ಶಿರಸಿ: ಕನ್ನಡ ಸಾಹಿತ್ಯ ಪರಿಷತ್ತು ಕೇವಲ ನಗರ ಪ್ರದೇಶಕ್ಕಷ್ಟೇ ಸೀಮಿತವಾಗಿರದೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನಸಾಮಾನ್ಯರೆಡೆಗೆ ಪರಿಷತ್ತನ್ನು ಒಯ್ಯುವ ಕೆಲಸ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ. ಎನ್. ವಾಸರೆ ಹೇಳಿದರು.
ಅವರು ನೆಮ್ಮದಿ ಕುಟೀರದಲ್ಲಿ ಹಮ್ಮಿಕೊಂಡಿದ್ದ ಕಸಾಪ ಅಜೀವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವ ಸಭೆ ಹಾಗೂ ತಾಲ್ಲೂಕು ಘಟಕದ ಹೊಣೆಗಾರಿಕೆಯ ಸಂಬಂಧಪಟ್ಟಂತೆ ಅಭಿಪ್ರಾಯ ಸಂಗ್ರಹಿಸುವ ಸಮಾಲೋಚನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ನ ಚುನಾವಣಾ ಸಂದರ್ಭದಲ್ಲಿ ಶಿರಸಿ ಸೇರಿದಂತೆ ಜಿಲ್ಲೆಯ ಆಜೀವ ಸದಸ್ಯರು ತೋರಿಸಿದ ಪ್ರೀತಿಯನ್ನು ಎಂದಿಗೂ ಮರೆಯಲಾರೆ. ಜಾತಿ, ಧರ್ಮ, ಪ್ರಾದೇಶಿಕತೆಯನ್ನು ಮೀರಿ ಇಡೀ ಜಿಲ್ಲೆಯ ಕಸಾಪ ಅಜೀವ ಸದಸ್ಯರು ನನಗೆ ಮತ ನೀಡುವ ಮೂಲಕ ರಾಜ್ಯದಲ್ಲಿಯೇ ಅತಿ ಹೆಚ್ಚಿನ ಅಂತರದ ಗೆಲುವನ್ನು ನೀಡಿ ದಾಖಲೆಯಾಗುವ ಹಾಗೆ ಮಾಡಿದ್ದಾರೆ ಹಾಗಾಗಿ ನಾನು ಪ್ರತಿಯೊಬ್ಬ ಅಜೀವ ಸದಸ್ಯರಿಗೆ ನನ್ನ ಈ ಗೆಲುವನ್ನು ಅರ್ಪಿಸುತ್ತಿದ್ದೇನೆ ಎಂದರು.
ಸಾಂಸ್ಕೃತಿಕವಾಗಿ ಸಾಕಷ್ಟು ಶ್ರೀಮಂತವಾಗಿರುವ ಶಿರಸಿ ತಾಲ್ಲೂಕಿನಲ್ಲಿ ಸಾಕಷ್ಟು ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಅವು ಮುಂದೆ ಸಾಹಿತ್ಯ ಪರಿಷತ್ತಿನ ವೇದಿಕೆಯಲ್ಲಿ ನಡೆಯುವ ರೀತಿಯಲ್ಲಿ ಸಂಘಟನೆ ಮಾಡಬೇಕಾದ ಅಗತ್ಯತೆ ಇದೆ. ನಾವು ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯಲ್ಲಿ ಎಲ್ಲರನ್ನೂ ಒಳಗೊಂಡು ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ರೂಪಿಸಬೇಕಾಗಿದ್ದು ಅದರ ಭಾಗವಾಗಿ ಜಿಲ್ಲೆಯ ಹಿರಿ ಕಿರಿಯ ಸಾಹಿತಿಗಳ ಸಭೆಯನ್ನು ಕರೆದು ಅವರ ಸಲಹೆಯನ್ನು ಪಡೆದು ಪರಿಷತ್ತನ್ನು ಕಟ್ಟಿಸುವ ಮುನ್ನೋಟ ಇಟ್ಟುಕೊಂಡಿದ್ದೇನೆ ಎಂದರು.
ಹಿರಿಯ ಸಾಹಿತಿ ಭಾಗೀರಥಿ ಹೆಗಡೆ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಈ ಸಂಘಟನೆಯ ಮೂಲಕ ಹಲವಾರು ರಚನಾತ್ಮಕ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದರು.
ಸ್ಕೊಡ್ ವೇಸ್ ಸಂಸ್ಥೆಯ ಮುಖ್ಯಸ್ಥ ಡಾ. ವೆಂಕಟೇಶ್ ನಾಯ್ಕ್, ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯಿಕ ಕೆಲಸಗಳಿಗೆ, ಗುಂಪಿಗೆ ಸೀಮಿತವಾಗಿರದೆ ಎಲ್ಲ ಶ್ರಮಿಕ ವರ್ಗದ ಧ್ವನಿಯಾಗಿ ಕೆಲಸ ಮಾಡುವಂತಾಗಬೇಕು. ಜನಪದ ಹಾಗೂ ಬುಡಕಟ್ಟು ಸಂಸ್ಕೃತಿಯನ್ನು ಬಿಂಬಿಸುವ ರಚನಾತ್ಮಕ ಕಾರ್ಯಕ್ರಮಗಳನ್ನು ಮಾಡುವಂತಾಗಬೇಕು ಎಂದರು.
ಹಿರಿಯರಾದ ಡಾ. ನಾಗೇಶ್, ನಾಯಕ್, ಎಸ್. ಎಸ್. ಭಟ್, ಹಿರಿಯ ಪತ್ರಕರ್ತರಾದ ಸುಬ್ರಾಯ ಭಟ್ ಬಕ್ಕಳ ಸಂಘಟಕರಾದ ಜಿ. ಐ. ಹೆಗಡೆ ಸೋಂದೆ, ಕೃಷ್ಣ ಬದುಕಿ, ಶ್ರೀನಿವಾಸ್ ನಾಯ್ಕ ಮುಂತಾದವರು ಮಾತನಾಡಿದರು.
ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಭಾಗವತ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಸಾಹಿತಿ ಆರ್.ಡಿ. ಹೆಗಡೆ, ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಕೆ. ಮಹೇಶ್, ನಿವೃತ್ತ ಪ್ರಾಚಾರ್ಯ ಕೆ. ಎನ್ ಹೊಸಮನಿ ಬರಹಗಾರರಾದ ದತ್ತಗುರು ಕಂಠಿ, ಸಿಂಧು ಚಂದ್ರ ಹೆಗಡೆ, ಬನವಾಸಿಯ ಅರವಿಂದ ಶೆಟ್ಟಿ ಮುಂತಾದವರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆ ಯವರು ಶಿರಸಿ ತಾಲ್ಲೂಕು ಘಟಕದ ಮುಂದಿನ ಹೊಣೆಗಾರಿಕೆಯ ಕುರಿತಂತೆ ಕಸಾಪ ಅಜೀವ ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಿದರು.