡು ಹಾಗೂ ಮೂರನೇ ಹಂತದ ನಗರಗಳ ಆಸ್ಪತೆಗಳ ಉನ್ನತೀಕರಣಕ್ಕೆ ಮುಂದಾಗಿದೆ. ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದ (ಪಿಪಿಪಿ ಮಾದರಿ) ಮೂಲಕ ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಸೌಲಭ್ಯಗಳ ಗುಣಮಟ್ಟ ಹೆಚ್ಚಿಸಲು ಯೋಜನೆ ರೂಪಿಸಿರುವುದು ಹಾಗೂ ವೈದ್ಯಕೀಯ ಸಲಕರಣೆಗಳಿಗೆ ಮೇಕ್‌ ಇನ್‌ ಇಂಡಿಯಾ ಸ್ವಾಗತಾರ್ಹವಾಗಿದೆ. ಜಿಲ್ಲಾ ಮಟ್ಟದ ದೊಡ್ಡ ಆಸ್ಪತ್ರೆಗಳಲ್ಲಿ ಸ್ನಾತಕೋತ್ತರ ಪದವಿಗಳಾದ ಡಿಎನ್‌ಬಿ, ಎಸ್‌ಎನ್‌ಬಿ ಕೋರ್ಸ್‌ ಆರಂಭಿಸುತ್ತಿರುವುದರಿಂದ ಸ್ಥಳೀಯ ಮಟ್ಟದಲ್ಲಿ ತಜ್ಞ ವೈದ್ಯರ ಸಂಖ್ಯೆ ವೃದ್ಧಿಯಾಗಲಿದೆ.

ಕೊರೊನಾ ವೈರಸ್‌ನಂತಹ ಹೊಸ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಮಕ್ಕಳ ಇಂದ್ರಧನುಷ್‌ ಲಸಿಕಾ ಕಾರ್ಯಕ್ರಮ ವಿಸ್ತರಣೆಯು ಉತ್ತಮ ಕ್ರಮವಾಗಿದೆ. ಹೊಸ ಆಸ್ಪತ್ರೆಗಳ ಸೇರ್ಪಡೆ ಮೂಲಕ ಆಯುಷ್ಮಾನ್‌ ಭಾರತ್‌ ಆರೋಗ್ಯ ಯೋಜನೆಗೆ ಒತ್ತು ನೀಡಲಾಗಿದೆ. ಇದರ ಜತೆಗೆ ಆಯುಷ್ಮಾನ್‌ ಭಾರತ್‌ ಅಡಿಯಲ್ಲಿ ದೀರ್ಘಾವಧಿಯ ಸುಸ್ಥಿರ ಪ್ಯಾಕೇಜ್‌ ದರಗಳು ಖಾಸಗಿ ಹೂಡಿಕೆಗೆ ಉತ್ತೇಜನ ನೀಡಬಹುದಿತ್ತು. ಎಲ್ಲರಿಗೂ ಆರೋಗ್ಯ ಎಂಬ ಗುರಿಯನ್ನು ಸಾಧಿಸಲು ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಮತ್ತು ಡಿಜಿಟಲ್‌ ಆರೋಗ್ಯ ವ್ಯವಸ್ಥೆಗೆ ಆದ್ಯತೆ ನೀಡಿ ಇದಕ್ಕಾಗಿಯೇ ಇನ್ನಷ್ಟು ಅನುದಾನವನ್ನು ಮೀಸಲಿಡಬೇಕಿತ್ತು.

* ಡಾ.ಎಚ್‌.ಸುದರ್ಶನ್‌ ಬಲ್ಲಾಳ, ಆರೋಗ್ಯ ತಜ್ಞರು

Advertisement

Udayavani is now on Telegram. Click here to join our channel and stay updated with the latest news.

Next