ಬೆಂಗಳೂರು: ರಾಜ್ಯದ ಜಲಾಶಯಗಳಲ್ಲಿನ ಹೂಳು ತೆರವು ಕಾರ್ಯಕ್ಕೆ ಆದ್ಯತೆ ನೀಡಬೇಕು. ಈ ಸಂಬಂಧ ಕಾರ್ಯಕ್ರಮ ರೂಪಿಸಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದಲ್ಲಿ ಶೇಖರಣೆಯಾಗಿರುವ ಹೂಳಿನಿಂದಾಗಿ 33 ಟಿಎಂಸಿಯಷ್ಟು ನೀರಿನ ಸಂಗ್ರಹ ಸಾಮರ್ಥಯ ಕಡಿಮೆಯಾಗಿದೆ.
ಸಾಮರ್ಥಯದಷ್ಟು ನೀರು ಸಂಗ್ರಹಿಸಲು ಅನುಕೂಲವಾಗುವಂತೆ “ಫ್ಲಡ್ ಫ್ಲೋ ಕೆನಾಲ್’ ಮೂಲಕ ನೀರನ್ನು ನವಲಿ ಗ್ರಾಮದ ಸಮೀಪ ಸಮತೋಲನಾ ಜಲಾಶಯ ನಿರ್ಮಿಸಿ ನೀರು ಶೇಖರಿಸಿ ಬಳಸಲು ಯೋಜಿಸಲಾಗಿದೆ. ಹೂಳು ತೆರವು ಕಾರ್ಯಕ್ಕೆ ಒತ್ತು ನೀಡಿ ಸೂಕ್ತ ಕಾರ್ಯಕ್ರಮ ರೂಪಿಸಬೇಕು. ಹಾಗೆಯೇ ಮಹದಾಯಿ ನೀರು ಬಳಕೆಗೆ ಸಂಬಂಧಪಟ್ಟಂತೆ ಮಹದಾಯಿ ನ್ಯಾಯಾಧಿಕರಣದ ವ್ಯಾಪ್ತಿಯಲ್ಲಿ ಬರುವ ಕಾನೂನು ತೊಡಕುಗಳ ನಿವಾರಣೆಗೂ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
11.46 ಲಕ್ಷ ಹೆಕ್ಟೇರ್‌ಗೆ ನೀರು ಹರಿಸಬೇಕಿದೆ: ರಾಜ್ಯದಲ್ಲಿನ ಎಲ್ಲ ನೀರಾವರಿ ಯೋಜನೆಗಳಿಂದ ಒಟ್ಟು 66.66 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇನ್ನೂ 11.46 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಶುರುವಾಗಿದ್ದು, ನೈಸರ್ಗಿಕ ಮೂಲಗಳಿಂದ ಕುಡಿಯುವ ನೀರನ್ನು ಒದಗಿಸುವ ಜಲಧಾರೆ ಯೋಜನೆಯೂ ಜಾರಿಯಾಗಿದೆ ಎಂದು ತಿಳಿಸಿದರು.
ಮೇಕೆದಾಟು ಯೋಜನೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಬೆಂಗಳೂರು ನಗರಕ್ಕೆ ಭವಿಷ್ಯದಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪ್ರಮುಖವೆನಿಸಲಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆಯ ಮೊದಲನೇ ಹಂತದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಮುಂಗಾರಿನಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡುವ ಕಾರ್ಯಕ್ಕೆ ವೇಗ ನೀಡಬೇಕೆಂದು ಸೂಚನೆ ನೀಡಿದರು.
