ವಿಜಯಪುರ: ನಗರದ ಎಲ್ಲ ಸರ್ಕಾರಿ ಶಾಲಾ ಕಾಲೇಜುಗಳನ್ನು ಅಭಿವೃದ್ಧಿ ಪಡಿಸಲು ಆದ್ಯತೆ ನೀಡುವ ಮೂಲಕ ಸರ್ಕಾರಿ ಶೈಕ್ಷಣಿಕ ವ್ಯವಸ್ಥೆ ಬಲವರ್ಧನೆಗೆ ಮುಂದಾಗಲಿದ್ದೇನೆ. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಓದುವ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವ ಗುರಿ ಹೊಂದಿದ್ಧೇನೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು.
ನಗರದ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯ ನಬಾರ್ಡ್ ಯೋಜನೆ ಅನುದಾನದಲ್ಲಿ 1 ಕೋಟಿ ರೂ. ಮೊತ್ತದಲ್ಲಿ ಮಹಾತ್ಮ ಗಾಂಧಿಧೀಜಿ ವೃತ್ತದ ಹತ್ತಿರದ ಸರಕಾರಿ ಬಾಲಕರರ ಪದವಿ ಪೂರ್ವ ಕಾಲೇಜಿನ 6 ಕೊಠಡಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಸರ್ಕಾರಿ ಶಾಲಾ ಕಾಲೇಜುಗಳಿಗೂ ಸಹ ಖಾಸಗಿ ಶಾಲಾ ಕಾಲೇಜುಗಳಂತೆ ಹೈಟೆಕ್ ಸ್ಪರ್ಶ ಕೊಡುವ ಯೋಜನೆ ಇದೆ. ಇದರಿಂದಾಗಿ ಈ ಭಾಗದ ಎಲ್ಲ ಬಡ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕ ವಾತಾವರಣ ಸೃಷ್ಟಿಸುವ ಅಗತ್ಯವಿದೆ. ಇಂಥ ಸೌಲಭ್ಯಗಳ ಮೂಲಕ ನಮ್ಮ ಭಾಗದ ಮಕ್ಕಳ ಗುಣಮಟ್ಟದ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ. ಇದಲ್ಲದೇ ಸರ್ಕಾರಿ ಶಾಲಾ ಕಾಲೇಜುಗಳನ್ನು ಉನ್ನತ ದರ್ಜೆಗೆ ಕೊಂಡೊಯ್ಯಲು ಬೇಕಾದ ಎಲ್ಲ ಸಹಕಾರ ನೀಡಲಾಗುವದು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪಾಂಡು ಸಾಹುಕಾರ ದೊಡ್ಡಮನಿ, ಪ್ರಾಚಾರ್ಯ ಗಂಗನಳ್ಳಿ, ನಗರಾಭಿವೃದ್ಧಿ ಪ್ರಾ ಧಿಕಾರದ ಸದಸ್ಯ ವಿಕ್ರಮ್ ಗಾಯಕವಾಡ, ಲಕ್ಷ್ಮಣ ಜಾಧವ, ಚಂದ್ರು ಚೌಧರಿ, ರಾಮನಗೌಡ ಪಾಟೀಲ ಯತ್ನಾಳ, ಛಾಯಾ ಮಶಿಯವರ, ಪ್ರಕಾಶ ಚವ್ಹಾಣ, ರಾಜಶೇಖರ ಭಜಂತ್ರಿ, ನಾಗರಾಜ ಮುಳವಾಡ ಸೇರಿದಂತೆ ಇತರರು ಇದ್ದರು.