Advertisement

ಶಿಕ್ಷಕರ ವರ್ಗಾವಣೆಗೆ ಮುಹೂರ್ತ

11:36 AM Jun 03, 2019 | mahesh |

ಬೆಂಗಳೂರು: ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ರಾಜ್ಯ ಸರಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಮುಹೂರ್ತ ನಿಗದಿ ಮಾಡಿ ಮಾರ್ಗಸೂಚಿ, ವೇಳಾಪಟ್ಟಿ ಬಿಡುಗಡೆ ಮಾಡಿದೆ. ಕಳೆದ ಬಾರಿ 72 ಸಾವಿರ ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಿ, ಕೌನ್ಸೆಲಿಂಗ್‌ಗೆ ಕಾದಿದ್ದರು. ಕರ್ನಾಟಕ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ ತಿದ್ದುಪಡಿ ಮತ್ತು ವಿಧಾನಸಭೆ ಚುನಾವಣೆ ಸೇರಿದಂತೆ ಹಲವು ಕಾರಣಗಳಿಂದಾಗಿ ಮೂರ್‍ನಾಲ್ಕು ವೇಳಾಪಟ್ಟಿಗಳ ಅನಂತರವೂ ವರ್ಗಾವಣೆ ಪ್ರಕ್ರಿಯೆ ನಡೆದಿರಲಿಲ್ಲ. ಈಗ ಜೂ.12ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸ್ವೀಕರಿಸಲಾಗುತ್ತದೆ ಎಂದು ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಇದಕ್ಕಾಗಿ ಶಿಕ್ಷಕರ ಮಾಹಿತಿ ತಂತ್ರಾಂಶ (ಟಿಡಿಎಸ್‌)ದಲ್ಲಿ ಅಗತ್ಯ ವಿವರಗಳನ್ನು ಅಪ್‌ಡೇಟ್‌ ಮಾಡಲು ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Advertisement

ಜೂ.12ರಿಂದ ಅರ್ಜಿ ಸಲ್ಲಿಕೆ
ಜೂ.12ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅರ್ಜಿ ಗಳೊಂದಿಗೆ ಸಂಬಂಧಪಟ್ಟ ದಾಖಲೆಗಳನ್ನು ಇಲಾಖೆಯ ಶಿಕ್ಷಕರ ವರ್ಗಾವಣೆ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆ ವೆಬ್‌ಸೈಟ್‌ chooleducation.kar.nic.in/ನೋಡುವಂತೆ ಶಿಕ್ಷಣ ಇಲಾಖೆ ತಿಳಿಸಿದೆ.

ಕಳೆದ ವರ್ಷದವರಿಗೂ ಅವಕಾಶ
2018ರ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸ್ಥಳ ಆಯ್ಕೆ ಮಾಡಿಕೊಂಡಿರುವ ಶಿಕ್ಷಕರಿಗೆ ಪ್ರಸ್ತುತ ವರ್ಗಾವಣೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕಳೆದ ಬಾರಿ ಅರ್ಜಿ ಸಲ್ಲಿಸಿದ್ದ ಸುಮಾರು 72 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಜಿಗಳನ್ನು ಹೊಸ ನಿಯಮದಂತೆ ಪರಿಗಣಿಸುವುದರಿಂದ ತಿದ್ದುಪಡಿ ಮಾಡಿಕೊಳ್ಳುವಂತೆ ತಿಳಿಸಿದೆ.

