ಹರಿಹರ: ಪ್ರಾಥಮಿಕ ಶಿಕ್ಷಣದಲ್ಲಿಯೇ ಮಾತೃಭಾಷೆಗೆ ಆದ್ಯತೆ ನೀಡಿದರೆ ಮಕ್ಕಳು ಭವಿಷ್ಯದಲ್ಲಿ ಇತರೆ ಭಾಷೆಗಳನ್ನು ಅರಗಿಸಿಕೊಳ್ಳುವುದು ಸುಲಭವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿ ಕಾರಿ ಯು.ಬಸವರಾಜಪ್ಪ ತಿಳಿಸಿದರು.
ನಗರದ ಗುರುಭವನದಲ್ಲಿ ಕಸಾಪ ತಾಲೂಕು ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಾವಣಗೆರೆ ಸಂಯುಕ್ತಾಶ್ರಯದಲ್ಲಿ ನಡೆದ ದತ್ತಿ ಉಪನ್ಯಾಸ ಮತ್ತು ಜಿಲ್ಲಾಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಮಾತೃ ಭಾಷೆಯನ್ನು ಸಮರ್ಪಕವಾಗಿ ಕಲಿತರೆ ಆ ತಳಹದಿಯ ಮೇಲೆ ಇತರೆ ಭಾಷೆ ಕಲಿಯಬಹುದು ಅಲ್ಲದೆ ಇದರಿಂದ ಪಾಲಕರೂ ಸಹ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ನೆರವಾಗಲು ಅನುಕೂಲವಾಗುತ್ತದೆ ಎಂದರು.
ಮಾತೃ ಭಾಷೆಯಲ್ಲಿ ಕಲಿತ ಮಗು ವಿಷಯ ಸೂಕ್ಷ್ಮತೆ ಬೆಳೆಸಿಕೊಂಡು ಸುಲಭವಾಗಿ ಅರ್ಥೈಸಿಕೊಳ್ಳುವ ಶಕ್ತಿ ಹೊಂದಿರುತ್ತದೆ. ಇತ್ತೀಚೆಗೆ ಆಂಗ್ಲಭಾಷೆಯ ವ್ಯಾಮೋಹ ಹೆಚ್ಚಾಗುತ್ತಿದೆ. ಅನ್ಯ ಭಾಷೆ ಕಲಿಯುವುದು ತಪ್ಪಲ್ಲವಾದರೂ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಾದರೆ ಮಕ್ಕಳಿಗೆ ಭದ್ರ ಬುನಾದಿ ಹಾಕಿದಂತಾಗುತ್ತದೆ. ಮಗು ಬೆಳೆಯುತ್ತಾ ಎಲ್ಲಾ ಭಾಷೆಗಳನ್ನು ಕಲಿಯುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಹೇಳಿದರು.
ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷಾ ಬೋಧನೆ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಸಂತೇಬೆನ್ನೂರಿನ ಕವಿ, ಶಿಕ್ಷಕ ಪೈಜ್ನಾಟ್ರಾಜ್, ಕನ್ನಡ ಭಾಷಾ ಬೋಧನೆ ಮಾಡುವ ಶಿಕ್ಷಕರು ಭಾಷೆಯಲ್ಲಿ ಪ್ರಾವೀಣ್ಯತೆ, ಹೊಸತನ ಹೊಂದಿರಬೇಕು. ಪದಗಳ ಅರ್ಥ, ವ್ಯಾಕರಣವನ್ನು ಸರಳೀಕರಿಸಿ ಬೋ ಧಿಸಬೇಕು. ಪಾಠಗಳನ್ನು ಆಕರ್ಷಕವಾಗಿ ನಟಿಸುತ್ತಾ, ಪದ್ಯಗಳನ್ನು ರಾಗವಾಗಿ ಹಾಡಿ ಮಕ್ಕಳ ಮನಸ್ಸು ಗೆಲ್ಲಬೇಕು. ಕನ್ನಡ ಶಿಕ್ಷಕರ ತಮ್ಮ ಮೇಲಿನ ಜವಾಬ್ದಾರಿ ಅರಿತು, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ಮಕ್ಕಳ ಭವಿಷ್ಯಕ್ಕೆ ಉತ್ತಮ ತಳಹದಿ ಹಾಕಿದಂತಾಗುತ್ತದೆ ಎಂದರು.
ಜಿಲ್ಲಾ ಮಟ್ಟದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಚ್.ಎ. ಭಿಕ್ಷಾವರ್ತಿ ಮಠ ಮಾತನಾಡಿ, ಕೆಲವರು ಉತ್ತಮ ಕವನ ರಚಿಸಿದ್ದರೂ ವಾಚಿಸುವ ಶೈಲಿಯಲ್ಲಿ ವಿಫಲರಾಗುತ್ತಾರೆ. ಕವಿಗಳು ತಾವು ಬರೆದದ್ದೆ ಸರಿ ಎಂಬ ಭಾವನೆ ಬಿಡಬೇಕು. ಸ್ವಯಂ ವಿಮರ್ಶೆ ಮಾಡಿಕೊಂಡು ತಪ್ಪುಗಳು ಸರಿಪಡಿಸಬೇಕು. ಉತ್ತಮ ಪುಸ್ತಕಗಳ ಓದು, ಸತತ ಅಧ್ಯಯನದಿಂದ ಕವನಕ್ಕೆ ಉತ್ತಮ ವಿಷಯ ವಸ್ತು ಸಿಗುತ್ತದೆ ಎಂಬುದನ್ನು ಮರೆಯಬಾರದು ಎಂದರು.
ಕವಿಗೋಷ್ಠಿಯಲ್ಲಿ 28 ಕವಿಗಳು ಸ್ವರಚಿತ ಕವನ ವಾಚಿಸಿದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ದತ್ತಿ ಮತ್ತು ಘಡಮಾ ಗಜಬರ್ ಸಾಬ್ ನಾಯ್ಕ ಸ್ಮರಣಾರ್ಥ ದತ್ತಿ ದಾನಿಗಳಾದ ಕ.ರಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಎಚ್.
ಚಂದ್ರಪ್ಪ ಮತ್ತು ಹಾಜಿ ಹಸನ್ ಸಾಬ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಜನಪದ ಕಲಾವಿದ ಪರಮೇಶ್ವರ ಕತ್ತಿಗೆ ಸಂತ ಶಿಶುನಾಳ ಷರೀಫರ ತತ್ವಪದ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಕಸಾಪ ತಾಲೂಕು ಘಟಕದ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ, ಗೌರವ ಸಂಚಾಲಕ ಎ.ಡಿ.ಕೊಟ್ರಬಸಪ್ಪ, ಸಂಚಾಲಕ ಸುಬ್ರಹ್ಮಣ್ಯ ನಾಡಿಗೇರ್, ಎಸ್.ಎಚ್.ಪ್ಯಾಟಿ, ಕೊಟ್ರಯ್ಯ ಕುಲಕರ್ಣಿ, ಶರಣ್ ಕುಮಾರ್ ಹೆಗಡೆ, ಸೀತಾನಾರಾಯಣ, ಮಂಜುನಾಥ್, ಎಚ್.ಎಂ.ಸದಾನಂದ, ಮಂಜಪ್ಪ ಬಿದರಿ ಮತ್ತಿತರರಿದ್ದರು.