ಶ್ರೀನಿವಾಸಪುರ: ತೀವ್ರ ತರವಾದ ಪರ ವಿರೋಧ, ಮಾತಿನ ಚಕಮಕಿಗಳ ನಡುವೆ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವ ಜೊತೆಯಲ್ಲಿ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಅಗತ್ಯವಿರುವ ಕೆಲಸಗಳನ್ನು ಹಮ್ಮಿಕೊಳ್ಳಲು ಸರ್ವ ಸದಸ್ಯರು ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ತಾಲೂಕಿನ ಚಲ್ದಿಗಾನಹಳ್ಳಿ ಗ್ರಾಪಂ ಅಧ್ಯೆಕ್ಷೆ ರವಣಮ್ಮ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಹಮ್ಮಿಕೊಳ್ಳಲಾಗಿತ್ತು. ಹಿಂದಿನ ಅವಧಿಯಲ್ಲಿ ಗ್ರಾಮಗಳಲ್ಲಿ ಹಮ್ಮಿಕೊಂಡ ಕಾಮಗಾರಿಗಳ ಬಗ್ಗೆ ಪಿಡಿಒ ವಿವರಣೆ ನೀಡುತ್ತಿದ್ದಂತೆ ಕೆಲವು ಗ್ರಾಮ ಗಳಲ್ಲಿ ಯಾವುದೇ ಕೆಲಸ ಮಾಡಿಲ್ಲ, ಬಿಲ್ ಮಾತ್ರ
ಪಾಸಾಗಿದೆ. ಅನುದಾನ ದುರ್ಬಳಕೆ ಆಗಿದೆ ಎಂದು ತರಾಟೆ ತೆಗೆದುಕೊಂಡರು. ಸದಸ್ಯರಾದ ಲಕ್ಷ್ಮಣರೆಡ್ಡಿ ಹಾಗೂ ಶ್ರೀನಿವಾಸ್ ನಡುವೆ ವಾಕ್ಸಮರವೇ ನಡೆಯಿತು.
ದುರಸ್ತಿಪಡಿಸಿ: ಶುದ್ಧ ನೀರಿನ ಘಟಕ, ಕೊಳಾಯಿ, ಬೀದಿ ದೀಪಗಳು, ನೀರುಗಂಟಿಗಳು ಬೆಳಗಿನ ಜಾವ ಸರಿಯಾಗಿ ನೀರು ಹರಿಸುವುದು, ಪಾಚಿಕಟ್ಟಿ ರುವ ಶುದ್ಧ ನೀರಿನ ಘಟಕಗಳನ್ನು ಸ್ವಚ್ಛಗೊಳಿಸುವುದು ಸೇರಿ ಇತ್ಯಾದಿ ವಿಚಾರಗಳ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು.
ಕೆಟ್ಟಿರುವ ಮೋಟಾರ್‌ಗಳನ್ನು ದುರಸ್ತಿಪಡಿಸಿ ಗುಣಮಟ್ಟದ ಮೋಟಾರ್ ಖರೀದಿಸಿ ಕುಡಿವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇ ಕೆಂದು ಅಧಿಕಾರಿಗೆ ಸೂಚಿಸಿದರು. ಪ್ರಸ್ತುತ 14 ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಇರುವ 54 ಲಕ್ಷ ರೂ.ಗಳಲ್ಲಿ 14 ನೇ ಹಣಕಾಸು ಯೋಜನೆಯ 29 ಲಕ್ಷ ರೂ.ಗಳಿಗೆ ಗ್ರಾಮಗಳಲ್ಲಿ ನಡೆಸಬೇಕಾದ ಕೆಲಸಗಳಿಗೆ ಕ್ರಿಯಾಯೋಜನೆ ತಯಾರಿಸಲಾಗಿದೆ. ಉಳಿಕೆ ಇರುವ ಹಣಕ್ಕೆ ಪ್ರಸ್ತುತ ಸದಸ್ಯರು ಹೇಳಿದ ಕೆಲಸಗಳಿಗೆ ಕ್ರಿಯಾ ಯೋಜನೆ ತಯಾರು ಮಾಡಲಾಗುತ್ತದೆಂದು ಪಿಡಿಒ ಶಂಕಪರಪ್ಪ ಹೇಳಿದರು.
ಪಂಚಾಯ್ತಿಗೆ ಹೊಸ ಪೀಠೊಪಕರಣಗಳ ಖರೀದಿ ಸೇರಿದಂತೆ ಮಾ. 8, 9 ವಾರ್ಡ್ ಸಭೆಹಾಗೂ 10ರಂದು ಗ್ರಾಮಸಭೆ ನಡೆಸುವ ಬಗ್ಗೆ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ಉಪಾಧ್ಯೆಕ್ಷ ವೆಂಕಟರಾಮರೆಡ್ಡಿ, ಪಿಡಿಒ ಶಂಕರಪ್ಪ, ಎಲ್ಲಾ ಸದಸ್ಯರು ಹಾಜರಿದ್ದರು.