Advertisement

ಕೈಗಾರಿಕಾ ವಲಯ ಸ್ಥಾಪನೆಗೆ ಆದ್ಯತೆ: ಸುಧಾಕರ್‌

09:44 PM Jan 18, 2020 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗೊಳಿಸುವ ನಿಟ್ಟಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಹೆಬ್ಟಾಳ ನಾಗವಾರ ಸಂಸ್ಕರಿತ ತ್ಯಾಜ್ಯ ನೀರು ಜಿಲ್ಲೆಯ ಕೆರೆಗಳಿಗೆ ಫೆಬ್ರವರಿ ಅಂತ್ಯದೊಳಗೆ ಹರಿಯಲಿದ್ದು, ಬಳಿಕ ಜಿಲ್ಲೆಯಲ್ಲಿ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ಕೈಗಾರಿಕೆಗಳ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಶಾಸಕ ಡಾ.ಕೆ.ಸುಧಾಕರ್‌ ತಿಳಿಸಿದರು.

Advertisement

ತಾಲೂಕಿನ ದಿಬ್ಬೂರು ಗ್ರಾಮದಲ್ಲಿ ಲೋಕೋಪಯೋಗಿ ವತಿಯಿಂದ ಅಭಿವೃದ್ಧಿಪಡಿಸಲಿರುವ 2.30 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ಬಜೆಟ್‌ನಲ್ಲಿ ಸ್ಪಂದನೆ: ಈಗಾಗಲೇ ಕೈಗಾರಿಕಾ ಸಚಿವರಾದ ಜಗದೀಶ್‌ ಶೆಟ್ಟರ್‌ ಅವರೊಂದಿಗೆ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ಸಂಬಂಧ ಚರ್ಚೆ ನಡೆಸಲಾಗಿದ್ದು, ಬರುವ ಬಜೆಟ್‌ನಲ್ಲಿ ಜಿಲ್ಲೆಯ ಕೈಗಾರಿಕೆಗಳ ಸ್ಥಾಪನೆಗೆ ಸ್ಪಂದನೆ ಸಿಗಲಿದೆ ಎಂದರು. ಜಿಲ್ಲೆಯಲ್ಲಿ ನೀರಾವರಿ ಸಮಸ್ಯೆಯಿಂದ ಕೈಗಾರಿಕೆಗಳ ಸ್ಥಾಪನೆಗೆ ಹಿನ್ನಡೆ ಆಗಿದ್ದು, ಕ್ಷೇತ್ರದಲ್ಲಿ ಸರ್ಕಾರಿ ಜಮೀನು ಪತ್ತೆ ಮಾಡಿ ಕನಿಷ್ಠ 200 ಎಕರೆ ಇರುವ ಜಾಗದಲ್ಲಿ ಕೈಗಾರಿಕೆ ಎಸ್ಟೇಟ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

44 ಕೆರೆಗಳಿಗೆ ನೀರು ಹರಿಸಲು ಯೋಜನೆ: ಹೆಬ್ಟಾಳ ಹಾಗೂ ನಾಗವಾರ ಸಂಸ್ಕೃರಿತ ತ್ಯಾಜ್ಯ ನೀರು ಯೋಜನೆ ಭರದಿಂದ ಅನುಷ್ಠಾನಗೊಳ್ಳುತ್ತಿದ್ದು, ಈ ತಿಂಗಳಾಂತ್ಯಕ್ಕೆ ಅಥವ ಫೆಬ್ರವರಿ ಒಳಗೆ ಚಿಕ್ಕಬಳ್ಳಾಪುರದ ಕಂದವಾರ ಕೆರೆಗೆ ನೀರು ಬರಲಿದ್ದು, ಅಲ್ಲಿಂದ ಜಿಲ್ಲೆಯ ಒಟ್ಟು 44 ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ ಎಂದರು.

200 ಕಿ.ಮೀ ರಸ್ತೆ ಅಭಿವೃದ್ಧಿ: ಕ್ಷೇತ್ರದಲ್ಲಿ ಇದುವರೆಗೂ ಸುಮಾರು 200 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಿದ್ದು, ಇನ್ನೂ ಶೇ.20 ರಿಂದ 30 ರಷ್ಟು ರಸ್ತೆ ಕಾಮಗಾರಿಗಳು ಬಾಕಿ ಇವೆ. ರಾಜ್ಯ ಹೆದ್ದಾರಿ ಮಾದರಿಯಲ್ಲಿ ಗುಣಮಟ್ಟದ ರಸ್ತೆಯನ್ನು ಪ್ರತಿ ಕಿ.ಮೀ.ಗೆ ಒಂದು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

Advertisement

ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಆಗಿದ್ದು, ಮಾಡಬೇಕಾದ ಕಾರ್ಯ ಸಾಕಷ್ಟು ಇದೆ. ಈ ಮೂರುವರೆ ವರ್ಷದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿ ಈ ಭಾಗದ ಜನರ ವಿಶ್ವಾಸ ಉಳಿಸಿಕೊಳ್ಳುತ್ತೇನೆ. ಮುಖ್ಯವಾಗಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು ಕೊಡಲಾಗಿದೆ. ಈಗಾಗಲೇ ಕೋಲಾರಕ್ಕೆ ಕೆ.ಸಿ.ವ್ಯಾಲಿ ಯೋಜನೆಯಿಂದ ನೀರು ಹರಿದು ಆ ಭಾಗದ ಕೊಳವೆ ಬಾವಿಗಳಲ್ಲಿ ಸಾಕಷ್ಟು ನೀರು ಲಭ್ಯವಾಗುತ್ತಿದೆ.