ಅಧಿಕಾರಿಗಳು ಅಂದಾಜು ವೆಚ್ಚ ಸಿದ್ಧಪಡಿಸುವ ಸಂದರ್ಭದಲ್ಲೇ ನೀರಿನ ಸದ್ಬಳಕೆಗೆ ಒತ್ತು ನೀಡಬೇಕು. ಕೆ.ಸಿ.ವ್ಯಾಲಿ ಯೋಜನೆಯಿಂದ ಕೋಲಾರ ಭಾಗದ ರೈತರಿಗೆ ಅನುಕೂಲವಾಗಲಿದ್ದು, ಅಂತರ್ಜಲ ಮಟ್ಟ ಹೆಚ್ಚಾಗಿದೆ. ಕೃಷಿ ಬಳಕೆಗೆ ನೀರು ಯೋಗ್ಯವಾಗಿದ್ದು, ನೀರಿನ ಪುನರ್‌ಬಳಕೆಯಂತಹ ಯೋಜನೆಗಳಿಗೆ ಒತ್ತು ನೀಡಬೇಕು ಎಂದು ತಿಳಿಸಿದರು. ಜಲಸಂಪನ್ಮೂಲ ಇಲಾಖೆಗೆ ಎರಡು ಬಜೆಟ್‌ನಲ್ಲಿ ಒಟ್ಟು 37 ಸಾವಿರ ಕೋಟಿ ರೂ.ಹಂಚಿಕೆ ಮಾಡಲಾಗಿದೆ. ಈ ಅನುದಾನವನ್ನು ಸದ್ಬಳಕೆ ಮಾಡಬೇಕಾದ ಜವಾಬ್ದಾರಿ ಇಲಾಖೆ ಅಧಿಕಾರಿಗಳ ಮೇಲಿದೆ ಎಂದು ಹೇಳಿದರು.
ಕುಡಿಯುವ ನೀರು, ಕೃಷಿ ನೀರಿಗೆ ಆದ್ಯತೆ: ನಿರಂತರ ಬರ ಹಾಗೂ ಮಳೆಯ ಅಭಾವದಿಂದಾಗಿ ರಾಜ್ಯದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹಂತ ಹಂತವಾಗಿ ಕುಸಿಯುತ್ತಿದೆ. ಇನ್ನೊಂದೆಡೆ ಕುಡಿಯುವ ನೀರಿಗೆ ಬೇಡಿಕೆಯೂ ಹೆಚ್ಚಾಗಿದೆ. ಪ್ರತಿ ಗ್ರಾಮ, ನಗರಕ್ಕೆ ಕುಡಿಯುವ ನೀರು ಪೂರೈಕೆ ಹಾಗೂ ಕೃಷಿಗೆ ನೀರು ಒದಗಿಸುವುದು ಪ್ರಥಮ ಆದ್ಯತೆಯಾಗಬೇಕು. ಕುಡಿಯುವ ನೀರು ಹೊರತುಪಡಿಸಿ ಉಳಿಕೆ ನೀರು ದುರ್ಬಳಕೆಯಾಗದೆ ಕಡಿಮೆ ನೀರಿನಲ್ಲಿ ಆಯ್ದ ಬೆಳೆ ಬೆಳೆಯುವ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು ಎಂದು ನಿರ್ದೇಶನ ನೀಡಿದರು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ರಾಜ್ಯದ ಒಟ್ಟಾರೆ ನೀರಾವರಿ ಸಾಮರ್ಥಯವನ್ನು ತಲುಪಲು ಪೂರಕವಾಗಿ ನೀಲನಕ್ಷೆ ರೂಪಿಸಬೇಕು. ಆ ನಿಟ್ಟಿನಲ್ಲಿ ಗುರಿ ತಲುಪಲು ಕಾರ್ಯಪ್ರವೃತ್ತರಾಗಬೇಕು. ಯೋಜನೆಗಳನ್ನು ರೂಪಿಸುವಾಗ ದೂರದೃಷ್ಟಿ ಇರಬೇಕು. ಜಲಸಂಪನ್ಮೂಲ ಇಲಾಖೆ ಅಧೀನದಲ್ಲಿ ಬರುವ ಪ್ರತಿ ನಿಗಮದ ವ್ಯವಸ್ಥೆಯನ್ನೂ ಮೌಲ್ಯಮಾಪನ ಮಾಡಿ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ಕೃಷಿಯಿಂದ ಉದ್ಯೋಗ ಸೃಷ್ಟಿ ಹಾಗೂ ಕೃಷಿ ಉತ್ಪನ್ನ ವೃದ್ಧಿಯಾಗಿ ರಾಜ್ಯದ ಆರ್ಥಿಕ ಶಕ್ತಿಯೂ ಹೆಚ್ಚಾಗಲಿದೆ ಎಂದು ಹೇಳಿದರು.
ಸಚಿವರಾದ ಎಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು, ಜಲಸಂಪನ್ಮೂಲ ಇಲಾಖೆ ಸಂಸದೀಯ ಕಾರ್ಯದರ್ಶಿ ಗೋಪಾಲಸ್ವಾಮಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಎಸ್.ಸುಬ್ರಮಣ್ಯಂ ಪಾಲ್ಗೊಂಡಿದ್ದರು.