ವರ್ಗಾವಣೆಯಲ್ಲಿ “ಜ್ಯೇಷ್ಠತಾ ಘಟಕ’ದ ಆಧಾರದಲ್ಲಿ ವರ್ಗಾವಣೆ ಮಾಡಲಾಗುತ್ತದೆ. ಹೆಚ್ಚುವರಿ ಶಿಕ್ಷಕರು, ಕೋರಿಕೆ ವರ್ಗಾವಣೆ, ಕಡ್ಡಾಯ ವರ್ಗಾವಣೆಗಳನ್ನು ಶೇ.5ರಷ್ಟು ಮತ್ತು ಶೇ.3ರಷ್ಟು ಅಂತರ ಘಟಕ ಕೋರಿಕೆ ವರ್ಗಾವಣೆ ಮಾಡಲಾಗುತ್ತದೆ. ಒಂದೇ ವಲಯದಲ್ಲಿ ಕನಿಷ್ಠ 10 ವರ್ಷಗಳ ನಿರಂತರ ಸೇವೆಯನ್ನು ಗರಿಷ್ಠ ಮತ್ತು ಮೂರು ವರ್ಷಗಳ ಸೇವೆಯನ್ನು ಕನಿಷ್ಠ ಸೇವೆ ಎಂದು ಪರಿಗಣಿಸಲಾಗಿದೆ.

ಕೋರಿಕೆ ಮತ್ತು ಪರಸ್ಪರ ವರ್ಗಾವಣೆ:
ಜೂ.12ರಿಂದ ಕೋರಿಕೆ ವರ್ಗಾವಣೆ ಅರ್ಜಿ ಆಹ್ವಾನ. ಜೂ.12-19ರ ವರೆಗೆ ಅರ್ಜಿ ಸಲ್ಲಿಕೆ ಮತ್ತು ಆನ್‌ಲೈನ್‌ನಲ್ಲಿ ಸ್ವೀಕೃತಿ. ಜೂ.20ರಿಂದ ಆನ್‌ಲೈನ್‌ ಅರ್ಜಿಯನ್ನು ಬಿಇಒಗಳಿಗೆ ಸಲ್ಲಿಸುವ ಅವಧಿ. ಜೂ.20ರಿಂದ ಅರ್ಜಿಗಳ ಪರಿಶೀಲನೆ ಮತ್ತು ಅನುಮೋದನೆ. ಜೂ.22ರಿಂದ ಅರ್ಜಿಗಳ ಪರಿಶೀಲನೆ ಅನಂತರ ಬಿಇಒಗಳಿಂದ ಪ್ರಾಧಿಕಾರಕ್ಕೆ ಅರ್ಜಿಗಳ ಸಲ್ಲಿಕೆ.

Advertisement

ವರ್ಗಾವಣೆಗೆ ಜೂ.20ರ ಗಡುವು
ಬೆಂಗಳೂರು: ರಾಜ್ಯ ಸರಕಾರಿ ನೌಕರರ ವರ್ಗಾವಣೆ ಕುರಿತು ರಾಜ್ಯ ಸರಕಾರ ಆದೇಶ ಹೊರಡಿ ಸಿದ್ದು, ಶೇ.2 ವರ್ಗಾವಣೆಗೆ ಅವಕಾಶ ನೀಡಲಾಗಿದೆ. ಜೂ.30ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಸರಕಾರಿ ನೌಕರರು ಇಲಾಖೆಯ ಕಾರ್ಯಚಟುವಟಿಕೆಗಳಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಲು ಅನುಕೂಲವಾಗುವಂತೆ 2019-20ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಯ ಪ್ರಸ್ತಾವನೆ ಹಿನ್ನೆಲೆಯಲ್ಲಿ 2019-20ನೇ ಸಾಲಿನಲ್ಲಿ ಸಂಬಂಧಿತ ವೃಂದದಲ್ಲಿ ಕಾರ್ಯನಿರತ ವೃಂದ ಬಲದ ಶೇ.2ಕ್ಕೆ ಸೀಮಿತಗೊಳಿಸಿ ವರ್ಗಾವಣೆ ಮಾಡಲಾಗುವುದು. 2019-20ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಗಳನ್ನು ಜೂ.30ರೊಳಗೆ ಪೂರ್ಣಗೊಳಿಸಬೇಕು ಎಂದು ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯ ಅಧೀನ ಕಾರ್ಯದರ್ಶಿ ಶನಿವಾರದ ಆದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next