ಮೈಸೂರು: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಮಯ ಪಾಲನೆಗೂ ಹೆಚ್ಚಿನ ಆದ್ಯತೆ ನೀಡುವ ಮೂಲಕ ಉತ್ತಮ ಸಮಯ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು ಎಂದು ಮೈಸೂರು ವಿವಿ ಭೂಗರ್ಭಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪೊ›.ಎ.ಬಾಲಸುಬ್ರಹ್ಮಣಿಯನ್ ಹೇಳಿದರು. ನಗರದ ಮಹಾರಾಣಿ ಮಹಿಳಾ ವಿಜಾnನ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ನೂತನ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಹಾಗೂ ಮಾದಕ ವಸ್ತುಗಳ ಬಳಕೆ ಮತ್ತು ರ್ಯಾಗಿಂಗ್ ಪಿಡುಗು ತಡೆಗಟ್ಟಲು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಯಪಾಲನೆ ಮುಖ್ಯ: ಬಹುತೇಕ ಹೊರ ದೇಶಗಳಲ್ಲಿ ಭಾರತೀಯ ಸಮಯ ಪದ್ಧತಿ ಸರಿಯಿಲ್ಲ ಎಂಬ ವಾದವಿದ್ದು, ಭಾರತೀಯರಲ್ಲಿ ಸಮಯ ಪ್ರಜ್ಞೆ ತೀರಾ ಕಡಿಮೆ ಎಂಬ ಮಾತು ಸಹ ಕೇಳಿ ಬರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ನಿರ್ಧರಿಸಬಲ್ಲ ಶಿಕ್ಷಣಕ್ಕೆ ನೀಡುವಷ್ಟೇ ಮಹತ್ವ ಸಮಯ ಪರಿಪಾಲನೆಗೂ ನೀಡಬೇಕಿದ್ದು, ಆ ಮೂಲಕ ಭಾರತೀಯರಿಗೆ ಸಮಯಪ್ರಜ್ಞೆ ಇಲ್ಲವೆಂಬ ನಿಂದನೆಯನ್ನು ಯುವ ಪೀಳಿಗೆ ಹೋಗಲಾಡಿಸಬೇಕು ಎಂದು ಸಲಹೆ ನೀಡಿದರು.
ಸಮಸ್ಯೆಗಳನ್ನು ತಡೆಯಿರಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಳಕಳಿ ಮತ್ತು ಸಾಮಾಜಿಕ ಸೇವೆ ಮನೋಭಾವ ಕಡಿಮೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾವಂತರು ಸಾಮಾಜಿಕ ಜವಾಬ್ದಾರಿ ಅರಿತು ಮುನ್ನಡೆಯಬೇಕಿದೆ. ಇದರ ಜತೆಗೆ ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಂಡು, ಆರೋಗ್ಯದ ಬಗ್ಗೆಯೂ ಹೆಚ್ಚಿನ ಆದ್ಯತೆ ನೀಡಿದರೆ ಮುಂದಿನ ದಿನಗಳಲ್ಲಿ ಎದುರಾಗುವ ಹಲವು ಸಮಸ್ಯೆಗಳನ್ನು ತಡೆಯಬಹುದು ಎಂದು ತಿಳಿಸಿದರು.
ರ್ಯಾಗಿಂಗ್ ನಿಲ್ಲಲಿ:
ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಮೊಬೈಲ್, ಇಂಟರ್ನೆಟ್ ಹಾಗೂ ಸಾಮಾಜಿಕ ಜಾಲತಾಣಗಳ ದಾಸರಾಗುತ್ತಿದ್ದು, ಇದರಿಂದ ದೂರವಿರುವ ಮೂಲಕ ಇವುಗಳು ನಮ್ಮನ್ನು ಆಕ್ರಮಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಕಾಲೇಜುಗಳಲ್ಲಿ ನಡೆಯುವ ರ್ಯಾಗಿಂಗ್ ಪಿಡುಗನ್ನು ತಡೆಗಟ್ಟಲು ಸಮಿತಿಯೊಂದು ರಚನೆಯಾಗಿದ್ದು ಅದರ ನಿರ್ದೇಶನದಂತೆ ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಿಸುತ್ತಿದೆ. ಹೀಗಾಗಿ ರ್ಯಾಗಿಂಗ್ ಸಮಸ್ಯೆ ಎದುರಿಸುವ ವಿದ್ಯಾರ್ಥಿಗಳು ಸ್ಥಳೀಯ ಪೊಲೀಸ್ ಆಯುಕ್ತರು ಅಥವಾ ಜಿಲ್ಲಾ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಿದರೆ ಸೂಕ್ತ ಪರಿಹಾರ ಸಿಗಲಿದೆ ಎಂದು ಮಾಹಿತಿ ನೀಡಿದರು.
ಮಹಾರಾಣಿ ಮಹಿಳಾ ವಿಜಾನ ಕಾಲೇಜು ಪ್ರಾಂಶುಪಾಲ ಡಾ.ಎ.ನಾಗರಾಜು, ಸಾಂಸ್ಕೃತಿಕ ಸಮಿತಿ ಅಧ್ಯಾಪಕ ಕಾರ್ಯದರ್ಶಿ ಪೊ›.ಕೆ.ಸಿದ್ದರಾಜು, ಹಿರಿಯ ಪ್ರಾಧ್ಯಾಪಕಿ ರಾಜೇಶ್ವರಿ ಹಾಜರಿದ್ದರು.