ಪ್ರತಿ ಕೆರೆಯನ್ನು ತುಂಬಿಸುವ ಕೆಲಸ ಮಾಡಲಾಗಿದೆ. ಅದೇ ರೀತಿ ಜಿಲ್ಲೆಯ ಎಲ್ಲಾ ಕೆರೆಗಳಿಗೆ ಹೆಚ್‌ಎನ್‌ ವ್ಯಾಲಿ ನೀರು ಹರಿಸಲಾಗುವುದು ಎಂದರು. ಕಂದವಾರ ಕೆರೆಗೆ ನೀರು ಹರಿಯುವ ಸಂದರ್ಭದಲ್ಲಿ ಕೆರೆ ಸಮೀಪವೇ ಎರಡು ದಿನಗಳ ಕಾಲ ಸುಮಾರು 20 ರಿಂದ 30 ಸಾವಿರ ಜನರನ್ನು ಸೇರಿಸಿ ಜಲಜಾತ್ರೆ ಹಾಗೂ ಎರಡನೇ ದಿನ ಜನಪದ ಜಾತ್ರೆ ನಡೆಸಲಾಗುವುದು ಎಂದು ಶಾಸಕರು ತಿಳಿಸಿದರು.

ಜಿಪಂ ಮಾಜಿ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ, ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಕೋಚಿಮುಲ್‌ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ನಾಗೇಶ್‌, ಮುಖಂಡರಾದ ಮರಳಕುಂಟೆ ಕೃಷ್ಣಮೂರ್ತಿ, ಮೋಹನ್‌, ಪ್ರಸಾದ್‌, ರಾಮಪ್ಪ, ವೆಂಕಟನಾರಾಯಣಪ್ಪ, ಕೃಷ್ಣಾರೆಡ್ಡಿ, ಗರಿಗರೆಡ್ಡಿ, ಮಂಚನಬಲೆ ಶ್ರೀಧರ್‌, ಸಿ.ಎಸ್‌.ಎನ್‌ ರಮೇಶ್‌, ಕೇಶವಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

2.40 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿಗೆ ಚಾಲನೆ: ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ.ಸುಧಾಕರ್‌, ಲೋಕೋಪಯೋಗಿ ಇಲಾಖೆ ಸಿಎಂಜಿಆರ್‌ವೈ ಯೋಜನೆಯಡಿ ರೂ.140.30 ಲಕ್ಷ ವೆಚ್ಚದಲ್ಲಿ ರಾ.ಹೆ.-07 ರಿಂದ ಅಬ್ಲೂಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡವಿಗೊಲ್ಲವಾರಹಳ್ಳಿ ಗ್ರಾಮದಲ್ಲಿ ಕಾಮಗಾರಿಗೆ ಚಾಲನೆ ನೀಡಿದರು. 90 ಲಕ್ಷ ರೂ. ವೆಚ್ಚದಲ್ಲಿ ದಿಬ್ಬೂರು-ಅಜ್ಜಕದಿರೇನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ದಿಬ್ಬೂರು ಗ್ರಾಮದಲ್ಲಿ ಭೂಮಿಪೂಜೆ ನೆರವೇರಿಸಿದರು.

ರಾಜಕೀಯ, ಒಣ ಪ್ರತಿಷ್ಠೆ ಬಿಡಿ: ದಿಬ್ಬೂರು ಗ್ರಾಮದಲ್ಲಿ ಕೆಲವರು ರಾಜಕೀಯ ಒಣ ಪ್ರತಿಷ್ಠೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ತಮ್ಮ ರಾಜಕೀಯ ಎದುರಾಳಿಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದ ಶಾಸಕ ಸುಧಾಕರ್‌, ಚುನಾವಣೆಗೆ ರಾಜಕಾರಣ ಮುಗಿಯಬೇಕು. ಆದರೆ ಕೆಲವರು ರೈತರು ಅಲ್ಲದವರು ದಿನ 24 ಗಂಟೆ ಕಾಲ ರಾಜಕಾರಣ ಮಾಡಲು ಹೊರಟಿದ್ದಾರೆ.

ದೇವಾಲಯದ ಮುಂದೆ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದು ಸರಿಯಲ್ಲ. ಎಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕೆಂಬು ಪ್ರಜ್ಞೆ ಅವರಿಗೆ ಬೇಡವೇ ಎಂದರು. ರಾಜಕೀಯ ಒಣ ಪ್ರತಿಷ್ಠೆ ಪ್ರದರ್ಶಿಸುವರ ಬಗ್ಗೆ ನಾವು ಎಚ್ಚರಿಕೆ ವಹಿಸಿ ಮುಂದಿನ ಮೂರು ವರ್ಷದಲ್ಲಿ ಅವರಿಗೆ ತಕ್ಕಪಾಠ ಕಲಿಸುವ ಕೆಲಸ ಮಾಡುವುದಾಗಿ ಶಾಸಕ ಸುಧಾಕರ್‌ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next