Advertisement

ಹಳೆಯದಕ್ಕೆ ಬೇಕು ಆದ್ಯತೆ

12:12 PM Feb 27, 2018 | |

ಬೆಂಗಳೂರು: ಹೊಸ ಯೋಜನೆಗಳ ಬದಲಿಗೆ, ಈಗಾಗಲೇ ಘೋಷಿಸಿರುವ‌ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದ್ಯತೆ, ಕುಡಿಯುವ ನೀರು ಹಾಗೂ ಘನತ್ಯಾಜ್ಯ ವಿಲೇವಾರಿಯಂತಹ ಸಮಸ್ಯೆಗಳ ಪರಿಹಾರಕ್ಕೆ ಒತ್ತು,  110 ಹಳ್ಳಿಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ, ನಗರದ ಪರಿಸರ ಹಾಗೂ ಕೆರೆಗಳ ಸಂರಕ್ಷಣೆಗೆ ಮಹತ್ವ ನೀಡಬೇಕು ಎಂಬುದು ಪಾಲಿಕೆಗೆ, ನಗರ ತಜ್ಞರು ಹಾಗೂ ವಿವಿಧ ನಾಗರಿಕ ಸಂಸ್ಥೆಗಳ ಮುಖಂಡರ ಸಲಹೆ.

Advertisement

ಪ್ರತಿ ವರ್ಷ ಪಾಲಿಕೆಯಿಂದ ಸಾವಿರಾರು ಕೋಟಿಗಳ ಬಜೆಟ್‌ ಮಂಡನೆಯಾಗುತ್ತದೆ. ಆದರೆ, ಅನುಷ್ಠಾನ ಪ್ರಮಾಣ ಮಾತ್ರ ಸುಧಾರಿಸಿಲ್ಲ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಬಜೆಟ್‌ನಲ್ಲಿ ಹೊಸ ಹಾಗೂ ಬೃಹತ್‌ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬದಲಿಗೆ, ಈಗಾಗಲೇ ಘೋಷಿಸಿರುವ ಕಾರ್ಯಕ್ರಮಗಳ ಅನುಷ್ಠಾನಗೊಳಿಸಲು ಆದ್ಯತೆ ನೀಡಬೇಕಾಗಿದೆ.

ಭವಿಷ್ಯದಲ್ಲಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದ್ದು, ನಗರದ ಜಲಮೂಲಗಳಾದ ಕೆರೆಗಳ ಸಂರಕ್ಷಣೆಯೊಂದಿಗೆ, ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕ್ರಮವಹಿಸಬೇಕಿದೆ. ಆ ನಿಟ್ಟಿನಲ್ಲಿ ಮಳೆನೀರು ಕೊಯ್ಲು ಪದ್ಧತಿಗೆ ಮಹತ್ವ ನೀಡಿ, ಒಳಚರಂಡಿ ನೀರು ಕೆರೆಗಳಿಗೆ ಸೇರದಂತೆ ಯೋಜನೆ ರೂಪಿಸಬೇಕಿದೆ ಎಂದು ತಜ್ಞರು ತಿಳಿಸಿದ್ದಾರೆ.

ನಗರದಲ್ಲಿ ರಸ್ತೆ, ಮೇಲ್ಸೇತುವೆ, ಕೆಳಸೇತುವೆಗಳ ನಿರ್ಮಾಣದ ಜತೆಜತೆಗೆ ಸಂಚಾರ ದಟ್ಟಣೆ ಹಾಗೂ ವಾಯುಮಾಲಿನ್ಯ ನಿಯಂತ್ರಣದ ಕಡೆಗೂ ಪಾಲಿಕೆ ಗಮನ ಹರಿಸಬೇಕಿದೆ. ಬಜೆಟ್‌ ಮಂಡಿಸಿದ ದಿನದಿಂದಲೇ ಯೋಜನೆಗಳ ಅನಷ್ಠಾನ ಹಾಗೂ ಮೇಲ್ವಿಚಾರಣೆ ನೋಡಿಕೊಳ್ಳಲು ಪ್ರತ್ಯೇಕ ತಜ್ಞರ ಸಮಿತಿ ರಚಿಸಲು ಸಲಹೆ ನೀಡಿದ್ದಾರೆ.

ಬಜೆಟ್‌ನಲ್ಲಿ ಪ್ರತಿ ವರ್ಷ ನೂರಾರು ಜನಪ್ರಿಯ ಯೋಜನೆಗಳು ಘೋಷಣೆಯಾಗುತ್ತಿವೆ. ಆದರೆ, ಹಣಕಾಸು ವರ್ಷ ಮುಗಿದರೂ ಅವು ಕಾರ್ಯರೂಪಕ್ಕೆ ಬರುತ್ತಿಲ್ಲ. ಹಾಗಾಗಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಿರುವಂತಹ ಯೋಜನೆಗಳಿಗೆ ಒತ್ತು ನೀಡಬೇಕಿದ್ದು, ನಗರದ ಎಲ್ಲ ವರ್ಗಗಳನ್ನು ಒಳಗೊಂಡ ಬಜೆಟ್‌ನ ಮಂಡಿಸಬೇಕಿದೆ ಎಂದು ಹೇಳಿದ್ದಾರೆ.  

Advertisement

ಪಾಲಿಕೆ ವ್ಯಾಪ್ತಿಯಲ್ಲಿ ಹಲವು ಯೋಜನೆಗಳಿಗೆ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ಸರ್ಕಾರ ನೀಡಿರುವ ಅನುದಾನ ಸದ್ಬಳಕೆ ಮಾಡಿಕೊಂಡು ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಜತೆಗೆ ಪಾಲಿಕೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಆಸ್ತಿ ತೆರಿಗೆ ಸೇರಿ ಆದಾಯ ಮೂಲಗಳ ಬಲವರ್ಧನೆಗೆ ಆದ್ಯತೆ ನೀಡಬೇಕಿದೆ. 
-ರವಿಚಂದರ್‌, ನಗರ ತಜ್ಞ  

ನಾಗರಿಕರಿಗೆ ಮೂಲ ಸೌಕರ್ಯ ಒದಗಿಸಲು ಬಿಬಿಎಂಪಿ ಅಗತ್ಯ ಕ್ರಮಕೈಗೊಳ್ಳಬೇಕು. ಉತ್ತಮ ರಸ್ತೆಗಳ ನಿರ್ಮಾಣದೊಂದಿಗೆ ಸಂಚಾರ ದಟ್ಟಣೆ ನಿಯಂಣತ್ರಣಕ್ಕೂ ಕ್ರಮವಹಿಸಬೇಕು. ನಗರದ ಹಲವೆಡೆ ಎಸ್ಕಲೇಟರ್‌ ಇಲ್ಲದೆ ನಿರ್ಮಿಸಿರುವ ಸ್ಕೈವಾಕ್‌ಗಳು ಅನುಪಯುಕ್ತವಾಗಿದ್ದು, ಜನರಿಗೆ ಉಪಯೋಗವಿಲ್ಲದ ಯೋಜನೆಗಳ ಕೈಬಿಡಬೇಕು. 
-ಶ್ರೀಹರಿ, ಸಂಚಾರ ತಜ್ಞ  

ಪ್ರತಿ ವಾರ್ಡ್‌ನಲ್ಲಿ ಮಕ್ಕಳಿಗಾಗಿ 3-4 ಡೇ ಕೇರ್‌ ಆರಂಭಿಸಿ ಪೌಷ್ಠಿಕಾಂಶಯುತ ಆಹಾರ ನೀಡಬೇಕಿದೆ. ನಗರವನ್ನು ಕೊಳೆಗೇರಿ ಮುಕ್ತಗೊಳಿಸಲು ಬಡವರಿಗೆ ಕೈಗೆಟಕುವ ದರದಲ್ಲಿ ಮನೆ ನೀಡಬೇಕು. ಕುಡಿಯುವ ನೀರಿನ ಸಮಸ್ಯೆ, ಮಳೆನೀರು ಕೊಯ್ಲು ಸೇರಿ ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ಇದ್ದರೆ ಒಳಿತು. 
-ಕಾತ್ಯಾಯಿನಿ ಚಾಮರಾಜ್‌, ಸಿವಿಕ್‌ ಸಂಸ್ಥೆ ಮುಖ್ಯಸ್ಥೆ 

ಜನಸಾಮಾನ್ಯರ ಮೇಲೆ ಯಾವುದೇ ತೆರಿಗೆ ಹೊರ ಇಲ್ಲದ ಹಾಗೂ ನಗರದ ಪರಿಸರ, ಕೆರೆಗಳ ಅಭಿವೃದ್ಧಿಗೆ ಪೂರಕ ಬಜೆಟ್‌ ಮಂಡನೆಯಾಗಬೇಕು. ಜನರ ಅನುಕೂಲಕ್ಕಾಗಿ ಪ್ರತಿ ವಾರ್ಡ್‌ಗೆ ಒಂದು ಆಸ್ಪತ್ರೆ ನಿರ್ಮಿಸಲು ಯೋಜನೆ ರೂಪಿಸಬೇಕಿದ್ದು, ನಗರದಲ್ಲಿ ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಪ್ರೋತ್ಸಾಹ ಅಗತ್ಯವಿದೆ. 
-ವಿ.ಎನ್‌.ರಾಜಶೇಖರ್‌, ಬೆಂಗಳೂರು ಉಳಿಸಿ ಸಮಿತಿ ಸಹ ಸಂಚಾಲಕ

* ವೆಂ.ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next