ತೋಡುಗಳಲ್ಲಿ ಹುಲ್ಲು ತುಂಬಿದ್ದು, ಸ್ವಚ್ಛತಾ ಕಾರ್ಯಗಳು ನಡೆಯುತ್ತಿವೆ. ಆದರೆ ಚರಂಡಿಗಳಲ್ಲಿ ಒಳಚರಂಡಿ ನೀರು ಹರಿಯುತ್ತಿರುವ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕೊಟ್ಟಾರ ಚೌಕಿ ಬಳಿಯ ಸಂಕೇಶ, ಕೊಟ್ಟಾರ ಚೌಕಿ, ಅಬ್ಬಕ್ಕ ನಗರ, ದ್ವಾರಕಾ ನಗರ, ಜಪ್ಪಿನಮೊಗರಿನ ವಿವಿಧ ಭಾಗ, ಅಳಪೆ ಸಹಿತ ನಗರದ ವಿವಿಧ ಭಾಗಗಳಲ್ಲಿ ಒಳಚರಂಡಿ ನೀರು ಚರಂಡಿಯಲ್ಲೇ ಹರಿಯುತ್ತಿದೆ. ಒಳಚರಂಡಿ ನೀರು ಹರಿಯಲು ಸಮರ್ಪಕ ವ್ಯವಸ್ಥೆ ಮಾಡದೆ ಇರುವುದರಿಂದ ಸಮಸ್ಯೆಯಾಗಿದೆ.ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ಈ ಬಗ್ಗೆ ಅಧಿಕಾರಿಗಳು ಸಮರ್ಪಕವಾದ ರೂಪರೇಖೆಗಳನ್ನು ಮಾಡಲು ಹಿಂದೇಟು ಹಾಕುತ್ತಿದ್ದಾರೆ.
Advertisement
ಚರಂಡಿಗಳಿಲ್ಲದೆ ರಸ್ತೆಗಳಲ್ಲೇ ಮಳೆ ನೀರುಕೆಲವು ವರ್ಷಗಳಿಂದ ಮಳೆಗಾಲ ಆರಂಭವಾದ ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ನಿಂತು
ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಮಳೆ ನೀರು ಹರಿಯಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಮಾಡದೆ ಇರುವುದರಿಂದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ನಗರದ ಜ್ಯೋತಿ ಸರ್ಕಲ್, ಕೊಟ್ಟಾರ, ಲಾಲ್‌ಬಾಗ್, ಪಂಪ್‌ವೆಲ್ ಆಸುಪಾಸು ಸಹಿತ ನಗರದ ಪ್ರಮುಖ ಭಾಗಗಳಲ್ಲಿ ಇದೇ ಸ್ಥಿತಿಯಿದೆ. ಸಂಚಾರ ಅಸ್ತವ್ಯಸ್ತವಾದಾಗ ಸಾರ್ವಜನಿಕರು ಸ್ಥಳೀಯಾಡಳಿತವನ್ನು ದೂಷಿಸುತ್ತಾರೆ. ಆದರೆ ಮಳೆಗಾಲ
ಮುಗಿದೊಡನೆ ಯಾರೂ ಕೂಡ ಸುದ್ದಿಗೆ ಹೋಗುವುದಿಲ್ಲ. ಅಲ್ಲದೆ ಶಾಶ್ವತ ಪರಿಹಾರ ಕಂಡುಹಿಡಿಯುವ ಗೋಜಿಗೆ ಅಧಿಕಾರಿಗಳು ಹೋಗುವುದಿಲ್ಲ. ಹಾಗಾಗಿ ಪ್ರತಿ ವರ್ಷ ಸಮಸ್ಯೆ ಉಂಟಾಗುತ್ತದೆ.
ಕಳೆದ ಬಾರಿ ಕೃತಕ ನೆರೆಯಿಂದ ಉಂಟಾದ ಹಾನಿಗಳ ಪರಿಹಾರಕ್ಕಾಗಿ 40ರಿಂದ 50 ಕೋಟಿ ರೂ.ವರೆಗಿನ ಪ್ರಸ್ತಾವನೆ ಸಲ್ಲಿಸಲಾಗಿತ್ತು. ತುರ್ತು ಪರಿಹಾರ 1 ಕೋಟಿ ರೂ. ಸೇರಿದಂತೆ 8.48 ಲಕ್ಷ ರೂ. ಬಿಡುಗಡೆಯಾಗಿದೆ. ಕೇಂದ್ರದಿಂದ 6 ಕೋಟಿ ರೂ., ರಾಜ್ಯ ಸರಕಾರದಿಂದ 2 ಕೋ. ರೂ. ಬಿಡುಗಡೆಯಾಗಿತ್ತು. ತಾಂತ್ರಿಕ ಕಾರಣಗಳಿಂದ ಹಣ ಬಿಡುಗಡೆ ವಿಳಂಬವಾಗಿತ್ತು. ಬಿಡುಗಡೆಯಾದ
ಬಳಿಕ ಕಾಮಗಾರಿಗಳು ಆರಂಭಿಸಲಾಗಿತ್ತು. ಆದಾದ ಕೆಲವೇ ದಿನಗಳಲ್ಲಿ ನೀತಿ ಸಂಹಿತೆ ಅಡ್ಡಿಯಾಗಿ ಸಂಪೂರ್ಣ ಕಾಮಗಾರಿ ಆಗಿಲ್ಲ. ಇನ್ನೂ 15 ದಿನಗಳೊಳಗೆ ಹಾನಿಗೊಳಗಾದ ಭಾಗಗಳ ಸಂಪೂರ್ಣ ಕಾಮಗಾರಿ ನಡೆಯಲಿದೆ. ಈ ಬಾರಿ ಮಳೆಗಾಲವನ್ನು ಎದುರಿಸಲು ಸಕಲ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜಕಾಲುವೆ, ಚರಂಡಿ ಹೂಳೆತ್ತುವ ಕೆಲಸ ಈಗಾಗಲೇ ಭಾಗಶಃ ಮುಗಿದಿದೆ.
– ವೇದವ್ಯಾಸ್ ಕಾಮತ್, ಶಾಸಕ - ಪ್ರಜ್ಞಾ ಶೆಟ್ಟಿ