ಚನ್ನಪಟ್ಟಣ: ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಇದಕ್ಕಾಗಿ ಕಂದಾಯ ವಸೂಲಿ ಮಾಡುವುದು ಮುಖ್ಯವಾಗಿದ್ದು, ತೆರಿಗೆ ವಸೂಲಿ ಮಾಡಬೇಕು. ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಕಾರ್ಯಕ್ಕೆ ಪಿಡಿಒ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳು ಮುಂದಾಗಬೇಕಿದೆ ಎಂದು ಜಿಪಂ ಸಿಇಒ ಮುಲ್ಲೆ„ ಮುಹಿಲನ್
ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷ ನಾಗರಾಜು ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿ, ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಹೀಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಯೋಜನೆಗಳನ್ನು ರೂಪಿಸಿ ಸಹಕರಿಸಬೇಕಿದೆ. ಯೋಜನೆಗಳನ್ನು ಕಾನೂನು ಕ್ರಮದ ಮೂಲಕ ಜಾರಿಗೊಳಿಸಲು, ಗ್ರಾಪಂ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಇದರಲ್ಲಿ ಪ್ರತಿಯೊಂದು ಇಲಾಖೆ ಅಧಿಕಾರಿಗಳು ಭಾಗವಹಿಸಬೇಕು. ಸಾರ್ವಜನಿಕರಿಗೆ ಆಯಾ ಇಲಾಖೆಗಳ ಯೋಜನೆಗಳ ಮಾಹಿತಿ ನೀಡಬೇಕು
ಎಂದು ಹೇಳಿದರು.
ಒಂದು ವರ್ಷದಿಂದ ಪ್ರಗತಿ ಕುಂಠಿತ: ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಅಭಿವೃದ್ಧಿ ಕಾರ್ಯ ಒಂದು ವರ್ಷದಿಂದ ಕುಂಠಿತವಾಗಿದೆ ಎಂಬ ಆರೋಪ ಕೇಳಿ ಬಂದಿದೆ ಎಂದು ಸಂಬಂಧಿಸಿದ ಕೆಆರ್‌ಡಿಇಎಲ್ ಎಂಜಿನಿಯರ್ ಲಕ್ಷ್ಮೀ ಅವರನ್ನು ತರಾಟೆಗೆ ತಗೆದುಕೊಂಡರು. ಅವರ ಮಾಹಿತಿಗೆ ಗ್ರಾಪಂ ಅಧ್ಯಕ್ಷರು ಧ್ವನಿಗೂಡಿಸಿದರು. ಎಂಜಿನಿಯರ ಲಕ್ಷ್ಮೀ ಈ ಬಗ್ಗೆ ಉತ್ತರಿಸಿ, ಗ್ರಾಪಂ ಪಿಡಿಒ ಅವರಿಗೆ ಒಂದು ವರ್ಷದಿಂದ ಕ್ರಿಯಾ ಯೋಜನೆ ತಯಾರಿಸುವಂತೆ ಸೂಚನೆ ನೀಡಲಾಗಿತ್ತು. ಆದರೂ ಯಾರು ನೀಡಿಲ್ಲ. ಈಗ ವಾರದ ಹಿಂದೆ ಕ್ರಿಯಾ ಯೋಜನೆ ನೀಡಿದ್ದಾರೆ. ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾಮಗಾರಿಗಳು ಪೂರ್ಣವಾಗಿಲ್ಲ: ಗ್ರಾಪಂ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗಾಗಿ ಟೆಂಡರ್ ಮೂಲಕ ಕೆಆರ್‌ಐಡಿಎಲ್ ಅಭಿಯಂತರಿಗೆ ವಹಿಸಿದ್ದರು. ಇಲ್ಲಿಯವರೆಗೂ ಕಾಮಗಾರಿಗಳ ಕೆಲಸ ಹಾಗೂ ಕಟ್ಟಡಗಳು ನಿರ್ಮಾಣವಾಗಿಲ್ಲ. ಈ ಬಗ್ಗೆ ಗಮನಹರಿಸಿ ಕೂಡಲೇ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಗಮನ ನೀಡಬೇಕಿದೆ. ಅಂಗನವಾಡಿ ಕೇಂದ್ರ, ರಸ್ತೆ ಅಭಿವೃದ್ಧಿ, ಬಡತನದ ಫಲಾನುಭಗಳಿಗೆ ವಸತಿ ಯೋಜನೆಯ ಹಣ ಬಿಡುಗಡೆ ಸೇರಿದಂತೆ ಹಲವು ಯೋಜನೆಗಳಿಗೆ ಸರ್ಕಾರದಿಂದ ಅನುದಾನ ನೀಡಿದ್ದಾರೆ. ಆದರೂ ಯಾವ ಕೆಲಸ ಪೂರ್ಣಗೊಳಿಸುತ್ತಿಲ್ಲ ಎಂದು ತಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಫಲಾನುಭವಿಗಳಿಗೆ ಯೋಜನೆ ತಲುಪಿಸಲು ಮುಂದಾಗಿ: ಸಮಸ್ಯೆಗಳನ್ನು ಆಲಿಸಿದ ಜಿಪಂ ಸಿಇಒ ಮಾತನಾಡಿ, ಸಾರ್ವಜನಿಕರ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸದೇ ತಪ್ಪು ಮಾಹಿತಿ ನೀಡುವ ಮೂಲಕ ಸಮಸ್ಯೆ ಹೆಚ್ಚಾಗಲು ಕಾರಣವಾಗುವ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಕೆ ಆಗಿವೆ. ಮುಂದೆ ಎಲ್ಲಾ ಸದಸ್ಯರ ಜತೆ ಸಭೆ ನಡೆಸಿ. ಪರಿಹಾರದ ಕಡೆ ಗಮನ ಹರಿಸಬೇಕು ಎಂದು ನೋಟಿಸ್ ನೀಡಲಾಗಿದೆ. ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿಲ್ಲ: ಜಿಪಂ ಅಧ್ಯಕ್ಷ ನಾಗರಾಜು ಮಾತನಾಡಿ, ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಜನಪ್ರತಿನಿಧಿಗಳ ಜತೆ ಮುಕ್ತವಾಗಿ ಚರ್ಚಿಸಿ, ತಾಲೂಕಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಬೇಕು. ಈ ಮೂಲಕ ನೂತನ ಯೋಜನೆಗಳನ್ನು ರೂಪಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕು. ಸರ್ಕಾರ ಬಡವರ ಪರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ದೂರುಗಳು ಸಲ್ಲಿಕೆಯಾಗಿವೆ. ಮುಂದೆ ಇಂತಹ ದೂರುಗಳು ಬರದಂತೆ ನೋಡಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಈ ವೇಳೆ ಜಿಪಂ ಉಪಾಧ್ಯಕ್ಷೆ ವೀಣಾಕುಮಾರಿ, ತಾಪಂ ಅಧ್ಯಕ್ಷ ಎಚ್. ರಾಜಣ್ಣ, ತಾಪಂ ಉಪಾಧ್ಯಕ್ಷೆ ಸಾಕಮಾದಮ್ಮ, ಜಿಪಂ ಸದಸ್ಯರಾದ ಪ್ರಸನ್ನಕುಮಾರ್, ಸುಗುಣ, ಪ್ರಭಾರ ಇಒ ಉಮೇಶ್ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಪಿಡಿಒ, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ರ್ಕಾರ ಬಡವರ ಪರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ದೂರುಗಳಿವೆ. ಮುಂದೆ ಇಂತಹ ದೂರುಗಳು ಬರದಂತೆ ನೋಡಿಕೊಳ್ಳಬೇಕಿದೆ.
ನಾಗರಾಜು, ಜಿಪಂ ಅಧ್ಯಕ್ಷ